ದಾವಣಗೆರೆ:
ಇದೇ ಫೆ.24ರಂದು ಪಶುವೈದ್ಯಕೀಯ ಪರೀಕ್ಷಕರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ವಕ್ತಾರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಎಂ.ಬಿ.ಮೂಲಿಮನಿ ತಿಳಿಸಿದರು.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ನಮ್ಮ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.
ಅಂತಾರಾಷ್ಟ್ರೀಯ ಜಾನುವಾರು ಆರೋಗ್ಯ ಸಂಸ್ಥೆಯ ಇತ್ತೀಚಿನ ತೀರ್ಮಾನದಂತೆ ರಾಜ್ಯ ಸರ್ಕಾರ ನಮ್ಮನ್ನು ಪ್ರಾಥಮಿಕ ಜಾನುವಾರು ಆರೋಗ್ಯ ಚಿಕಿತ್ಸಕರೆಂದು ಗುರುತಿಸಬೇಕಿದೆ. ಇದಕ್ಕಾಗಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ದಾಖಲಾತಿಯಲ್ಲಿ ನಮ್ಮನ್ನು ನೋಂದಾಯಿಸಬೇಕು ಅಥವಾ ಆರೋಗ್ಯ ಇಲಾಖೆಯಂತೆ ಪ್ರತ್ಯೇಕವಾದ ಪರಿಷತ್ ಅಥವಾ ಮಂಡಳಿ ಸ್ಥಾಪಿಸಬೇಕು. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ ಕೃತಕ ಗರ್ಭಧಾರಣೆ ಕೇಂದ್ರಗಳನ್ನು ಹೆಚ್ಚು ಸ್ಥಾಪಿಸಿ, ನಮ್ಮ ವೃಂದದವರನ್ನು ಆಹಾರ ಸುರಕ್ಷಿತ ಪರೀಕ್ಷೆಗಳಿಗೆ ನಿಯೋಜಿಸಬೇಕೆಂದು ಆಗ್ರಹಿಸಿದರು.
ಇಲಾಖೆಯಲ್ಲಿ ಸುಮಾರು 750 ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳು ಖಾಲಿ ಇದ್ದು, ತಕ್ಷಣವೇ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಪ್ರತಿ ತಿಂಗಳು 10 ಸಾವಿರ ರೂ. ವಿಶೇಷ ಭತ್ಯೆ ಹಾಗೂ ಭಾನುವಾರ ಮತ್ತು ಸರ್ಕಾರಿ ರಜಾದಿನಗಳಂದು ಕಾರ್ಯ ನಿರ್ವಹಿಸುವುದನ್ನು ಪರಿಗಣಿಸಿ ಪ್ರತಿ ವರ್ಷ 15 ದಿನಗಳ ಹೆಚ್ಚುವರಿ ವೇತನ ನೀಡಬೇಕೆಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ಅಂದಿನ ಸಭೆಯಲ್ಲಿ ಕೈಗೊಂಡು, ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಹೆಚ್.ವೆಂಕಟರಾಜು, ಕೆ.ಸಿ.ಸೋಮಶೇಖರ್, ಶೆಟ್ಟಪ್ಪ ನಾಯಕ್, ಕಲ್ಲೇಶಪ್ಪ, ಕೃಷ್ಣಮೂರ್ತಿ, ರಾಜೇಶ್ ಪಾಳ್ಯ, ಮಾನು ಸಿದ್ದು, ಲೋಕೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








