ವೇದಾವತಿ ನದಿಗೆ 0.25 ಟಿಎಂಸಿ ನೀರು ಬಿಡಲು ಸಚಿವರ ಒಪ್ಪಿಗೆ : ರೈತರಲ್ಲಿ ಸಂತಸ

ವೇದಾವತಿಗೆ ನೀರು : ಶಾಸಕರ ಶ್ರಮ ಸಾರ್ಥಕ

ಚಳ್ಳಕೆರೆ

    ತಾಲ್ಲೂಕಿನ ಗಡಿಭಾಗದಲ್ಲಿರುವ ವೇದಾವತಿ ನದಿಯಲ್ಲಿ ನೀರು ಹರಿಸುವ ಮೂಲಕ ಆ ಭಾಗದ ಬ್ಯಾರೇಜ್ ಹಾಗೂ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಿರಿಯೂರು ವಿವಿ ಸಾಗರದಿಂದ 0.25 ಟಿಎಂಸಿ ನೀರನ್ನು ವೇದಾವತಿ ನದಿಗೆ ಹರಿಬಿಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ಅವರು, ಶನಿವಾರ ಮಧ್ಯಾಹ್ನ ಶಾಸಕರ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ನಾನು ಈ ಹಿಂದೆ 9 ಮಾರ್ಚ್ 2015ರಲ್ಲೇ ಸರ್ಕಾರಕ್ಕೆ ಮನವಿ ಮಾಡಿ ಈ ಭಾಗದ ಜನರ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿವಿ ಸಾಗರರಿಂದ ವೇದಾವತಿ ನದಿಗೆ ನೀರು ಹರಿಸುವಂತೆ ಮನವಿ ಮಾಡಿದ್ದು, ಪ್ರಸ್ತುತ ಸ್ಥಿತಿಯಲ್ಲಿ ನನ್ನ ಮನವಿಗೆ ಸರ್ಕಾರ ಪುರಸ್ಕರಿಸಿದ್ದು, ಬೃಹತ್ ಮತ್ತು ಮದ್ಯಮ ನೀರಾವರಿ, ಜಲಸಂಪನ್ಮೂಲ ಸಚಿವ ರಮೇಶ್ ಲ ಜಾರಕಿಹೊಳಿ ಈ ಬಗ್ಗೆ ಸ್ವಷ್ಷ ನಿರ್ದೇಶನ ನೀಡಿದ್ಧಾರೆಂದು ತಿಳಿಸಿದರು.

   ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ನಾನು ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಗಮನ ಸೆಳೆಯುವ ಸೂಚನೆ ನನ್ನ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇದನ್ನು ಗಮನಿಸಿದ ಜಲಸಂಪನ್ಮೂಲ ಸಚಿವರು ಅಧಿವೇಶನದಲ್ಲೇ ನನಗೆ ಲಿಖಿತ ಮೂಲಕ ಉತ್ತರ ನೀಡಿ ನಿಮ್ಮ ಮನವಿಯನ್ನು ಪುರಸ್ಕರಿಸಿದ್ದು, ವೇದಾವತಿ ನದಿಗೆ ವಿವಿ ಸಾಗರದಿಂದ 0.25 ಟಿಎಂಸಿ ನೀರನ್ನು ನದಿಯ ಮೂಲಕವೇ ಹರಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.

  ಪ್ರಸ್ತುತ ವಿವಿ ಸಾಗರದಲ್ಲಿ ಇರುವ ನೀರಿನ ಪ್ರಮಾಣ ಹೆಚ್ಚಿದ್ದು, ಈಗ ನೀರು ಹರಿದುಬಿಡಲು ಯಾವುದೇ ಸಮಸ್ಯೆ ಇಲ್ಲ. ವಿಶೇಷವಾಗಿ ಬೇಸಿಗೆ ಕಾಲ ಸಮೀಪಿಸಿದ್ದು, ಚಳ್ಳಕೆರೆ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಸರ್ಕಾರ ಎಲ್ಲಾ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಲಾಗುವುದು. ವಿವಿ ಸಾಗರದಿಂದ ವೇದಾವತಿಗೆ ಸುಮಾರು 36 ಕಿ.ಮೀ ನದಿಯ ಮೂಲಕವೇ ನೀರು ಹರಿಸುವಂತೆ ನಿರ್ದೇಶನ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ಜಾಗ್ರತೆ ವಹಿಸುತ್ತದೆ ಎಂದಿದ್ಧಾರೆ.

ಶಾಸಕರ ಸಂತಸ

    ಅಧಿವೇಶನದಲ್ಲಿ ನನ್ನ ಗಮನ ಸೆಳೆದ ವಿಷಯಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಲ ಜಾರಕಿಹೊಳೆಯವರಿಗೆ ನಾನು ಕ್ಷೇತ್ರದ ಜನರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆಂದು ತಮ್ಮ ಸಂತಸ ವ್ಯಕ್ತಪಡಿಸಿದ ಶಾಸಕ ರಘುಮೂರ್ತಿ ವೇದಾವತಿ ನದಿ ಪಾತ್ರದಲ್ಲಿ ನೀರು ಹರಿಸುವ ವಿಚಾರದಲ್ಲಿ ನಾನು ಪ್ರಾರಂಭದಿಂದಲೂ ಕಾರ್ಯಪ್ರವೃತ್ತನಾಗಿದ್ದೇನೆ. ಆದರೆ, ಸರ್ಕಾರ ಕೆಲವು ಸಂದರ್ಭಗಳಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದು ಸ್ವಾಭಾವಿಕ.

    ಈ ವಿಚಾರದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಜನರ ಚಿಂತನೆಗೆ ಕಾರಣವಾಗಿದೆ. ಆದರೆ, ಈಗ ಎಲ್ಲಾ ಸದಸ್ಯೆಗಳು ಬಗೆಹರಿದಿದ್ದು ಬರುವ ಎಂಟ್ಹತ್ತು ದಿನಗಳಲ್ಲಿ ವಿವಿ ಸಾಗರದಿಂದ ವೇದಾವತಿಗೆ ನೀರು ಹರಿಯಲಿದ್ದು ಆ ಭಾಗದ ಚೌಳೂರು, ಪರಶುರಾಮಪುರ, ಬೊಂಬೇರಹಳ್ಳಿ ಬ್ಯಾರೇಜ್‍ಗಳಿಗೆ ನೀರು ಹರಿದುಬರಲಿದೆ. ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದಿದ್ಧಾರೆ.

     ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡ ಟಿ.ಪ್ರಭುದೇವ್, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಮಲ್ಲಿಕಾರ್ಜುನ, ಪ್ರಕಾಶ್, ಕೆ.ವೀರಭದ್ರಯ್ಯ, ಚಳ್ಳಕೆರೆಯಪ್ಪ, ಸಾವಿತ್ರಿ, ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಕಾಂಗ್ರೆಸ್ ಮುಖಂಡರಾದ ಪಾಲಯ್ಯ, ಆರ್.ಪ್ರಸನ್ನಕುಮಾರ್, ಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link