ಚಳ್ಳಕೆರೆ
ಪ್ರಸ್ತುತ ನಾವುಗಳು ಆಧುನಿಕ ಯುಗದಲ್ಲಿ ಎಲ್ಲಾ ವಿಚಾರಗಳಿಗೂ ಮತ್ತು ಎಲ್ಲಾ ವಿಷಯಗಳನ್ನು ಅರಿಯಲು ಗಣಕಯಂತ್ರದ ಮೊರೆ ಹೋಗುತ್ತೇವೆ. ಗಣಕಯಂತ್ರ ಇಂದು ಹಲವಾರು ವಿಷಯವನ್ನು ತಿಳಿಸುವ ಸಾಧನವಾಗಿದೆ. ಆದರೆ, ಪ್ರತಿಯೊಬ್ಬರ ಬದುಕಿನ ಮೌಲ್ಯವನ್ನು ಜೀವನ ಸಂಕಷ್ಟಗಳನ್ನು ನಮ್ಮ ಪರಂಪರೆ ಮತ್ತು ಸಂಪ್ರದಾಯವನ್ನು ವಿಶ್ವಕ್ಕೆ ಎತ್ತಿ ತೋರಿಸುವ ಮಹರ್ಷಿ ಶ್ರೀವಾಲ್ಮೀಕಿಯವರ ಮಹಾನ್ ಸಾಧನೆಗಳನ್ನು ನಾವೆಲ್ಲರೂ ಪ್ರತಿನಿತ್ಯ ನೆನೆದು ಆರಾಧಿಸಬೇಕು ಎಂದು ವಾಲ್ಮೀಕಿ ಸಮುದಾಯದ ಯುವ ಮುಖಂಡ ಹಾಗೂ ತಳಕು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ತಿಳಿಸಿದರು.
ಅವರು, ಶನಿವಾರ ತಳಕು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ, ವಾಲ್ಮೀಕಿ ವೃತ್ತ ಹಾಗೂ ವಾಲ್ಮೀಕಿ ಯುವಕ ಸಂಘದ ನಾಮಫಲಕಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಈಗಾಗಲೇ ಜಗತ್ತಿಗೆ ತಿಳಿದಂತೆ ವಿಶ್ವಮಟ್ಟದ ದಾರ್ಶನಿಕ ಗ್ರಂಥವಾಗಿ ಮಹರ್ಷಿ ಶ್ರೀವಾಲ್ಮೀಕಿ ರಚಿಸಿದ ರಾಮಾಯಣ. ರಾಮಾಯಣದ ಕಥೆ ಮತ್ತು ಅದರಲ್ಲಿನ ಎಲ್ಲಾ ರೂಪಗಳು ಸಹ ನಮ್ಮ ಬದುಕಿಗೆ ದಾರಿದೀಪವಾಗುತ್ತವೆ. ವಾಲ್ಮೀಕಿಯವರ ಈ ಮಹಾನ್ ಗ್ರಂಥ ಸಮಾಜದ ಎಲ್ಲಾ ವರ್ಗದ ಜನರ ಮನದಲ್ಲಿ ಆಳಾವಾಗಿ ಬೇರೂರಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸೂರಮ್ಮಮಂಜುನಾಥ ಮಾತನಾಡಿ, ಮಹರ್ಷಿ ಶ್ರೀವಾಲ್ಮೀಕಿಯವರ ರಾಮಾಯಣ ಪ್ರಾರಂಭದಲ್ಲಿ ಹೆಚ್ಚು ಆಕರ್ಷಣಿಯವಾಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಇಂದು ಜಗತ್ತಿನ ಎಲ್ಲಾ ಸಮುದಾಯಗಳು ಈ ರಾಮಾಯಣವನ್ನು ತಮ್ಮೆಲ್ಲರ ಬದುಕಿನ ದಾರ್ಮಿಕ ಗ್ರಂಥವೆಂದು ಭಾವಿಸಿದೆ. ಅಂತಹ ವಿಶೇಷವಾಗಿ ಶಕ್ತಿ ಹಾಗೂ ಚೈತನ್ಯವನ್ನು ತುಂಬಿದ ಆ ಗ್ರಂಥದ ಸೃಷ್ಠಿಕರ್ತರಾದ ಮಹರ್ಷಿ ಶ್ರೀವಾಲ್ಕೀಕಿಯವರು ಎಲ್ಲರಿಗೂ ಪೂಜ್ಯರು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಲನಾಯಕ, ನೀಲಮ್ಮ, ಶಶಿಕಲಾ, ನಾಗರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ.ಮಂಜುನಾಥ, ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜು, ಬಿ.ಮಹಂತೇಶ್, ಮುಖಂಡರಾದ ಪಾತಪ್ಪ, ಮಲ್ಲೇಶ್, ಮಂಜುನಾಥ, ಸುರೇಶ್, ಮಾರಣ್ಣ, ರವಿಕುಮಾರ್, ಹೊಸಹಳ್ಳಿ ತಿಪ್ಫೇಸ್ವಾಮಿ, ವೀರೇಶ್, ಮನ್ನೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಶೋಭಾ, ಸಣ್ಣಸೂರನಾಯಕ, ಆಟೋ ತಿಪ್ಫೇಸ್ವಾಮಿ, ಲಿಂಗಾರೆಡ್ಡಿ, ಚೇತನ್‍ಕುಮಾರ್, ಸುರೇಶ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿಕಾಂತ್ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಪ್ರತಿಮೆ ಮೆರವಣಿಗೆ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ದಾರಿಯುದ್ದಕ್ಕೂ ಹಲವಾರು ಕಲಾತಂಡಗಳು, ಯುವಕರು ಕುಣಿತ ಗಮನಸೆಳೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ