ಸೆ.21ರಂದು ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ

ಕುಣಿಗಲ್

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಭೂಸುಧಾರಣಾ ಕಾಯಿದೆ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಸೆ.21ರಂದು ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್ ತಿಳಿಸಿದರು.

    ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ತುಂಡು ಭೂಮಿಯನ್ನು ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ಈ ರೈತ ವಿರೋಧಿ ಕಾಯ್ದೆಗಳಿಂದ ತಮ್ಮ ಭೂಮಿಯು ಕೈ ತಪ್ಪುವ ಆತಂಕ ಹೆಚ್ಚಾಗಿದೆ. ಕೂಡಲೇ ಇಂತಹ ಅವೈಜ್ಞಾನಿಕ, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.

   ಈ ಸಂಬಂಧ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ರೈಲ್ವೇ ಸ್ಟೇಷನ್‍ನಿಂದ ಕಾಲ್ನಡಿಗೆಯ ಮುಖಾಂತರ ತೆರಳಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯು ವಿಧಾನಸೌಧದ ಮುತ್ತಿಗೆ ಹಾಕು ಕಾರ್ಯಕ್ರಮ ಹಮ್ಮಿಕೊಂಡಿದೆ. ಜೊತೆಗೆ ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು. ಈ ಪ್ರತಿಭಟನಾ ಕಾರ್ಯಕ್ರಮಕೆ ರಾಜ್ಯದ ನಾನಾ ಭಾಗಗಳಿಂದ ಒಂದು ಲಕ್ಷ ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

   ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಕೋವಿಡ್ ಅನ್ನೋ ನೆಪವೊಡ್ಡಿ 144 ಸೆಕ್ಷನ್ ಜಾರಿಗೊಳಿಸಿ ಇಡೀ ದೇಶವನ್ನು ಲಾಕ್ ಡೌನ್ ಮಾಡಿ, ದೇಶದ 130 ಕೋಟಿ ಜನರ ಬಾಯಿಗೆ ಬೀಗ ಹಾಕಿ, ಮುಖಕ್ಕೆ ಬಟ್ಟೆ ಕಟ್ಟಿಸಿ, ಯಾವುದೋ ಕೆಲವು ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗುವಂತಹ ರೈತವಿರೋಧಿ ಕಾನೂನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ರೈತ ವಿರೋಧಿ ಸರಕಾರಗಳಾಗಿವೆ.

   1960-70ರ ದಶಕಗಳಿಂದ ನಮ್ಮ ದೇಶದಲ್ಲಿ ತೀವ್ರತರವಾದ ಬರಗಾಲದ ಜೊತೆಗೆ ತಿನ್ನುವ ಅನ್ನಕ್ಕೂ ಹಾಹಾಕಾರ ಬಂದಾಗ ಅವತ್ತಿನ ಸರ್ಕಾರ ಹೊರ ರಾಷ್ಟ್ರಗಳಿಂದ ಗೋಧಿ ನುಚ್ಚು ಮತ್ತು ಜೋಳದ ನುಚ್ಚನ್ನು ತರಿಸಿ ರೈತರಿಗೆ ಆಹಾರ ಒದಗಿಸಿದ ಸಂದರ್ಭವನ್ನು ಸರ್ಕಾರಕ್ಕೆ ನೆನಪಿಸುತ್ತಾ, ಆ ಕಾಲದಲ್ಲಿ ನಮ್ಮ ದೇಶದ ಜನಸಂಖ್ಯೆ ಕೇವಲ 30 ಕೋಟಿ ಮಾತ್ರ ಆದರೆ ಈಗ 130 ಕೋಟಿ ಜನಸಂಖ್ಯೆಯಿದ್ದರೂ ಸಹ ಎಲ್ಲಾ ರೈತರು ಸಂತೃಪ್ತಿಯಾಗಿದ್ದಾರೆ. ಹೊರ ರಾಷ್ಟ್ರಗಳಿಗೆ ಸಹ ಕಳಿಸುವ ಈ ರೈತರು ನಮ್ಮ ಸರ್ಕಾರವನ್ನು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಯಾವುದೇ ತರಹದ ಸಬ್ಸಿಡಿಗಳನ್ನು ಸಹ ಕೊಡಿ ಎಂದು ಕೇಳಿಲ್ಲ. ಆದರೆ ದೇಶದಲ್ಲಿ ಅನ್ನಕ್ಕೆ ಆಹಾಕಾರ ಬಂದ ಸಂದರ್ಭದಲ್ಲಿ ಅಂದಿನ ಸರ್ಕಾರ ದೊಡ್ಡದಾದ ನಿರ್ಣಯವನ್ನು ಕೈಗೆತ್ತಿಕೊಂಡು ಅತೀ ಹೆಚ್ಚು ಆಹಾರ ಉತ್ಪಾದನೆ ಮಾಡಲು ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿತು.

     ಈ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ರೈತನಿಗೆ ಭೂಮಿ ಸಿಗಲೆಂದು ಅಂದಿನ ಸರ್ಕಾರ ಆದೇಶ ಮಾಡಿತು. ಆದರೆ ಈಗ ತಂದಿರುವ ತಿದ್ದುಪಡಿಯಲ್ಲಿ ಒಬ್ಬ ರೈತನಿಗೆ  ಭೂಮಿ ಇಳುವರಿ ಮಾಡಬೇಕೆಂದು ಏಕೆ ಮಾಡಿಲ್ಲ ಎಂದು ಆರೋಪಿಸಿದರು.ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್, ಯಡಿಯೂರು ಹೋಬಳಿ ಅಧ್ಯಕ್ಷರಾದ ಗೌರೀಶ್, ತಾಲ್ಲೂಕು ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಲಕ್ಷ್ಮಣಗೌಡ, ಮಹಿಳಾ ಅಧ್ಯಕ್ಷೆ ಹೇರೂರು ಶೈಲಜಾ, ಮುಖಂಡರಾದ ಕೀಲಾರ ಪ್ರಕಾಶ್, ಬೆಟ್ಟಹಳ್ಳಿ ಗಂಗರಾಜು, ಹೇರೂರು ಪ್ರವೀಣ್, ಕಾಡುಮತ್ತಿಕೆರೆ ರಾಮಣ್ಣ,ಭಕ್ತರಹಳ್ಳಿ ರಾಗಿ ರಂಗಸ್ವಾಮಿ, ಚಂದನಹಳ್ಳಿ ಮಧು ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link