ಬೆಂಗಳೂರು
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ತಾವು ಇಷ್ಟಪಡುವ ಹಣ್ಣು ಮತ್ತು ತರಕಾರಿಗಳನ್ನು ಸುಲಭವಾಗಿ ಖರೀದಿಸುವ ತರಕಾರಿ, ಹಣ್ಣು ಮಾರಾಟ ಯಂತ್ರವನ್ನು ಅಭಿವೃಧ್ಧಿ ಪಡಿಸಲಾಗಿದೆ.ರಾಜ್ಯದ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಈ ಯಂತ್ರವನ್ನು ಪರೀಕ್ಷಾರ್ಥವಾಗಿ ಅಳವಡಿಸಲಾಗಿದ್ದು ರಾಜ್ಯಾದಾದ್ಯಂತ 23 ಮಾರಾಟ ಯಂತ್ರಗಳ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ 10 ಅಥವಾ 20 ರೂ.ಗಳನ್ನು ಯಂತ್ರದೊಳಗೆ ತೂರಿಸುವ ಮೂಲಕ ಬೇಕಾದ ನಾವು ಬಯಸುವ ಹಣ್ಣು ಅಥವಾ ತರಕಾರಿಗಳನ್ನು ಗುಂಡಿ ಒತ್ತುವ ಮೂಲಕ ಯಂತ್ರದಿಂದ ಪಡೆದುಕೊಳ್ಳಬಹುದಾಗಿದೆ.
ಭಾರತೀಯ ತೋಟಗಾರಿಕೆ ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ದಿನೇಶ್ ಅವರು ಯಂತ್ರಗಳ ಕುರಿತಂತೆ ಜನರ ಪ್ರತಿಕ್ರಿಯೆ ಆಧರಿಸಿ ಇನ್ನೂ ಹೆಚ್ಚು ಸ್ಥಳಗಳಲ್ಲಿ ಯಂತ್ರವನ್ನು ಅಳವಡಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇಂತಹ ಯಂತ್ರಗಳನ್ನು ಬೆಂಗಳೂರು ನಗರದ 10 ಪ್ರಮುಖ ಸ್ಥಳಗಳಲ್ಲಿ ಅಳವಡಿಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಯಂತ್ರಗಳು ಸೋಲಾರ್ ವಿದ್ಯುತ್ ಪ್ಯಾನಲ್‍ಗಳ ವ್ಯವಸ್ಥೆ ಹೊಂದಿದ್ದು, 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಿ ಕನಿಷ್ಠ 2 ದಿನಗಳ ಕಾಲ ತರಕಾರಿ ಮತ್ತು ಹಣ್ಣುಗಳನ್ನು ಕೆಡದಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಾರುಕಟ್ಟೆಯನ್ನು ಉದ್ದೇಶವಾಗಿರಿಸಿಕೊಂಡಿದ್ದು, ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯಂತ್ರಗಳನ್ನು ಅಳವಡಿಸಲು ಚಿಂತಿಸಲಾಗಿದೆ, ಈ ಮೂಲಕ ರೈತರು ಕೊನೇ ಪಕ್ಷ ಮೂಲಭೂತ ಕೊರತೆಯ ನಡುವೆಯೂ ಸಹ 2 ದಿನಗಳ ಕಾಲ ತಾವು ಬೆಳೆದ ತರಕಾರಿಗಳನ್ನು ಸಂರಕ್ಷಿಸಲು ಸಾಧ್ಯವಾಗಲಿದೆ.
ಪ್ರತಿಯಂತ್ರದಲ್ಲಿ 400 ಕೆಜಿ ತೂಕದಷ್ಟು ತರಕಾರಿ ಅಥವಾ ಹಣ್ಣುಗಳನ್ನು ಶೇಖರಣೆ ಮಾಡಬಹುದಾಗಿದ್ದು, ಒಮ್ಮೆ ಯಂತ್ರ ಅಳವಡಿಸಲು 12 ಲಕ್ಷ ರೂ. ವೆಚ್ಚ ತಗಲಲಿದೆ ಎಂದು ತಿಳಿಸಿದರು.
ಪಾಂಡಿಚೆರಿ ಮತ್ತು ಕೇರಳ ಸರ್ಕಾರದಿಂದ ಈ ಯಂತ್ರಗಳಿಗೆ ಬೇಡಿಕೆ ಬಂದಿರುವುದಾಗಿ ಐಐಹೆಚ್‍ಆರ್ ಹಿರಿಯ ವಿಜ್ಞಾನಿ ಯೊಬ್ಬರು ಈ ವೇಳೆ ಮಾಹಿತಿ ನೀಡಿದರು. ಉಳಿದಂತೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಲಸಿನ ಹಣ್ಣಿನ ಬೀಜದಿಂದ ತಯಾರಿಸಲ್ಪಟ್ಟ ಚಾಕೋಲೆಟ್‍ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವು ಮನುಷ್ಯನ ಶರೀರಕ್ಕೆ ಹೆಚ್ಚು ಶಕ್ತಿ ಒದಗಿಸಬಲ್ಲವು ಹಾಗೂ ಹೆಚ್ಚು ಆಂಟಿಆಕ್ಸಿಡೆಂಟ್ ಆಗಿ ವರ್ತಿಸುತ್ತವೆ ಎಂದು ತಿಳಿಸಿದ್ದಾರೆ. ಉಳಿದಂತೆ ಈ ಚಾಕೋಲೆಟ್‍ಗಳು ದೇಹದಲ್ಲಿನ ಕೊಬ್ಬಿನಾಂಶ ಹಾಗೂ ಇನ್ನಿತರ ಕಲ್ಮಶಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
ಈ ಸಂಬಂಧ ಚಾಕೋಲೆಟ್ ಕಂಪನಿ ಕ್ಯಾಡಿಬರೀಸ್‍ನೊಂದಿಗೆ ಸಂಸ್ಥೆ ಚರ್ಚೆ ನಡೆಸಿದ್ದು, ಈ ಚಾಕೋಲೆಟ್‍ಗಳನ್ನು ಉತ್ತೇಜಿಸುವಂತೆ ಕೇಳಲಾಗಿದೆ ಹಾಗೂ ಈ ಚಾಕೋಲೆಟ್‍ಗಳಿಗೆ ಅರ್ಕಾಚಾಕೋಲೆಟ್ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
