ಹುಳಿಯಾರು
ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆ ಸೇರಿ ಹಲವು ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಸೆ.21 ರಂದು ವಿಧಾನಸೌಧ ಮುತ್ತಿಗೆ ಹಾಕಿ ಅಧಿವೇಶನ ಮುಗಿಯುವವರೆವಿಗೂ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್ ಅವರು ತಿಳಿಸಿದ್ದಾರೆ.
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಈ ಸಂಬಂದ ಪತ್ರಿಕಾಗೋಷ್ಠಿ ನಡೆಸಿದ ಅವರು ಭೂಸುಧಾರಣೆ, ಎಪಿಎಂಸಿ, ಅಗತ್ಯ ವಸ್ತುಗಳು, ವಿದ್ಯುತ್, ಬೀಜ ಮಸೂದೆ ಹೀಗೆ ಹಲವು ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುತ್ತಿರುವ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್ ಕಂಪೆನಿಗಳು, ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.
ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂತಹ ತಿದ್ದುಪಡಿಗಳನ್ನು ಶಾಸನಸಭೆ, ಸಂಸತ್ತಿನಲ್ಲಿ ಚರ್ಚಿಸದೆ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗುತ್ತಿರುವುದು ಜನರನ್ನು ವಂಚಿಸುವ ಕೆಲಸವಾಗಿದೆ. ಬಡ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಿ ದಿವಾಳಿ ಮಾಡುವುದು ಇದರ ಹಿಂದಿನ ಸಂಚಾಗಿದ್ದು ರೈತರು, ರಾಜಕಾರಣಿಗಳು, ಜನಪ್ರತಿನಿಧಿಗಳು ಪಕ್ಷ, ಜಾತಿ, ಬಣ ಬಿಟ್ಟು ದೇಶದ ಒಳಿತಿಗಾಗಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆಸತೀಶ್ ಅವರು ಮಾತನಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಜಾರಿಗೆ ತಂದಿರುವ ಕಾಯ್ದೆಯಿಂದ ಉಳುವವನೇ ಭೂಮಿಯ ಒಡೆಯ ಎಂಬುದು ಈಗ ಉಳ್ಳವನೇ ಭೂಮಿಯ ಒಡೆಯ ಎಂಬಂತಾಗಿದೆ. ರಾಜ್ಯದಲ್ಲಿ ಕೃಷಿಕರಲ್ಲದವರು ದೊಡ್ಡ-ದೊಡ್ಡ ಕಂಪೆನಿಗಳು ಕೋಟ್ಯಂತರ ಕೃಷಿಯೇತರ ಆದಾಯವುಳ್ಳ ಶ್ರೀಮಂತರು ದುರ್ಬಲ ವರ್ಗದ ರೈತರ ಕೃಷಿ ಭೂಮಿಯನ್ನು ಖರೀದಿಸಿ ಮತ್ತು ಜಮೀನ್ದಾರಿ ಪದ್ದತಿ ಜಾರಿಗೆ ಬರಲು, ರಿಯಲ್ ಎಸ್ಟೇಟ್ ಉದ್ಯಮ ಗ್ರಾಮೀಣ ಪ್ರದೇಶಗಳಲ್ಲೂ ಪ್ರವೇಶಿಸಲು ಅವಕಾಶ ಮಾಡಿದೆ ಎಂದು ಆರೋಪಿಸಿದರು.
ತಾಲೂಕು ರೈತ ಸಂಂಘದ ಅಧ್ಯಕ್ಷ ತಿಮ್ಮನಹಳ್ಳಿಲೋಕೇಶ್, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ಕಾಡಿನರಾಜನಾಗರಾಜು, ರಂಗನಕೆರೆ ಮಂಜಣ್ಣ, ಕಂಪನಹಳ್ಳಿಮರುಳಪ್ಪ, ಕಂಪನಹಳ್ಳಿಪ್ರಕಾಶ್, ದಾಸಪ್ಪ, ಯೋಗೀಶ್, ಕೆ.ಎಸ್.ಹಳ್ಳಿಶಿವಣ್ಣ, ಬನಶಂಕರಯ್ಯ ಸೇರಿದಂತೆ ಅನೇಕರು ಉಪಸ್ಥಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
