ತುರುವೇಕೆರೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರಿಗೆ ನೀಡಿದ್ದ ಮಾತಿನಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶದ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ರೂಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ.19 ರಂದು ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್‍ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮುನ್ನಾ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯದೆ ಅಲ್ಪಸ್ವಲ್ಪ ಸಾಲ ಮನ್ನಾ ಘೋಷಣೆ ಮಾಡಿ ಅದನ್ನು ಕೂಡ ಜಾರಿಗೆ ತರಲು ವಿಫಲರಾಗಿದ್ದಾರೆ. ಬ್ಯಾಂಕ್‍ಗಳು ಸಾಲದ ಬಾಕಿಗಾಗಿ ರೈತರಿಗೆ ನೋಟೀಸ್ ಜಾರಿ ಮಾಡುತ್ತಿವೆ. ರೈತರನ್ನು ಕೋರ್ಟ್‍ಗಳಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿಯ ಹಾಗೂ ಚಾಮರಾಜನಗರದ ರೈತರ ಮೇಲೆ ಆಕ್ಸಿಸ್ ಬ್ಯಾಂಕ್ ಕೊಲ್ಕತ್ತಾ ಕೋರ್ಟ್‍ನಲ್ಲಿ ದೂರು ದಾಖಲಿಸಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.
ಇದನ್ನು ರೈತ ಸಂಘ ಖಂಡಿಸಲಿದ್ದು ಮುಖ್ಯಮಂತ್ರಿಗಳು ಕೂಡಲೇ ಸಾಲಮನ್ನಾ ಬಗ್ಗೆ ಸ್ಪಷ್ಟ ಆದೇಶವನ್ನು ಬ್ಯಾಂಕ್‍ಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ನ.19 ವಿಧಾನಸೌಧ ಮುತ್ತಿಗೆ: ಮಾತಿನಂತೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು, ಇಲ್ಲದಿದ್ದರೆ ಗ್ರಾಮೀಣ ವಾಸಿಗಳ ಎಲ್ಲ ಸಾಲವನ್ನು ರದ್ದು ಮಾಡಿ ಸಾಲ ಮುಕ್ತ ಜೀವನ ನಡೆಸಲು ವ್ಯವಸ್ಥೆ ರೂಪಿಸಬೇಕು. ಕೃಷಿ ಚಟುವಟಿಕೆಗೆ ಹೆಚ್ಚು ಸಾಲ ದೊರಕಿಸಲು ಸರಳ ಸಾಲ ನೀತಿ ಜಾರಿಗೆ ತರಬೇಕು, ಬ್ಯಾಂಕ್‍ಗಳು ರೈತರಿಗೆ ನೀಡುತ್ತಿರುವ ಕಿರುಕುಳ ತಡಗಟ್ಟಬೇಕು, ಬರಗಾಲ ಪ್ರದೇಶದಲ್ಲಿ ಕೃಷಿ ಕುಟುಂಬಕ್ಕೆ 10 ಸಾವಿರ ಮಾಸಿಕ ಜೀವನ ಭತ್ಯೆ ಕೊಡಬೇಕು, ಹೆಕ್ಟೇರ್‍ಗೆ 25ಸಾವಿರ ನಷ್ಟ ಪರಿಹಾರ ನೀಡಬೇಕು, ಕೊಡಗು ಪುನರ್‍ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು, ಕೆಆರ್‍ಎಸ್ ಅಣೆಕಟ್ಟು ಉಳಿಸಲು ಸುತ್ತಮುತ್ತಲಿನ ಗಣಿಗಾರಿಕೆಯನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಹಲವು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ನ.19ರಂದು ವಿಧಾನ ಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕಿನಿಂದ ನೂರಾರು ರೈತರು ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂಪಾಷ, ಪದಾಧಿಕಾರಿಗಳಾದ ಶಿವಕುಮಾರ್, ರಹಮತ್, ಗಿರಿಯಪ್ಪ, ಶಿವಬಸವಯ್ಯ, ಬಾಬುಜಾನ್, ಜಯಣ್ಣ, ಮಂಜಣ್ಣ, ದೊರೆಸ್ವಾಮಿ, ಚಂದ್ರಯ್ಯ, ಅಶೋಕ್, ನಾಗಣ್ಣ, ರಾಜಣ್ಣ ಸೇರಿದಂತೆ ರೈತರು ಇದ್ದರು.