ವಾಲ್ಮೀಕಿ ವಿಗ್ರಹ ಪ್ರತಿಷ್ಟಾಪನೆ

ಪಾವಗಡ :-

       ತಾಲ್ಲೂಕಿನಲ್ಲಿ ಹಿಂದುಳಿದ ಜನಾಂಗವೇ ಹೆಚ್ಚಿದ್ದು, ಅವರ ಅಭ್ಯುದಯ ಆಗಬೇಕಾದರೆ ಮತ್ತು ತಾಲ್ಲೂಕಿನ ಅಭಿವೃದ್ಧಿ ಕಾಣಬೇಕಾದರೆ ಶೀಘ್ರವೇ ಭದ್ರಾ ಮೇಲ್ದಂಡೆ ಯೋಜನೆಯ ನೀರು ಬರಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠಾಧ್ಯಕ್ಷರಾದ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ತಿಳಿಸಿದರು.

       ಸೋಮವಾರದಂದು ತಾಲ್ಲೂಕಿನ ಹೊಟ್ಟೆಬೊಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ವಿಗ್ರಹ ಪ್ರತಿಷ್ಟಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನಾಯಕ ಸಮುದಾಯ ಸೇರಿದಂತೆ ಹಿಂದುಳಿದವರೇ ಹೆಚ್ಚಾಗಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿ ಮತ್ತು ಜೀವನ ಉತ್ತಮವಾಗಬೇಕಾದರೆ ಸಂಸದ ಚಂದ್ರಪ್ಪ ಮತ್ತು ಮಂತ್ರಿಗಳ ವೆಂಕಟರಮಣಪ್ಪ ಹೆಚ್ಚು ಒತ್ತು ನೀಡಿ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ತರಬೇಕಿದೆ. ಈ ನಿಟ್ಟಿನಲ್ಲಿ ಜನತೆ ಅವರ ಮೇಲೆ ಒತ್ತಡ ಹೇರಬೇಕಾಗಿದೆ.

         ವಾಲ್ಮೀಕಿ ಜನಾಂಗಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸಬೇಕಿದೆ. ನಕಲಿ ಪ್ರಮಾಣಪತ್ರಗಳ ಹಾವಳಿ ತಡೆಯಬೇಕು. ಬಡ್ತಿ ಮೀಸಲಾಗಿ ಅನುಷ್ಟಾನಗೊಳ್ಳಬೇಕು. ಈ ದಿಸೆಯಲ್ಲಿ ಸಮುದಾಯದ ಹೋರಾಟ ಮತ್ತು ಒಗ್ಗಟ್ಟು ಅತ್ಯಗತ್ಯ. ಜನಾಂಗವು ಸಂವಿದಾನಾತ್ಮಕ ಸವಲತ್ತುಗಳನ್ನು ಪಡೆಯುವಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

         ಶಿಡ್ಲೆಕೋಣ ಮಹಾಸಂಸ್ಥಾನದ ಶ್ರೀ ಶ್ರೀ ವಾಲ್ಮೀಕಿ ಸಂಜಯಕುಮಾರ ಸ್ವಾಮಿಗಳು ಮಾತನಾಡಿ ರಾಜ್ಯದಲ್ಲಿ ಸುಮಾರು 60 ಲಕ್ಷ ಮತ್ತು ದೇಶದಲ್ಲಿ 9 ಕೋಟಿ ವಾಲ್ಮೀಕಿ ಜನಾಂಗ ಇದೆ. ಆದರೆ ಸಂಘಟನೆ ಸಮಸ್ಯೆ ಕಾಡುತ್ತಿದೆ. ಫಲವಾಗಿ ಇತರ ಸಮುದಾಯಗಳಂತೆ ಬೆಳೆಯುವಲ್ಲಿ ತೊಡಕಾಗುತ್ತಿದೆ. ಜಯಂತಿಗಳು ಕೇವಲ ಮೆರವಣಿಗೆ ಮತ್ತು ಸಭೆಗಳಿಗಷ್ಟೇ ಸೀಮಿತ ಆಗರಬಾರದು. ಇಡೀ ವಿಶ್ವಕ್ಕೆ ಜೀವನ ಸಾರ್ಥಕತೆಯನ್ನು ಕಲಿಸಿಕೊಟ್ಟ ವಾಲ್ಮೀಕಿ ಮಹರ್ಷಿಯ ಆದರ್ಶಗಳನ್ನು ರೂಡಿಸಿಕೊಂಡು ಉತ್ತಮ ಸಮಾಜವಾಗಿ ಬೆಳೆಯಬೇಕಾಗಿದೆ ಎಂದು ತಿಳಿಸಿದರು.

         ಸ್ಥಳೀಯ ಮುಖಂಡರಾದ ತಿಮ್ಮಾರೆಡ್ಡಿ ಮಾತನಾಡಿ ಇತರೆ ಸಮುದಾಯಗಳಂತೆ ವಾಲ್ಮೀಕಿ ಜನಾಂಗಕ್ಕೆ ಕುಲ ಕಸುಬು ಇಲ್ಲದಿರುವುದರಿಂದ ಅವರ ಆರ್ಥಿಕ ಸ್ಥಿತಿಗತಿಗಳು ಸುಧಾರಣೆ ಕಂಡಿಲ್ಲ. ಇಂದಿನ ದಿನಗಳಲ್ಲಿ ಅನೇಕ ವಿದ್ಯಾವಂತರು ಬುದ್ದಿವಂತರು ಈ ಸಮಾಜದಲ್ಲಿ ಕಂಡುಬರುತ್ತಿದ್ದಾರೆ. ಅವರೆಲ್ಲರ ಶ್ರಮ ಮತ್ತು ಮಾರ್ಗದರ್ಶನದಿಂದ ಸಮಾಜ ಪ್ರಗತಿ ಕಾಣಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಓಂಕಾರ ನಾಯಕ, ವಾಲ್ಮೀಕಿ ಜಾಗೃತ ವೇದಿಕೆಯ ಅಧ್ಯಕ್ಷ ಪಾಳೇಗಾರ ಲೋಕೇಶ್, ಉಪನ್ಯಾಸಕ ಮಾರಪ್ಪ, ರೈಲ್ವೆ ಇಲಾಖೆಯ ನಾಗರಾಜು, ತಿರುಮಲ ಕನ್ನಡಭವನದ ಶ್ರೀನಿವಾಸ ಮಾತನಾಡಿದರು.

         ಇದೇ ಸಂದರ್ಭದಲ್ಲಿ ಸಾಹಿತಿ ಡಾ. ಹೆಚ್.ಕೆ.ನರಸಿಂಹಮೂರ್ತಿಯವರ ವಾಲ್ಮೀಕಿ ಕಂಡ ರಾಮಾಯಣ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮುಖಂಡರಾದ ದೊಡ್ಡೇನಹಳ್ಳಿ ಮಾರಪ್ಪ, ಆರ್.ಸಿ.ಓಬಯ್ಯ, ಸುರೇಶ್, ಕ್ಯಾತಗಾನಹಳ್ಳಿ ಬಾಲರಾಜು, ರಂಗಸಮುದ್ರದ ತಿಪ್ಪೇಸ್ವಾಮಿ, ನಾಗಲಮಡಿಕೆ ಮಲ್ಲಿಕಾರ್ಜುನ, ತಿಮ್ಮಯ್ಯ, ಬೊಮ್ಮಯ್ಯ, ಲೋಕೇಶ, ಪಿಡಿಓ ಮಂಜುನಾಥ, ಸಹಕಾರಿ ಇಲಾಖೆಯ ರಾಮಲಿಂಗಪ್ಪ, ಗ್ರಾ.ಪಂ ಸದಸ್ಯ ಮದಕರಿ, ವಕೀಲ ನಾಗೇಂದ್ರಪ್ಪ ಇತರರು ಇದ್ದರು. ಕಾರ್ಯಕ್ರಮದ ಮುಂಚೆ ನೂರಾರು ವನಿತೆಯರು ಕಳಶಗಳನ್ನು ಹೊತ್ತು ಪುರಮೆರವಣಿಗೆ ನಡೆಸಿದರು ಮತ್ತು ಗುರುಗಳಿಗೆ ಪೂರ್ಣಕುಂಭ ಸ್ವಾಗತ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link