ಬೆಂಗಳೂರು:
ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇರುವ ಅತಂತ್ರ ರಾಜಕೀಯ ಬೆಳವಣಿಗೆಯ ನಡುವೆಯೇ ಸಾರಿಗೆ ಇಲಾಖೆಯಲ್ಲಿ ಸಚಿವರು ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಸಾರಿಗೆ ಇಲಾಖ ಒಂದರಲ್ಲಿಯೇ ಕಳೆದೆರಡು ವಾರಗಳಿಂದ ಸರಿಸುಮಾರು 250ಕ್ಕೂ ಅಧಿಕ ವರ್ಗಾವಣೆಗಳಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ .
ಸುಧೀರ್ಘ ಕಾಲದಿಂದ ವರ್ಗಾವಣೆ ಪ್ರಕ್ರಿಯೆಯನ್ನೇ ನಡೆಸದ ಸಾರಿಗೆ ಇಲಾಖೆ, ಕಳೆದ ವರ್ಷವಷ್ಟೇ ಕೌನ್ಸೆಲಿಂಗ್ ಮಾಡಿ ವರ್ಗಾವಣೆ ನಡೆಸುವ ಇಂಗಿತ ವ್ಯಕ್ತ ಪಡಿಸಿತ್ತು ಅದರಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಅಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಉನ್ನತ ಅಧಿಕಾರಿಗಳು ತಯಾರಿ ಕೂಡ ನಡೆಸಿದ್ದರು. ಇದರ ಮೊದಲ ಭಾಗವಾಗಿ ಸುಮಾರು ಒಂದು ಸಾವಿರ ನೌಕರರು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಆಯ್ಕೆಯಾಗಿದ್ದರು.
ಇಲಾಖಾ ಅಧಿಕಾರಿಗಳು ಮತ್ತು ಸಚಿವರ ನಡುವಿನ ಶೀತಲ ಸಮರ ಅವರ ವರ್ಗಾವಣೆಯ ಮೂಲಕ ಸಮಾಪ್ತಿಯಾಗಿತ್ತು. ಜತೆಗೆ ಅಂದಿನ ವರ್ಗಾವಣೆ ಪ್ರಕ್ರಿಯೆ ಕೂಡ ಮೂಲೆಗುಂಪು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.ಮತ್ತು ಕೊನೆಯದಾಗಿ ಇಲಾಖೆಯಲ್ಲಿ ವರ್ಗಾವಣೆ ನಡೆದದ್ದು 2008ರಲ್ಲಿ. ಅದಾದ ನಂತರದಲ್ಲಿ ಇಲಾಖೆ ಮೂಲಕ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರಕಟಣೆಯಾಗಲಿ ಅಥವಾ ವರ್ಗಾವಣೆಯಾಗಲಿ ಮಾಡಿಲ್ಲ.ತರಾತುರಿಯಲ್ಲಿ ವರ್ಗಾವಣೆಯಾಗಿರುವ 250 ಸಿಬಂದಿಯ ಪೈಕಿ ಹೆಚ್ಚಿನವರು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ್ದಾರೆ ಎಂಬುದು ಗಮನಾರ್ಹ ಮತ್ತು ಇದರಲ್ಲಿ ಸಚಿವ ಬಂಡೆಪ್ಪ ಕಾಶೆಂಪುರ ಅವರ ಶಿಫಾರಸುಗಳೇ ಅಧಿಕ ಎಂದು ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ.