ಪಟ್ಟಣ ಮಾರಾಟಗಾರರ ಸಮಿತಿ ಸಭೆ: `ವೆಂಡರ್ ಜೋನ್’ ಅಭಿವೃದ್ಧಿಗೆ ತೀರ್ಮಾನ

ತುಮಕೂರು

     ತುಮಕೂರು ನಗರದಲ್ಲಿ ಈಗಾಗಲೇ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಗುರುತಿಸಿರುವ ಮೂರು ”ವೆಂಡರ್ ಜೋನ್” (ವ್ಯಾಪಾರಿ ವಲಯ) ಸ್ಥಳಗಳನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲು `ಪಟ್ಟಣ ಮಾರಾಟಗಾರರ ಸಮಿತಿ’ಯು (ಟೌನ್ ವೆಂಡರ್ಸ್ ಕಮಿಟಿ) ತೀರ್ಮಾನ ಕೈಗೊಂಡಿದೆ.

    ಪಾಲಿಕೆ ಕಚೇರಿಯಲ್ಲಿ ಈ ಸಮಿತಿಯ ಅಧ್ಯಕ್ಷರೂ ಆಗಿರುವ ಆಯುಕ್ತ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

     ಪ್ರಸ್ತುತ ನಗರದ ಮಂಡಿಪೇಟೆಯ ಮಾರಿಯಮ್ಮ ನಗರ, ಅಶೋಕ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸ್ಥಳ ಮತ್ತು ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್‍ಪಾಸ್‍ಗೂ ಮುನ್ನ ಸಿಗುವ ಕೆಂಪಣ್ಣನ ಅಂಗಡಿ ವೃತ್ತದ ಪಕ್ಕ ಇರುವ ಪಾಲಿಕೆಗೆ ಸೇರಿದ ಸ್ಥಳ -ಈ ಮೂರು ಸ್ಥಳಗಳಲ್ಲಿ “ವೆಂಡರ್ ಜೋನ್” ಅಭಿವೃದ್ಧಿಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇವುಗಳನ್ನು ತುಮಕೂರು ಸ್ಮಾರ್ಟ್‍ಸಿಟಿ ಕಂಪನಿಯು ಅಭಿವೃದ್ಧಿಪಡಿಸಲಿದೆ. ಈ ಸ್ಥಳಗಳಲ್ಲಿ ಮೂಲಸೌಕರ್ಯಗಳ ಜೊತೆಗೆ ಇಲ್ಲಿ ನಡೆಯಬಹುದಾದ ವ್ಯಾಪಾರಕ್ಕೆ (ಉದಾಹರಣೆಗೆ ಹೂ, ಹಣ್ಣು, ತರಕಾರಿ, ಪಾನಿಪುರಿ ಇತ್ಯಾದಿ ಬೀದಿಬದಿ ವ್ಯಾಪಾರಕ್ಕೆ) ಅನುಗುಣವಾಗಿ ಈ ಸ್ಥಳಗಳನ್ನು ವಿನ್ಯಾಸಗೊಳಿಸಿ ಸಿದ್ಧಪಡಿಸಬೇಕೆಂಬ ಬಗ್ಗೆ ಆಲೋಚಿಸಲಾಗಿದೆ.

        ಇದಲ್ಲದೆ ನಗರದಲ್ಲಿ ಹೊಸದಾಗಿ ವೆಂಡರ್ ಜೋನ್ ರೂಪಿಸಲು ಸ್ಥಳಾವಕಾಶ ಇದ್ದರೆ ಅದನ್ನು ಗುರುತಿಸಲು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿ ಸದಸ್ಯರು ಮತ್ತು ಅಧಿಕಾರಿಗಳ ತಂಡವು ಈ ನಿಟ್ಟಿನಲ್ಲಿ ಜುಲೈ 8 ರಂದು ನಗರದಲ್ಲಿ ಪರಿಶೀಲನೆ ನಡೆಸಿ, ಸಮಿತಿ ಅಧ್ಯಕ್ಷರಾದ ಆಯುಕ್ತರಿಗೆ ಒಂದು ವರದಿ ನೀಡುವಂತೆ ಸೂಚಿಸಲಾಯಿತು.

ಕಾರ್ಯಾಗಾರಕ್ಕೆ ನಿರ್ಧಾರ

      ಬೀದಿಬದಿ ವ್ಯಾಪಾರಿಗಳಿಗಾಗಿ ಒಂದು ವಿಶೇಷ ಕಾರ್ಯಾಗಾರವನ್ನು ನಡೆಸಲು ಸಹ ಆಲೋಚಿಸಲಾಗಿದೆ. ಸರ್ಕಾರದಿಂದ ಲಭಿಸುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು, ವ್ಯಾಪಾರದ ಸ್ಥಳದಲ್ಲಿ ನೈರ್ಮಲ್ಯವನ್ನು ಕಾಪಾಡುವುದು, ಗ್ರಾಹಕರ ಜೊತೆ ಉತ್ತಮ ಬಾಂಧವ್ಯ ಹೊಂದುವುದು, ಹಣಕಾಸು ನಿರ್ವಹಣೆ ಬಗ್ಗೆ ಅರಿವು ಹೊಂದುವುದು ಮೊದಲಾದ ವಿಷಯಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ಅರಿವು ಮೂಡಿಸಲು ಉದ್ದೇಶಿಸಲಾಗಿದೆ.

 ಈಗ ಹೊಸದಾಗಿ 510  ಜನರಿಗೆ ಗುರುತುಪತ್ರ

     ಪ್ರಸ್ತುತ ನಗರದಲ್ಲಿ ಹೊಸದಾಗಿ 510 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಇವರಿಗೆ ಪಾಲಿಕೆ ವತಿಯಿಂದ “ಗುರುತು ಪತ್ರ” ವಿತರಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

     ಈ ಹಿಂದೆ ಒಟ್ಟು 1839 ಜನ ಬೀದಿಬದಿ ವ್ಯಾಪಾರಸ್ಥರಿಗೆ “ಗುರುತಿನ ಪತ್ರ”ವನ್ನು ವಿತರಣೆ ಮಾಡಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅವರುಗಳ ಸಂಖ್ಯೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಸಮೀಕ್ಷೆ ನಡೆಸಿ 510 ಜನರನ್ನು ಗುರುತಿಸಲಾಗಿದೆ.
ಇನ್ನು ಮುಂದೆ ಪ್ರತಿ ತಿಂಗಳಿಗೊಮ್ಮೆ `ಪಟ್ಟಣ ಮಾರಾಟಗಾರರ ಸಮಿತಿ’ ಸಭೆಯನ್ನು ನಡೆಸುವ ಬಗೆಗೂ ನಿರ್ಧರಿಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಅಲ್ತಾಫ್, ನರಸಿಂಹಮೂರ್ತಿ, ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಸಮುದಾಯ ಸಂಘಟನಾಧಿಕಾರಿ ರಾಮಾಂಜಿನಪ್ಪ, ಸಮುದಾಯ ಸಂಘಟಕ ನಾಗರಾಜಯ್ಯ, ಅಭಿಯಾನ ವ್ಯವಸ್ಥಾಪಕ ಅಂಜನಮೂರ್ತಿ ಮತ್ತು ಓರ್ವ ಟ್ರಾಫಿಕ್ ಪೊಲೀಸ್ ಅಧಿಕಾರಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap