ಹರಪನಹಳ್ಳಿ
ಪಟ್ಟಣದ ದನದಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರ ಗೈರು, ಸಿಬ್ಬಂದಿಗಳ ತಾಳಮೇಳವಿಲ್ಲದೇ ಜಾನುವಾರುಗಳೊಂದಿಗೆ ಸಾರ್ವಜನಿಕರ ಪರದಾಟ, ಚಿಕಿತ್ಸೆಗಾಗಿ ಕರೆ ತಂದ ಕುರಿಗಳಿಗೆ ಔಷಧಿಗಳಿಲ್ಲದೇ ಮೃತಪಟ್ಟಿದ್ದು ಆಸ್ಪತ್ರೆಯ ಕಾಂಪೌಡ ಮೇಲೆ ಬಿಸಾಕಿ ತೆರಳಿದ ರೈತರು ನೊಣ ಮುತ್ತಿ ನಾರುತ್ತಿದ್ದರೂ ಹೇಳೊರಿಲ್ಲ ಕೇಳೋರಿಲ್ಲ.
ಭಾನುವಾರ ಪಟ್ಟಣದ ಪಶುಆಸ್ಪತ್ರೆಗೆ ಚಿಕಿತ್ಸೆಗಾಗಿ ತಮ್ಮ ಜಾನುವಾರುಗಳನ್ನು ಕರೆ ತಂದ ರೈತರಿಗೆ ರಸ್ತೆಯಲ್ಲೇ ದನಕರುಗಳನ್ನು ಹಿಡಿದುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಗಿಲು ತೆಗೆಯಲು ಸಿಬಂದಿಗಳು ವಿಳಂಬ ಮಾಡಿದ ಪರಿಣಾಮ ರಸ್ತೆಯಲೇ ದನಕರುಗಳನ್ನು ಹಿಡಿದುಕೊಂಡು ನಿಲ್ಲಬೇಕಾಗಿದೆ. ಈ ರೀತಿ ಪ್ರತಿ ದಿನ ರೈತರನ್ನು ಇಲ್ಲಿಯ ಸಿಬ್ಬಂದಿ ಸತಾಯಿಸುತ್ತಾರೆ ಎಂದು ರೈತ ನಾಗಭೂಷಣ, ಅಂಜಿನಪ್ಪ ಹಾಗೂ ಬಸವರಾಜ ದೂರಿದರು.
ಬೆಳಿಗ್ಗೆ ಬೇಗನೆ ದನಕರುಗಳಿಗೆ ಚಿಕಿತ್ಸೆ ಮಾಡಿಸಿ ಹೊಲ ಗದ್ದೆಗಳಿಗೆ ತೆರಳಬೇಕು. ಅಲ್ಲಿಂದ ಮೇವೂ ನೀರನ್ನು ಹೊತ್ತು ತರಬೇಕು. ಚೀಟಿ ಮಾಡಿಸಲು ಸರತಿ ಸಾಲು ಹಚ್ಚಿ ನಿಲ್ಲಬೇಕು. ಅಲ್ಲಿ ದನಕರುಗಳನ್ನು ಹಿಡಿದುಕೊಳ್ಳು ಒಂದು ಆಳು ನಿಲ್ಲಬೇಕು. ಪಶುಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಗಂಟೆಗಟ್ಟಲೇ ಇವರ ಬರುವಿಕೆಗಾಗಿ ಜಾನುವರುಗಳೊಂದಿಗೆ ಕಾಯಬೇಕು. ಪಟ್ಟಣದ ಮುಖ್ಯ ರಸ್ತೆಯಲ್ಲಿ ದನಗಳೊಂದಿಗೆ ನಿಲ್ಲುವುದು ಸಮಸ್ಯೆಯಾಗುತ್ತಿದೆ. ಬೇಗನೆ ಚಿಕಿತ್ಸೆ ನೀಡದೇ ಸತಾಯಿಸುತ್ತಾರೆ. ಬಂದ ಮೇಲೆ ಔಷಧಿಗಳ ಕೊರತೆಯಿದೆ ಇಲ್ಲಿ ದೊರಕುವುದಿಲ್ಲ ಎಂದು ಸಾಗು ಹಾಕುತ್ತಾರೆ. ಇದಕ್ಕೆ ತಾಜ ಉದಾಹರಣೆಯನ್ನು ರೈತರೇ ಪತ್ರಿಕೆಗೆ ತೋರಿಸಿದರು.
ಶನಿವಾರ ಕುರಿಯನ್ನು ಚಿಕಿತ್ಸೆಗಾಗಿ ಕರೆತರಲಾಗಿದೆ. ಆದರೆ ಔಷಧಿ ಇಲ್ಲ ಎಂದೋ ಅಥವಾ ಸಮಯವಿಲ್ಲವೆಂದೋ ಸಿಬ್ಬಂದಿಗಳು ಚಿಕಿತ್ಸೆ ನೀಡದೇ ಮನೆಗೆ ತೆರಳಿದ್ದಾರೆ. ಚಿಕಿತ್ಸೆ ಇಲ್ಲದೇ ಕುರಿ ಆಸ್ಪತ್ರೆಯ ಆವರಣದಲ್ಲೇ ಮೃತಪಟ್ಟಿದೆ. ರೈತ ಸತ್ತ ಕುರಿಯನ್ನು ಆಸ್ಪತ್ರೆಯ ಕಾಂಪೌಡ ಮೇಲೆ ಇಟ್ಟು ಬಂದ ದಾರಿಗೆ ಸುಂಕವಿಲ್ಲ ಎಂದು ರೋಧಿಸುತ್ತಾ ಮನೆಗೆ ತೆರಳಿದ್ದಾರೆಂದು ರೈತರು ಆರೋಪಿಸಿದರು. ಸತ್ತ ಕುರಿ ಕಾಂಪೌಡ ಮೇಲೆ ನೊಣ ಹುಳಗಳು ಮೆತ್ತಿಕೊಂಡಿದ್ದವು. ಆಸ್ಪತ್ರೆಯ ಸಿಬ್ಬಂದಿ ಕಂಡು ಕಾಣದಂತೆ ಇದ್ದರು.
ಶಿಥಲಾವಸ್ಥೆಯ ಕಟ್ಟದಲ್ಲಿ ಪಶುಆಸ್ಪತ್ರೆ ಇದೆ. ಸಿಬ್ಬಂದಿಗಳು ಸಹ ದನಗಳಂತೆ ರೈತರೊಂದಿಗೆ ಸ್ಪಂದಿಸುತ್ತಾರೆ. ಔಷಧಿಗಳ ದಾಸ್ತನು, ವೈದ್ಯರು, ಚಿಕಿತ್ಸೆ ಹಾಗೂ ರೈತರ ಗೋಳನ್ನು ಯಾರಿಗೆ ಹೇಳಬೇಕು ಜಾನುವಾರಗಳ ಆರೈಕೆಗೆ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಸತ್ತ ಕುರಿ, ಜಾನುವಾರುಗಳಿಗೆ ವಿಮೆ ಹಣ ನೀಡಿ ಕೈ ತೊಳೆದು ಕೊಳ್ಳುತ್ತಿರುವ ಸರ್ಕಾರ ಚಿಕಿತ್ಸೆ ನೀಡುತ್ತಿಲ್ಲ ಎಂದು ರೈತರು ಆಳಲು ತೋಡಿಕೊಂಡರು.ಡಾ.ಶಿವಕುಮಾರ ಸುದ್ಧಿಗಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಭಾನುವಾರ ಆದ ಪ್ರಯುಕ್ತ ಕೆಲ ಸಿಬ್ಬಂದಿ ತಡವಾಗಿ ಬಂದಿರಬಹುದು.
ಕೂಡಲೇ ವ್ಯವಸ್ಥೆಯನ್ನು ಸರಿಪಡಿಸುತ್ತೇನೆ. ಕುರಿಗಳ ನೀಲಿ ರೋಗಕ್ಕೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಗದ ಕಾರಣ ಔಷಧಿಗಳ ಕೊರತೆಯಿದೆ. ತಾತ್ಕಾಲಿಕ ಪರಿಹಾರಕ್ಕೆ ತಾಲ್ಲೂಕು ಪಂಚಾಯ್ತಿಯಿಂದ ಅನುದಾನ ಪಡೆದು ಸ್ಥಳೀಯವಾಗಿ ಔಷಧಿಗಳನ್ನು ಖರೀದಿಸಿ ಎಲ್ಲಾ ಆಸ್ಪತ್ರೆಗಳಿಗೆ ವಿತರಿಸಲಾಗುವುದು. ಸ್ಥಳದಲ್ಲಿ ಮೃತಪಟ್ಟ ಕುರಿಗೆ ಪೋಸ್ಟ್‍ಮಾರ್ಟ್ಂ ಮಾಡಿ ಸೂಕ್ತ ಕ್ರಮ ಜರುಗಿಸಲಾಗಿದೆ. ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ