10 ಸಿದ್ಧ ಮಳಿಗೆಗಳ ವೆಂಡಿಂಗ್ ಜೋನ್ ಸಿದ್ಧ..!

ತುಮಕೂರು

       ಸಾರ್ವಜನಿಕ ಬಳಕೆಯಾಗದ ಜಾಗಗಳನ್ನು ಗುರುತಿಸಿ ಅಲ್ಲಿ ಕಿರು ವ್ಯಾಪಾರ ವಲಯವನ್ನಾಗಿ ಅಭಿವೃದ್ಧಿಪಡಿಸುವ ವೆಂಡಿಂಗ್ ಜೋನ್‍ಗಳನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ನಗರದ ವಿವಿಧೆಡೆ ನಿರ್ಮಾಣ ಮಾಡುತ್ತಿದ್ದೆ. ಉಪ್ಪಾರಹಳ್ಳಿ ಮೇಲು ಸೇತುವೆ ಕೆಳಗಿನ ನಿರುಪಯೋಗಿ ಜಾಗದಲ್ಲಿ ಒಂದೇ ಮಾದರಿಯ ಹತ್ತು ಅಂಗಡಿಗಳನ್ನು ನಿಮಾಣ ಮಾಡಿ, ಸುತ್ತಲಿನ ಜಾಗವನ್ನು ಅಭಿವೃದ್ಧಿಗೊಳಿಸಿ ನಗರಪಾಲಿಕೆ ವಶಕ್ಕೆ ನೀಡಿದೆ.

      ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಮೇಲುಸೇತುವೆ ಕೆಳಗೆ ಕಿಯೋಸ್ಕದಿಂದ 10 ಸಿದ್ದ ಮಳಿಗೆಗಳನ್ನು ಸ್ಥಾಪಿಸಿ, ಬೀದಿಬದಿಯ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿ ಸ್ವಚ್ಚ, ಸುಂದರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ವಿರಮಿಸಿಕೊಳ್ಳಲು ಅಗತ್ಯ ಆಸನಗಳು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ, ದೊಡ್ಡ ಕುಂಡಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ. ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಈ ಸ್ಥಳದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‍ಗೆ ಅವಕಾಶ ಮಾಡಲಾಗಿದೆ.

     ಸಾರ್ವಜನಿಕರಿಗೆ ಕಿರಿಕಿರಿ ಆಗದೆ, ಮುಕ್ತವಾಗಿ ಬಂದು ಹೋಗುವ ರೀತಿಯಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸುವ ಸ್ಥಳವಾಗಿ ರೂಪಿಸುವ ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡುವುದು ಯೋಜನೆ ಉದ್ದೇಶವಾಗಿದೆ.ಇಲ್ಲಿನ ಮಳಿಗೆಗಳನ್ನು ನಗರ ಪಾಲಿಕೆ ಹರಾಜು ಮಾಡಿ ವ್ಯಾಪಾರಿಗಳಿಗೆ ತಿಂಗಳ ಬಾಡಿಗೆ ಆಧಾರದಲ್ಲಿ ವಿತರಿಸಿದೆ. ಹಣ್ಣು, ತರಕಾರಿ, ಹಾಲು, ಕಾಫಿ-ಟೀ ಮತ್ತಿತರ ದಿನಬಳಕೆ ಪದಾರ್ಥಗಳ ಮಾರಾಟ ಮಾಡಲು ಮಳಿಗೆಗಳಲ್ಲಿ ಅವಕಾಶ ಮಾಡಲಾಗಿದೆ. ಕಾಫಿ ಶಾಪ್ ಮಾದರಿಯ ಅನುಭವ ನೀಡುವ ಸುಂದರ ವಾತಾವರಣ ನಿರ್ಮಾಣ ಮಾಡುವ ರೀತಿಯಲ್ಲಿ ವೆಂಡಿಂಗ್ ಜೋನ್ ಸಿದ್ಧಪಡಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ ಹೇಳಿದ್ದಾರೆ.

      ಇದೊಂದು ಪೈಲೆಟ್ ಪ್ರಾಜೆಕ್ಟ್ ಆಗಿದ್ದು ನಗರದ ಇನ್ನೂ ಮೂರು ಕಡೆ ಇದೇ ಮಾದರಿಯಲ್ಲಿ ಕಿರಿ ವ್ಯಾಪಾರ ವಲಯ ಅಭಿವೃದ್ಧಿಪಡಿಸಲು ನಗರ ಪಾಲಿಕೆ ಜಾಗ ಗುರುತಿಸಿ ಸ್ಮಾರ್ಟ್ ಸಿಟಿಗೆ ನೀಡಿದೆ, ಮುಂದಿನ ಹಂತದಲ್ಲಿ ವೆಂಡರ್ ಜೋನ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

      ಶೆಟ್ಟಿಹಳ್ಳಿ ಗೇಟ್‍ನ ಕೆಂಪಣ್ಣ ಅಂಗಡಿ ವೃತ್ತದಲ್ಲಿನ ಬಸ್ ನಿಲ್ದಾಣ ಪಕ್ಕದ ಜಾಗದಲ್ಲಿ ವೆಂಡರ್ ಜೋನ್ ನಿರ್ಮಾಣಕ್ಕೆ ನಗರಪಾಲಿಕೆ ಸ್ಥಳ ಗುರುತಿಸಿದೆ, ಇಲ್ಲಿ ಹೂವು, ಹಣ್ಣು ಮಾರಾಟದ ಮಳಿಗೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಖಾಸಗಿ ಬಸ್ ನಿಲ್ದಾಣದ ಬಳಿ ನಗರ ಪಾಲಿಕೆ ಜಾಗದಲ್ಲಿ ಕಿರು ವ್ಯಾಪಾರಿ ವಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕೋತಿತೋಪು ರಸ್ತೆಯ ಬೆಸ್ಕಾಂ ಕಚೇರಿ ಎದುರಿನ ಜಾಗದಲ್ಲಿ ಫುಡ್ ಸ್ಟ್ರೀಟ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ.

      ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ, ಮಳಿಗೆಗಳನ್ನು ನಿರ್ಮಿಸಿ ಅಲ್ಲಿದ್ದ ವ್ಯಾಪಾರಿಗಳಿಗೇ ಆದ್ಯತೆ ಮೇಲೆ ಮಳಿಗೆ ವಿತರಿಸಿ ವ್ಯಾಪಾರ ಮುಂದುವರೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ನಗರ ಪಾಲಿಕೆ ಗುರುತಿಸಿ ನೀಡುವ ಸೂಕ್ತ ಜಾಗ ಆಧರಿಸಿ ನಗರದ ಇತರೆಡೆ ರಸ್ತೆ ಬದಿಯಲ್ಲಿ ಸ್ಮಾಟ್ ಸಿಟಿ ಲಿಮಿಟೆಡ್‍ನಿಂದ ವೆಂಡಿಂಗ್ ಜೋನ್ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap