ವೇದಾವತಿಯಲ್ಲಿ ಅಕ್ರಮ ಮರಳುಗಾರಿಕೆ : ಕಡಿವಾಣ ಹಾಕದಿದ್ದರೆ ಉಪವಾಸ : ಗೂಳಿಹಟ್ಟಿ

ಚಿತ್ರದುರ್ಗ:

       ಹೊಸದುರ್ಗ ತಾಲೂಕಿನ ವೇದಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮೇ. 15, 16 ರಂದು ವೇದಾವತಿ ನದಿ ಉಳಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಕೊರಟಿಕೆರೆ ಗ್ರಾಮದಿಂದ ಪಾದಯಾತ್ರೆ ನಡೆಸಲಾಗುವುದೆಂದು ಹೊಸದುರ್ಗ ಶಾಸಕ ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

       ಅಕ್ರಮ ಮರಳು ಗಣಿಗಾರಿಕೆಯನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ ನಂತರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೊಸದುರ್ಗ ತಾಲೂಕಿನ ಕೊರಟಿಕೆರೆ ಗ್ರಾಮದಿಂದ ವೇದಾವತಿ ನದಿ ಮೂಲಕ ಬೇವಿನಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುವುದು. ಮೂರನೆ ದಿನ ಹೊಸದುರ್ಗ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಅಕ್ರಮ ಮರಳುಗಾರಿಕೆ ನಿಲ್ಲಿಸುವಂತೆ ಮನವಿ ನೀಡುತ್ತೇವೆ. ಮೂರು ಹಂತದ ಹೋರಾಟಕ್ಕೆ ಫಲ ಸಿಗದಿದ್ದರೆ ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಗೂಳಿಹಟ್ಟಿ ಡಿ.ಶೇಖರ್ ಸರ್ಕಾರವನ್ನು ಎಚ್ಚರಿಸಿದರು.

       ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲವಿರುವುದರಿಂದ ಕುಡಿಯುವ ನೀರಿಗೆ ಅಭಾವವಿದೆ. ಚಳ್ಳಕೆರೆ ತಾಲೂಕಿನಲ್ಲಿ ಮೇವು ನೀರಿಲ್ಲದೆ ದೇವರ ಎತ್ತುಗಳು ಸಾಯುತ್ತಿವೆ. ಹೊಸದುರ್ಗ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಇನ್ನೂರು ಬೋರ್‍ವೆಲ್‍ಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಇದಕ್ಕೆ ವೇದಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದೇ ಕಾರಣ ಎಂದು ಆಪಾದಿಸಿದ ಗೂಳಿಹಟ್ಟಿ ಡಿ.ಶೇಖರ್ ಆರು ಬ್ಲಾಕ್ ಮರಳನ್ನು ಸರ್ಕಾರವೇ ಹರಾಜು ಹಾಕಿರುವುದು ಕಾನೂನು ಬಾಹಿರ. ಮಂಗಳೂರು, ಕೇರಳ, ಹಾವೇರಿಯವರು ಇಲ್ಲಿ ಬಂದು ಮರಳು ಹರಾಜಿಗೆ ಕೈಹಾಕಿ ವೇದಾವತಿ ನದಿಯ ಒಡಲನ್ನು ಬರಿದು ಮಾಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗಿವೆ. ಅಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರ ಕುಮ್ಮಕ್ಕಿದೆ ಎಂದು ಕಿಡಿಕಾರಿದರು.

        ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವವರು ಏಳುನೂರರಿಂದ ಒಂದು ಸಾವಿರದವರೆಗೆ ಹರಾಜು ಕೂಗುತ್ತಿದ್ದಾರೆ. ನಿಯಮದ ಪ್ರಕಾರ ಒಂದುವರೆ ಮೀಟರ್‍ನಷ್ಟು ಆಳ ಮಾತ್ರ ತೆಗೆಯಬೇಕು. ಇದ್ಯಾವುದನ್ನು ಪಾಲಿಸದ ಹರಾಜುದಾರರು ಇಪ್ಪತ್ತು ಮೂವತ್ತು ಅಡಿ ಆಳ ತೆಗೆಯುತ್ತಿದ್ದಾರೆ. ಇಂತಹ ಅಕ್ರಮವನ್ನು ಪ್ರಶ್ನಿಸುವ ರೈತರು ಅಮಾಯಕರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಕೇಸು ಹಾಕುವುದಾಗಿ ಬೆದರಿಸುತ್ತಿದ್ದಾರೆ.

       ಬೇರೆ ಊರಿನ ಗೂಂಡಾಗಳು ಹೊಸದುರ್ಗದಲ್ಲಿ ಬಂದು ಸೇರಿಕೊಂಡಿದ್ದಾರೆ. ಜಿಲ್ಲಾಡಳಿತ ಕಂಡು ಕಾಣದಂತೆ ಮೌನವಹಿಸಿದೆ. ಪೊಲೀಸರು ಅಮಾಯಕರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವಂತೆ ಕಳೆದ ಅಧಿವೇಶನದಲ್ಲಿಯೇ ಪ್ರಶ್ನಿಸಿದ್ದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಮರಳಿನ ಸಮಸ್ಯೆಯನ್ನು ಬಗೆಹರಿಸಲು ತಯಾರಿಲ್ಲ. ವೇದಾವತಿ ನದಿ ನೀರಿಲ್ಲದೆ ಬರಿದಾಗಿದೆ.

        ಹೊಸದುರ್ಗ ತಾಲೂಕಿನ ಒಂದೊಂದು ಹಳ್ಳಿಯಲ್ಲಿಯೂ ಐದಾರು ಬೋರ್ ಕೊರೆಸಲಾಗಿದೆ. ಎಂಟುನೂರರಿಂದ ಸಾವಿರ ಅಡಿವೆರೆಗೆ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ. ವೇದಾವತಿ ನದಿಯಲ್ಲಿನ ಮರಳನ್ನು ಬಗೆಯುತ್ತಿರುವುದೇ ನೀರಿನ ಸಮಸ್ಯೆ ಹೆಚ್ಚಾಗಲು ಕಾರಣ. ಸ್ಟಾಕ್‍ಯಾರ್ಡ್‍ಗೆ ಎನ್.ಓ.ಸಿ.ತೆಗೆದುಕೊಂಡಿಲ್ಲ. ಕನ್ವರ್ವಷನ್ ಆಗಿಲ್ಲ. ರಸ್ತೆಗಳು ಹಾಳಾಗಿವೆ. ಅಕ್ರಮ ಮರಳುಗಾರಿಕೆ ನಡೆಯುತ್ತಿರು ವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಹೊಸದುರ್ಗ ತಾಲೂಕಿನಲ್ಲಿ ಗೂಂಡಾಗಳು ಬೀಡು ಬಿಟ್ಟಿದ್ದಾರೆ. ಅದಕ್ಕಾಗಿ ಅಕ್ರಮ ಮರಳುಗಾರಿಕೆ ವಿರೋಧಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ರೈತರು, ವಿವಿಧ ಸಂಘ ಸಂಸ್ಥೆಗಳವರು, ಮಹಿಳೆಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೂಳಿಹಟ್ಟಿ ಡಿ.ಶೇಖರ್ ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap