ಜುಲೈ12ರಿಂದ ವಿಧಾನ ಮಂಡಲ ಮಳೆಗಾಲದ ಅಧಿವೇಶನ:ಕೃಷ್ಣ ಭೈರೇಗೌಡ

ಬೆಂಗಳೂರು

     ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಜುಲೈ 12 ರಿಂದ 26 ರವರೆಗೆ ನಡೆಯಲಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಈ ವಿಷಯ ತಿಳಿಸಿದರು.

     ಇದೇ ರೀತಿ ರೈತರ ಬೆಳೆ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಹಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ರಾಜ್ಯದಲ್ಲಿರುವ 2.20 ಕೋಟಿ ವ್ಯವಸಾಯ ಪ್ರದೇಶಗಳನ್ನು ನಿಖರವಾಗಿ ಗುರುತಿಸುವ ಕಾರ್ಯ ಇದರಲ್ಲಿ ಒಂದು ಎಂದರು. ಮೂರು ದಶಕಗಳ ಹಿಂದೆ ರಾಜ್ಯದಲ್ಲಿ ಎಷ್ಟು ಪ್ರಮಾಣದ ಭೂಮಿಯಲ್ಲಿ ವ್ಯವಸಾಯ ನಡೆಯುತ್ತದೆ?ಎಷ್ಟು ಭೂಮಿಯಲ್ಲಿ ಯಾವ್ಯಾವ ಬೆಳೆ ಬೆಳೆಯಲಾಗುತ್ತಿದೆ?ಎಂಬುದನ್ನು ರೈತರ ಪಹಣಿಯಲ್ಲಿ ನಮೂದಿಸುವ ಕಾರ್ಯ ನಡೆಯುತ್ತಿತ್ತು.

     ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಬಹುತೇಕ ನಿಂತೇ ಹೋಗಿತ್ತು.ಆದರೆ 2018 ರಿಂದ ವಿಶೇಷ ಚಿಠಿಠಿ ಅಡಿಯಲ್ಲಿ ವ್ಯವಸಾಯ ಭೂಮಿ ಹಾಗೂ ಬಿತ್ತನೆಯಾಗಿರುವ ಬೆಳೆಯ ವಿವರ ದಾಖಲಾಗುತ್ತಿದೆ.ಕಳೆದ ವರ್ಷ ಒಟ್ಟು 2.01 ಕೋಟಿ ಭೂ ಪ್ರದೇಶಗಳು ಮತ್ತು ಬಿತ್ತನೆಯಾಗಿರುವ ಬೆಳೆಯನ್ನು ಗುರುತಿಸಲಾಗಿತ್ತು.ಈ ವರ್ಷ ಉದ್ದೇಶಿತ ಗುರಿ ತಲುಪುವ ನಿರೀಕ್ಷೆ ಇದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

      ಬೆಳೆ ವಿಮೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದ ಅವರು,ಸಹಕಾರ ಬ್ಯಾಂಕು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದವರು ಬೆಳೆವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂಬ ನಿಯಮವಿದೆ.ಆದರೆ ರೈತರು ಮಳೆಯ ಪ್ರಮಾಣವನ್ನು ಗುರುತಿಸಿ ಬೆಳೆವಿಮೆ ಮಾಡಿಸುತ್ತಾರೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

     ಬೆಳೆ ವಿಮೆ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ 546 ಕೋಟಿ ರೂ ಪ್ರೀಮಿಯಂ ಹಣ ಕಟ್ಟುತ್ತಿದ್ದು ರೈತರು ಸಣ್ಣ ಪ್ರಮಾಣದ ಪ್ರೀಮಿಯಂ ಕಟ್ಟುತ್ತಾರೆ ಎಂದು ಅವರು ಸ್ಪಷ್ಟ ಪಡಿಸಿದರು.ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲೇ ಸ್ನಾತಕೋತ್ತರ ಪದವಿ ತರಬೇತಿ ನೀಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು ಈಗಾಗಲೇ ಆರು ಆಸ್ಪತ್ರೆಗಳಲ್ಲಿ ಐವತ್ತು ಮಂದಿ ಪಿ.ಜಿ ತರಬೇತಿ ಪಡೆಯುತ್ತಿದ್ದಾರೆ.ಈ ವರ್ಷ ಇನ್ನೂ ಹತ್ತು ಆಸ್ಪತ್ರೆಗಳಲ್ಲಿ 72 ಮಂದಿಗೆ ಪಿ.ಜಿ ತರಬೇತಿ ನೀಡಲು ತೀರ್ಮಾನಿಸಲಾಗಿದೆ.

     ಪಿ.ಜಿ.ಕೋರ್ಸಿನ ನಂತರ ಎಂ.ಎಸ್.ಮಾಡಲು ಅವಕಾಶ ಕಲ್ಪಿಸಲಾಗುವುದು.ಅವರಿಗೆ ಮೂವತ್ತರಿಂದ ನಲವತ್ತು ಸಾವಿರ ರೂ ಸ್ಟೈಪೆಂಡ್ ನೀಡಲಾಗುವುದು ಎಂದ ಅವರು,ಈ ಯೋಜನೆಯ ಮೂಲಕ ನಮಗೆ ಕಡಿಮೆ ವೇತನದಲ್ಲಿ ತಜ್ಞ ವೈದ್ಯರು ಸಿಕ್ಕಂತಾಗುತ್ತದೆ.ಅದೇ ರೀತಿ ಕೋರ್ಸು ಮುಗಿದ ನಂತರ ಮೂರು ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಷರತ್ತು ಇರುವುದರಿಂದ ಆ ಮಟ್ಟಿಗೆ ತಜ್ಞ ವೈದ್ಯರ ಕೊರತೆ ಇಲ್ಲದಂತಾಗುತ್ತದೆ ಎಂದರು.

     ಈ ಸ್ನಾತಕೋತ್ತರ ಕೋರ್ಸುಗಳಿಗೆ ನೀಟ್ ಪದ್ಧತಿಯ ಪ್ರಕಾರವೇ ಸೀಟು ನೀಡಲಾಗುವುದು ಎಂದ ಅವರು,ಈ ವರ್ಷದ ಖರ್ಚಿಗಾಗಿ ಹದಿನಾರು ಕೋಟಿ ರೂಗಳಿಗಿಂತ ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದರು.ಯಾದಗಿರಿ ಸೇರಿದಂತೆ ರಾಜ್ಯದ ನಾಲ್ಕು ಭಾಗಗಳಲ್ಲಿ ಹೆರಿಗೆ ಆಸ್ಪತ್ರೆಗಳ ಆಧುನೀಕರಣ ಕಾರ್ಯ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರಿಗೆ ವಿವರಿಸಿದರು.

      ಎಸ್.ಟಿ ಮೀಸಲಾತಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಿತು.ಆರೆ ಮೀಸಲಾತಿ ಪ್ರಮಾಣ ಶೇಕಡಾ ಐವತ್ತಕ್ಕೆ ಸೀಮಿತವಾಗಬೇಕೋ?ಇಲ್ಲವೇ ಹೆಚ್ಚಾಗಬೇಕೋ?ಎಂಬ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಆಯೋಗ ಅಥವಾ ಸಮಿತಿಯನ್ನು ರಚಿಸಬೇಕು ಎಂದು ಯೋಚಿಸಲಾಗಿದೆ.

    ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ ಐವತ್ತನ್ನು ಮೀರುವಂತಿಲ್ಲ.ಆದರೆ ಎಸ್.ಟಿ ಮೀಸಲಾತಿಯನ್ನು ಇದರ ವ್ಯಾಪ್ತಿಯಲ್ಲಿ ಒದಗಿಸಲು ಮುಂದಾದರೆ ಇತರ ಸಮುದಾಯಗಳಿಗೆ ಸಿಗುತ್ತಿರುವ ಸವಲತ್ತು ಕಡಿಮೆಯಾಗುತ್ತದೆ. ಮೀಸಲಾತಿಯ ಪ್ರಮಾಣ ಶೇಕಡಾ ಐವತ್ತನ್ನು ಮೀರಿದರೆ ಸಮಸ್ಯೆ ಆಗುತ್ತದೆ.ಹೀಗಾಗಿ ಅಧ್ಯಯನ ಮಾಡಿಸಲು ಸಂಪುಟ ತೀರ್ಮಾನಿಸಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap