ಮೇ11ರಿಂದ ವಾಸವಿ ಜಯಂತಿ ..!!

ತುಮಕೂರು

      ನಗರದ ಚಿಕ್ಕಪೇಟೆಯಲ್ಲಿರುವ ವಾಸವಿ ಅಮೃತ್ ಮಹಲ್‍ನಲ್ಲಿ ಮೇ.11ರಿಂದ ಮೇ.15ರ ವರೆಗೆ 50ನೇ ವರ್ಷದ ವಾಸವಿ ಜಯಂತಿ ಆಚರಣೆಯನ್ನು ಏರ್ಪಡಿಸಲಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಜಿ.ಕೆ.ಲೋಕೇಶ್ ತಿಳಿಸಿದರು.

       ನಗರದ ವಾಸವಿ ಅಮೃತ್ ಮಹಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ.11ರಿಂದ 15ರ ವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮ ಹವನಗಳು, ಐಕ್ಯತಾ ಭವ್ಯ ಮೆರವಣಿಗೆ ನಡೆಯಲಿದ್ದು, ಎಲ್ಲಾ ಸಮಾಜದ ಬಾಂಧವರು ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

      ಮೇ.11ರಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತ, ಸುಮಂಗಲಿಯವರಿಂದ ಗಂಗೆ ತರುವುದು, ಕಳಸ ಸ್ಥಾಪನೆ, ಸ್ವಸ್ತಿ ಪುಣ್ಯಾಹ, ಮಹಾಸಂಕಲ್ಪ, ಕುಲದೇವಿ ವಾಸವಿ ಮಾತೆ ಹಾಗೂ ಪರಿಸರ ದೇವರುಗಳಿಗೆ ಅಭಿಷೇಕ, ಪೂಜಾದಿಗಳು ನೆರವೇರಲಿವೆ. ಸಂಜೆ 6 ಗಂಟೆಗೆ ಸುದರ್ಶನ ಮಂಡಲ ಪೂಜಾ, ಮಹಾ ಸುದರ್ಶನ ಸಮಾರಂಭ ನಡೆಯಲಿದೆ. ರಾತ್ರಿ 7 ಗಂಟೆಗೆ ಉತ್ಸವ ಸಮಿತಿ ವಾಸವಿ ಜಯಂತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ಸೌಮಾಂಗಲ್ಯ ಪ್ರದಾಯಿನಿ ವಾಸವಿಗೆ ಸುದರ್ಶನ ಅಲಂಕಾರ ಮಾಡಲಾಗುವುದು.

      ಮೇ.12ರಂದು ಮಧ್ಯಾಹ್ನ ಲೋಕಕಲ್ಯಾಣಾರ್ಥ ಚಂಡಿ ಹೋಮ ನಡೆಯಲಿದೆ. ಅಂದು ವಾಸವಿ ಮಾತೆಗೆ ಚಂಡಿ ಅಲಂಕಾರ ಮಾಡಲಾಗುವುದು. ಮೇ.13ರಂದು ಸೋಮವಾರ ಸಂಜೆ 6.30ರಿಂದ ಹಯಗ್ರೀವ ಹೋಮ ಮತ್ತು ಶಾರದ ಪೂಜೆ ನಡೆಯಲಿದ್ದು, ಅಂದು ಶಕ್ತಿ ಸ್ವರೂಪಿಣಿ ವಾಸವಿಗೆ ಶಾರದ ಅಲಂಕಾರ ಮಾಡಲಾಗುವುದು. ಮೇ.14ರಂದು ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಾಸವಿ ಜಯಂತಿ ನಡೆಯಲಿದೆ. ಅಂದು ಸುಮಂಗಲಿಯವರಿಂದ ಆರತಿ, ವಾಸವಿ ತುಲಾಭಾರ ನಡೆಸಲಾಗುವುದು. ಮಂಗಳವಾರದಂದು ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುವುದು. ವಾಸವಿ ಮಾತೆಗೆ ವಿವಿಧ ಪುಷ್ಪಾಲಂಕಾರ ಮಾಡಲಾಗುವುದು.

       ಅಂದು ಸಂಜೆ ಮಂಗಳವಾದ್ಯ, ಡೊಳ್ಳು ಕುಣಿತ, ಚಂಡೇವಾದ್ಯ, ಭಜನೆ, ಆಕರ್ಷಕ ಬಾಣ ಬಿರುಸು ಪ್ರದರ್ಶನ, ವಿದ್ಯುತ್ ದೀಪಾಲಂಕೃತ, ಪುಷ್ಪಾಲಂಕೃತ ಮಂಟಪದಲ್ಲಿ ವಾಸವಿ ಮಾತೆಯ ರಾಜ ಬೀದಿ ಉತ್ಸವ ನಡೆಯಲಿದೆ. ಮೇ.15ರಂದು ಮಧ್ಯಾಹ್ನ ಸೌಮಾಂಗಲ್ಯ ಸಂಪತ್ಪ್ರದಾಯಿನಿ ಹರಿದ್ರಾಗೌರಿ ವ್ರತವನ್ನು ಆಚರಣೆ ಮಾಡಲಾಗುವುದು. ಸಂಜೆ 7 ಗಂಟೆಗೆ ವಾಸವಿ ಜಯಂತಿ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ.

     ಮೇ.17ರಂದು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶ್ರೀ ನರಸಿಂಹ ಜಯಂತಿ, ಲಕ್ಷ್ಮೀ ನರಸಿಂಹಸ್ವಾಮಿಯ ಕಲ್ಯಾಣೋತ್ಸವ ಜರುಗಲಿದೆ ಎಂದು ಲೋಕೇಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಗುರುಪ್ರಸಾದ್, ಎನ್.ಕಾರ್ತಿಕ್, ಗೌರವ ಕಾರ್ಯದರ್ಶಿ ಎಂ.ಕೆ.ಈಶ್ವರ್, ಖಜಾಂಚಿ ನವೀನ್, ಸಹಕಾರ್ಯದರ್ಶಿ ವಿ.ಎಸ್.ಪ್ರವೀಣ್, ಸಂಘಟನಾ ಕಾರ್ಯದರ್ಶಿ ಡಿ.ಎಲ್.ಲಕ್ಷ್ಮೀಶ, ಸಿ.ಆರ್.ರಾಘವೇಂದ್ರ, ನಿರ್ದೇಶಕರಾದ ಟಿ.ಪಿ.ವಿನಯ್‍ಶಂಕರ್, ಕೆ.ಎಸ್.ರಾಘವೇಂದ್ರ, ಆರ್.ಎಸ್.ನವೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link