ಒಗ್ಗೂಡದಿದ್ದರೆ ವೀರಶೈವರಿಗೆ ಭವಿಷ್ಯವಿಲ್ಲ

ದಾವಣಗೆರೆ:

     ಒಳ ಪಂಗಡಗಳ ಭೇದ ಮರೆತು ಒಂದಾಗದಿದ್ದರೆ, ವೀರಶೈವ ಸಮಾಜಕ್ಕೆ ಭವಿಷ್ಯವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ.

    ನಗರದ ಶ್ರೀಶೈಲ ಮಠದಲ್ಲಿ ಶನಿವಾರ ಸಂಜೆ ಶ್ರೀಶೈಲ ಜಗದ್ಗುರು ಲಿಂ|| ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನಾ ಸೇವಾ ಸಮಿತಿಯ ಆಶ್ರಯದಲ್ಲಿ ಲಿಂ|| ಶ್ರೀವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 32 ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ|| ಶ್ರೀಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 7ನೇ ವರ್ಷದ ಸ್ಮರಣೋತ್ಸವದ ಪ್ರಯುಕ್ತ ಏರ್ಪಡಿಸಿದ್ದ 2ನೇ ದಿನದ ಜನಜಾಗೃತಿ ಧರ್ಮ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

     ವೀರಶೈವ ಸಮಾಜದಲ್ಲಿ ವೃತ್ತಿಯನ್ನು ಆಧರಿಸಿ ಹುಟ್ಟಿಕೊಂಡಿರುವ ಎಲ್ಲಾ ಒಳ ಪಂಗಡಗಳು, ತಮ್ಮ, ತಮ್ಮಲ್ಲಿನ ಎಲ್ಲಾ ಭೇದಭಾವಗಳನ್ನು ಮರೆತು ಒಂದಾಗದಿದ್ದರೆ, ವೀರಶೈವರಿಗೆ ಭವಿಷ್ಯವಿಲ್ಲ. ಆದ್ದರಿಂದ ವೀರಶೈವರು ಭೇದ ತೊರೆದು ಎಲ್ಲರೂ ಒಂದಾಗಿ ಸಮಾಜ ಸಂಘಟನೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

    ಹಿಂದೆ ಜೀವನ ನಿರ್ವಹಣೆಗಾಗಿ ಅಗತ್ಯವಿರುವ ಎಲ್ಲಾ ಉದ್ಯೋಗಗಳನ್ನು ವೀರಶೈವರು ಮಾಡುತ್ತಿದ್ದರು. ಅವುಗಳೇ ಕ್ರಮೇಣ ಉಪ ಪಂಗಡಗಳಾಗಿ ಹುಟ್ಟು ಪಡೆದುಕೊಂಡು ಪ್ರಚಲಿತವಾದವು. ಬಳಿಕ ತಾವು ನಡೆಸುತ್ತಿರುವ ಉದ್ಯೋಗಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ತಮ್ಮ, ತಮ್ಮ ಉಪಪಂಗಡಗಳಲ್ಲಿಯೇ ಕೆನ್ಯೆಯನ್ನು ತೆಗೆದುಕೊಳ್ಳುವ ಮತ್ತು ಕೊಡುವ ಪದ್ಧತಿ ರೂಢಿಗೆ ಬಂದಿದ್ದು, ಈ ಕಾರಣಕ್ಕೆ ಉಪ ಪಂಗಡಗಳ ಮಧ್ಯೆ ಅಂತರ ಹೆಚ್ಚಾಗಲು ಕಾರಣವಾಗಿದೆ. ಆದರೆ, ಈಗ ಯಾವುದೇ ಒಳಪಂಗಡದವರು ಪೂರ್ವನಿಗದಿತ ಒಂದೇ ಉದ್ಯೋಗವನ್ನು ಅವಲಂಬಿಸಕೊಂಡಿರದೇ, ಎಲ್ಲರೂ ಎಲ್ಲಾ ಉದ್ಯೋಗಗಳನ್ನು ಮಾಡುತ್ತಿರುವುದರಿಂದ ಒಳಪಂಗಡಗಳ ಭೇದವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನುಡಿದರು.

   ವೀರಶೈವರೆಲ್ಲರೂ ಧರಿಸುವ ಲಿಂಗ ಒಂದೇ, ಲಿಂಗಪೂಜೆಯೊಂದೇ, ಧರ್ಮಾಚಾರಣೆಗಳು ಸಹ ಒಂದೇ, ಉಪಾಸನೆ ಮಾಡುವ ದೈವವೂ ಒಂದೇ ಆಗಿರುವುದರಿಂದ ಒಳಪಂಗಡಗಳಲ್ಲಿ ಕೆಲವರು ಶ್ರೇಷ್ಠ, ಇನ್ನೂ ಕೆಲವರು ಕನಿಷ್ಠ ಎಂಬ ತಾರತಮ್ಯವನ್ನು ಯಾರೂ ಸಹ ಮಾಡಕೂಡದು ಎಂದ ಶ್ರೀಗಳು, ವೀರಶೈವ ಸಮಾಜದ ಎಲ್ಲಾ ಪಂಗಡವರು ಪರಸ್ಪರ ರಕ್ತಸಂಬಂಧ ಬೆಳೆಸುವ ಮೂಲಕ ಈ ಉಪ ಪಂಗಡದ ಭೇದವನ್ನು ಹೊಗಲಾಡಿಸಲು ಪ್ರಯತ್ನಿಸಬೇಕೆಂದು ಸಮಾಜಕ್ಕೆ ಜಗದ್ಗುರುಗಳು ಕರೆ ನೀಡಿದ್ದರೂ, ಇತ್ತೀಚೆಗೆ ಕೆಲ ರಾಜಕಾರಣಿಗಳು ತಮ್ಮಸ್ವಾರ್ಥ ಸಾಧನೆಗಾಗಿ ಸರ್ಕಾರಿ ಸೌಲಭ್ಯಗಳ ಆಮಿಷ ತೋರಿಸಿ ಸಮಾಜದ ಒಗ್ಗಟ್ಟನ್ನು ಶಿಥಿಲಗೊಳಿಸಲು ಪ್ರಯತ್ನಿಸಿ ಮುಖಭಂಗಿತರಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

    ವೀರಶೈವ ಸಮಾಜ ಪ್ರಜ್ಞಾವಂತ ಸಮಾಜವಾಗಿರುವುದರಿಂದ ಇವರನ್ನು ಯಾವುದೇ ಆಮಿಷದಿಂದ ಒಡೆಯಲು ಸಾಧ್ಯವಿಲ್ಲ ಎಂಬುದನ್ನು ಸಮಾಜ ತೋರಿಸಿಕೊಟ್ಟಿದೆ ಎಂದ ಅವರು, ಒಕ್ಕಟ್ಟೇ ಬಲಿಕಟ್ಟು ಎಂಬ ನಾಣ್ಣುಡಿಯಂತೆ ಒಗ್ಗಟ್ಟಿನಲ್ಲಿ ಬಲವಿರುವುದರಿಂದ ಸಮಾಜದ ಕೈಯನ್ನು ಸದೃಢಗೊಳಿಸಬೇಕಾದರೆ ಎಲ್ಲರೂ ಎಲ್ಲಾ ದೃಷ್ಟಿಯಿಂದಲೂ ಒಂದಾಗುವತ್ತ ಹೆಜ್ಜೆ ಹಾಕಬೇಕೆಂದು ಕಿವಿಮಾತು ಹೇಳಿದರು.
ಜನಜಾಗೃತಿ ಧರ್ಮ ಸಮಾರಂಭದಲ್ಲಿ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.

    ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೆರವೇರಿಸಿಕೊಟ್ಟರು. ವೀರಶೈವ ಲಿಂಗಾಯತ ಧರ್ಮ ಪರಂಪರೆ ಕುರಿತು ಮೈಸೂರಿನ ಉಪನ್ಯಾಸಕ ನಂದೀಶ ಹಂಚೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಆವರಗೊಳ್ಳ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಸ್.ಎ.ರವೀಂದ್ರನಾಥ್, ಬಿಜೆಪಿ ಮುಖಂಡರುಗಳಾದ ಬಿ.ಜೆ.ಅಜಯಕುಮಾರ್, ಲೋಕಿಕೆರೆ ನಾಗರಾಜ್, ಎಂ.ಮನು, ಉಮೇಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link