ತುಮಕೂರು:
ರಾಜಕೀಯ ಜೀವನದಲ್ಲಿ ವೈಯಕ್ತಿಕ ಟೀಕೆ ಮಾಡುವ ಕೆಳಮಟ್ಟದ ಸಂಸ್ಕೃತಿ ಬಿಜೆಪಿಯವರದ್ದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ವ್ಯಂಗ್ಯವಾಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲೆಲ್ಲಾ ಅನಂತಕುಮಾರ್ ಹೆಗಡೆ ವೈಯಕ್ತಿಕ ಟೀಕಾಪ್ರಹಾರ, ಕೋಮ ಗಲಭೆ ಎಬ್ಬಿಸುತ್ತಿದ್ದರು. ಈಗ ಅದ್ಯಾರೋ ತೇಜಸ್ವಿ ಸೂರ್ಯ ಹುಟ್ಟಿದ್ದಾನೆ. ಇವರದ್ದೂ ಇದೇ ಸಂಸ್ಕಾರ ಎಂದು ಟೀಕಿಸಿದರು.
ಆರ್.ಎಸ್‌ಎಸ್ ಅಡಿಪಾಯದಿಂದ ಬಂದ ಬಿಜೆಪಿಗೆ ದೇಶದ ಅಭಿವೃದ್ಧಿ ಲೆಕ್ಕವೇ ಇಲ್ಲ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡಿದ ದೇಶದ ಮೇಲೆ ನಿಂತು ಮಾತನಾಡುತ್ತಿದ್ದಾರೆ.ಆರ್ಥಿಕ ಸಮೃದ್ಧತೆ ಮಾಡಿದ್ದರೆ ಮೋದಿ ನೋಟು ಅಮಾನ್ಯೀಕರಣ ಮಾಡಿ ಆರ್ಥಿಕ ಮಟ್ಟ ಕುಸಿಯುವಂತೆ ಮಾಡಿದರು. ಜಿಎಸ್‌ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದರ್ಥ. ಇವರ ಪ್ರತಿ ಯೋಜನೆಗಳು ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ವಾಗ್ದಾಳಿ ನಡೆಸಿದರು, ನರೇಂದ್ರ ಮೋದಿಗೆ ಮತಹಾಕಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜಪ್ಪ ಹೇಳುತ್ತಿದ್ದಾರೆ, ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದಿದ್ದಾಗ ಮತ್ತೊಬ್ಬರ ಹೆಸರಿನಲ್ಲಿ ಮತ ಕೇಳುವ ದುಸ್ಥಿತಿ ಎದುರಾಗುತ್ತದೆ, ಹೇಳಲು ಒಂದು ಯೋಜನೆಯನ್ನೂ ಮಾಡದ ಅವರು, ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಅಂದರೆ ಯಾವ ಮಟ್ಟಕ್ಕೆ ಬಿಜೆಪಿ ಇಳಿದಿದೆ ಎಂದು ತಿಳಿಯುತ್ತೆ.
ಯಾವ ರೀತಿ ಮಾತನಾಡಬೇಕು ಎಂದು ಬಿಜೆಪಿ ಕಲಿಯಬೇಕಿದೆ ಎಂದರು.