ತುಮಕೂರು:
ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಮೈತ್ರಿಯಲ್ಲಿ ಉಂಟಾಗಿದ್ದ ಆತಂಕ ನಿವಾರಣೆಯಾದಂತಾಗಿದೆ.
ಮುದ್ದಹನುಮೇಗೌಡರ ನಾಮಪತ್ರ ವಾಪಸ್ ತೆಗೆಸಲು ಕಳೆದ ಮೂರು ದಿನಗಳಿಂದ ಪ್ರಯತ್ನಗಳು ತೀವ್ರಗೊಂಡಿದ್ದವು. ಗುರುವಾರ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಮಾತನಾಡಿ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ನಾಮಪತ್ರ ವಾಪಸ್ ಪಡೆಯಲು ಸೂಚಿಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇರ್ಶವರ್ ಅವರು ಸಹ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಿದ್ದರು. ಇದೆಲ್ಲದರ ಪರಿಣಾಮವಾಗಿ ಗುರುವಾರದಂದೇ ಮುದ್ದಹನುಮೇಗೌಡರ ಸಿಟ್ಟು ಕಡಿಮೆಯಾಗಿತ್ತು.
ನಾಮಪತ್ರ ವಾಪಸ್ ಪಡೆಯುವ ಶುಕ್ರವಾರದಂದು ಮುದ್ದಹನುಮೇಗೌಡರು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ವಾಪಸ್ ಪಡೆಯುವರು ಎಂದೇ ಎಲ್ಲರ ನಿರೀಕ್ಷೆಯೂ ಆಗಿತ್ತು. ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮುಖಂಡರುಗಳ ಮತ್ತೊಂದು ಸುತ್ತಿನ ಮಾತುಕತೆ ನಡೆಯಿತು.
ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರೆ ನಾಯಕರು ಮುದ್ದಹನುಮೇಗೌಡರ ಜೊತೆಗೆ ಮಾತನಾಡಿ ರಾಜಕೀಯ ಸ್ಥಿತಿಗತಿಗಳ ಬಗ್ಗೆ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಸೀಟು ಹಂಚಿಕೆಯಾದಾಗ ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ಸಂದರ್ಭದಲ್ಲಿ ನನಗೂ ಆತಂಕ ಆಗಿತ್ತು. 2014 ರಿಂದ ಇಲ್ಲಿಯವರೆಗೆ ಎಸ್.ಪಿ.ಮುದ್ದಹನುಮೇಗೌಡರು ಜಿಲ್ಲೆಯಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆದ್ದು ಬರುವ ವಿಶ್ವಾಸವಿತ್ತು. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ ಪಕ್ಷದ ಮುಖಂಡರುಗಳ ಮನವೊಲಿಕೆಯಿಂದಾಗಿ ವಾಪಸ್ ಪಡೆಯುತ್ತಿದ್ದಾರೆ ಎಂದರು.
ಸ್ವಾಭಾವಿಕವಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾಮಪತ್ರ ಹಾಕಬೇಕಾಗುತ್ತದೆ. ಇದಾದ ನಂತರ ಏಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ರಾಹುಲ್ ಗಾಂಧಿ ಅವರು ಮುದ್ದಹನುಮೇಗೌಡರನ್ನು ಮನವೊಲಿಸುವಂತೆ ಸೂಚಿಸಿದ್ದರು. ರಾಹುಲ್ ಗಾಂಧಿ ದೃಷ್ಟಿಯಿಂದ ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಲಾಯಿತು. ಮುಂದಿನ ರಾಜಕೀಯ ನಡೆಯನ್ನು ನಂತರ ತೀರ್ಮಾನ ಮಾಡೋಣ ಎಂದು ಹೇಳಲಾಗಿದೆ ಎಂದು ತಿಳಿಸಿದರು.
ಮುದ್ದಹನುಮೇಗೌಡ ಅವರ ಪರವಾಗಿ ರಾಯಸಂದ್ರ ರವಿಕುಮಾರ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದಾಗಿ ದೋಸ್ತಿಗಳಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ. ದೋಸ್ತಿ ಪಕ್ಷಗಳ ಸರ್ವಸಮ್ಮತ ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡರ ಹಾದಿ ಈಗ ಸುಗಮವಾದಂತಾಗಿದೆ.
ಕೆ.ಎನ್.ರಾಜಣ್ಣ ನಾಮಪತ್ರ ವಾಪಸ್: ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸಿದ ದಿನದಂದೇ ತಾವೂ ನಾಮಪತ್ರ ಹಾಕಿದ್ದ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದರು. ಜೆಡಿಎಸ್‍ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೆ.ಎನ್.ರಾಜಣ್ಣ ಮುದ್ದಹನುಮೇಗೌಡರ ಜೊತೆ ಸೇರಿ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದರು.
ಅಲ್ಲದೆ, ತುಮಕೂರಿನಿಂದ ಸ್ಪರ್ಧಿಸುತ್ತಿರುವ ಮೈತ್ರಿ ಅಭ್ಯರ್ಥಿಯ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಆದರೆ ಬಿಜೆಪಿಯನ್ನು ಸೋಲಿಸಬೇಕು ಎನ್ನುವ ಕಾಂಗ್ರೆಸ್ ವರಿಷ್ಠರ ಸೂಚನೆ ಮತ್ತು ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ವಾಪಸ್ ಪಡೆಯುತ್ತಿರುವುದಾಗಿ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡ್ತೇವೆ
ಮುದ್ದಹನುಮೇಗೌಡರ ಜೊತೆ ರಾಹುಲ್ ಗಾಂಧಿ ಅವರು ದೂರವಾಣಿಯ ಮೂಲಕ ಮಾತನಾಡಿದ್ದಾರೆ. ಮುಂದೆ ಹೆಚ್ಚಿನ ಜವಾಬ್ದಾರಿ ವಹಿಸುವ ಭರವಸೆ ಇದೆ. ನಾನು ಎಸ್.ಪಿ.ಮುದ್ದಹನುಮೇಗೌಡರ ಬೆಂಬಲಕ್ಕೆ ನಿಂತಿದ್ದೆ. ಹಾಗಾಗಿ ಅವರ ಜೊತೆ ನಾನೂ ಸಹ ನಾಮಪತ್ರ ಸಲ್ಲಿಸಿದ್ದೆ. ಇದೀಗ ಮುದ್ದಹನುಮೇಗೌಡರು ಅವರ ಪ್ರತಿನಿಧಿಯಾದ ರಾಯಸಂದ್ರ ರವಿಕುಮಾರ್ ಮೂಲಕ ದಾಖಲೆಗಳನ್ನು ಕಳುಹಿಸಿಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದಾರೆ. ಹೀಗಾಗಿ ನಾನೂ ಸಹ ನಾಮಪತ್ರ ವಾಪಸ್ ಪಡೆದಿದ್ದೇನೆ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ಸೂಚನೆಯಂತೆ ನಾವು ಕೆಲ್ಸ ಮಾಡ್ತೇವೆ.