ತುಮಕೂರು:
ವಾರದ ಒಳಗೆ ಮಹಾನಗರ ಪಾಲಿಕೆ ಬಜೆಟ್ ಅಪ್ರೂವ್ ಮಾಡಿ, ಕನಿಷ್ಠ 70 ರಿಂದ 80 ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಹಾಹಾಕಾರ ತಪ್ಪಿಸಿ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಅವರು ಶನಿವಾರ ಮಹಾನಗರ ಪಾಲಿಕೆಯ ತುರ್ತು ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕ ಒಟ್ಟು 40 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಗುತ್ತಿಗೆದಾರ ಮನಸ್ಸಿಗೆ ಬಂದ ಹಾಗೆ ಎಲ್ಲೆಲ್ಲೋ ಕಸ ಸುರಿದಿದ್ದಾನೆ. ಮಳೆ ಬಂದಾಗ ಹೊಲಸೆಲ್ಲ ಮಳೆ ನೀರಿನ ಜೊತೆ ಬೆರೆತು, ಅಕ್ಕಪಕ್ಕದ ಹಳ್ಳಿಗಳ ಕೊಳವೆ ಬಾವಿಗಳಲ್ಲಿ ಹೊಲಸು ನೀರು ಬರುತ್ತಿದೆ. ತುರ್ತಾಗಿ ಛಾವಣಿ ಹಾಕಿಸಿ ಅದರ ಕೆಳಗೆ ಮಾತ್ರ ಕಸ ಸುರಿಯಬೇಕು. ಇದರ ಜೊತೆಗೆ ರಾತ್ರಿವೇಳೆ ಎಲ್ಲೆಂದರಲ್ಲಿಯೇ ಕಸ ಸುರಿಯುತ್ತಿದ್ದಾರೆಂದು ಕಸ ವಿಲೇವಾರಿ ಗುತ್ತಿಗೆದಾರನನ್ನು ದೂರಿದರು.
ಸದಸ್ಯರೊಬ್ಬರು ನೀರಿನ ಹಾಹಾಕಾರ ತಪ್ಪಿಸಲು ಇನ್ನು ಮುಂದೆ ಕಟ್ಟುವ ಕಟ್ಟಡಗಳಿಗೆ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸುವ ನಿಯಮ ಮಾಡಿ ಎಂದಾಗ, ಸಂಬಂಧಿಸಿದ ಅಧಿಕಾರಿ ಈಗಾಗಲೇ ಅದು ಜಾರಿಯಾಗಿದೆ. ಉಲ್ಲಂಘಿಸಿದರೆ ಅಕ್ರಮ ಕಟ್ಟಡ ಎಂದು ತೀರ್ಮಾನಿಸಲಾಗುವುದು ಎಂದರು.
ಮತ್ತೊಬ್ಬ ಸದಸ್ಯರು ನಮ್ಮ ವಾರ್ಡಿನಲ್ಲಿ 40 ಖಾಸಗಿ ಕೊಳವೆ ಬಾವಿಗಳಿವೆ. ಇವರುಗಳು ಪಾಲಿಕೆಯಿಂದ ಕೊಳವೆ ಬಾವಿ ಕೊರೆಸಲು ಅಡ್ಡಿ ಮಾಡಿ, ಟ್ಯಾಂಕರ್ ನೀರಿನಿಂದ ಹಣ ಲೂಟಿ ಮಾಡುತ್ತಿದ್ದಾರೆಂದು ದೂರಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಧಿಕಾರಿ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 680 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ 232 ಕೊಳವೆ ಬಾವಿಗಳು ಒಣಗಿದ್ದು, ಉಳಿದಂತೆ 448 ಕೊಳವೆ ಬಾವಿಗಳು ಬಳಕೆಯಲ್ಲಿವೆ ಎಂದರು.
ಸದಸ್ಯ ಸೈಯದ್ ನಯಾಜ್ ಮಾತನಾಡಿ ಅಕ್ರಮ ಕಟ್ಟಡ ಎಂದು ಹೇಗೆ ಹೇಳುವಿರಿ? ಅವರು ಮನೆ ಕಟ್ಟಲು ಅನುಮತಿ ನೀಡಿದವರು ಅಧಿಕಾರಿಗಳೇ ಹೊರತು ನಾವು ಕಾರ್ಪೋರೇಟರ್‍ಗಳಲ್ಲ. ಅವರು ಜೀವನ ಪೂರಾ ಡಬಲ್ ಟ್ಯಾಕ್ಸ್ ಕಟ್ಟಬೇಕೇ? ಇದು ಕೂಡದು. ತಕ್ಷಣ ಅವರಿಗೆ ಯುಜಿಡಿ ಮತ್ತು ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಒತ್ತಾಯಿಸಿದರಲ್ಲದೆ, ಕಸ ಸಂಗ್ರಹಿಸುವವರು ಬದುಕಿದ್ದರೆ ಭಿಕ್ಷೆ ಬೇಡಿ ತಿನ್ನುತ್ತೇವೆ ಎಂದು ಬಿಟ್ಟು ಹೋಗಿದ್ದಾರೆ. ಕಸದ ವಾಹನದಲ್ಲಿ ನಾವುಗಳು 5 ನಿಮಿಷ ಕೂರಲು ಸಾಧ್ಯವಿದೆಯೇ ಎಂಬುದನ್ನು ಯೋಚಿಸಬೇಕು ಎಂದರು.
ಮತ್ತೊಬ್ಬ ಮಹಿಳಾ ಸದಸ್ಯೆ 2 ತಿಂಗಳಿನಿಂದ ಕಸ ವಿಂಗಡಣೆ ಜಾರಿಗೆ ಬಂದು ಕಸ ಸಂಗ್ರಹಿಸುವವರು ಕಾಯಿಲೆ ಬೀಳುತ್ತಿದ್ದಾರೆ. ಅವರನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಪರಿಸರ ಎಲ್ಲಿ ಹೋಯಿತು ಎಂದವರು ಪ್ರಶ್ನಿಸಿದರು.
ಎಲ್ಲಾ ಸದಸ್ಯರೂ ಒಕ್ಕೊರಲಿನಿಂದ ಕಸ ವಿಲೇವಾರಿ ಗುತ್ತಿಗೆದಾರರನ್ನು ಬದಲಿಸಿ ಎಂದು ಒತ್ತಾಯಿಸಿದರು. ಅದಕ್ಕೆ ಆಯುಕ್ತರು ಎರಡು ಸಾರಿ ಟೆಂಡರ್ ಕರೆದರೂ ಬೇರಾರೂ ಬಿಡ್ ಮಾಡಿಲ್ಲ ಎಂದಾಗ, ಸದಸ್ಯರೆಲ್ಲ ಸುಳ್ಳು, ಸುಳ್ಳು, ಶಾಮೀಲು ಎಂದು ಕೂಗಿದರು.ಮತ್ತೊಬ್ಬ ಸದಸ್ಯರು ನಮ್ಮ ಜನ ಒಣ ಕಸ, ಹಸಿ ಕಸ ವಿಂಗಡಿಸಿಕೊಡುವುದಾದರೆ ಅವನ ಕೆಲಸವೇನು? ಅವನಿಗೆ ದಂಡ ಹಾಕಬೇಕು, ಜನ ವಿಂಗಡಿಸಿಕೊಟ್ಟ ಪ್ಲಾಸ್ಟಿಕ್ ಮಾರಿಕೊಂಡು ಅದರಲ್ಲೂ ಲಾಭ ಮಾಡಿಕೊಂಡಿದ್ದಾನೆಂದು ದೂರಿದರು.