ಗ್ರಾಮೀಣ ಪ್ರದೇಶದಲ್ಲಿ ಯಶಸ್ಸು ಕಾಣುತ್ತಿರುವ ವಿದ್ಯಾಗಮ ಯೋಜನೆ

ಕೊರಟಗೆರೆ

    ರಾಜ್ಯ ಸರ್ಕಾರವು ಕೊರೋನಾ ಭೀತಿಯಿಂದ ಶಾಲಾ ವಿದ್ಯಾರ್ಥಿಗಳನ್ನು ಪಾಠದ ಕಡೆ ಸೆಳೆಯಲು “ವಿದ್ಯಾಗಮ” ಹೆಸರಿನಲ್ಲಿ ನಿರಂತರ ಕಲಿಕಾ ಯೋಜನೆ ಜಾರಿಗೊಳಿಸಿದೆ. ಕೊರಟಗೆರೆ ತಾಲ್ಲೂಕಿನಲ್ಲೂ ಎಲ್ಲಾ ಶಾಲೆಗಳಲ್ಲಿ ವಿದ್ಯಾಗಮ ಯೋಜನೆಯ ನಿರಂತರ ಕಲಿಕೆಗೆ ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಕರು ಸಕಲ ಸಿದ್ದತೆ ಕೈಗೊಂಡಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗುರುಕುಲ ಪದ್ದತಿಯ ಮಾದರಿಯಲ್ಲಿ ವಿದ್ಯಾಗಮ ಯೋಜನೆ ಸಫಲತೆಯತ್ತ ಸಾಗುತ್ತಿರುವುದು ಕಂಡು ಬರುತ್ತಿದೆ.

    ತಾಲ್ಲೂಕಿನಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಈ ಯೋಜನೆ ಪ್ರಾರಂಭಗೂಂಡಿದೆ. ಪ್ರತಿ ಶಾಲೆಯಲ್ಲಿ ಶಿಕ್ಷಕರು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ತರಲು ಸಕಲ ಸಿದ್ದತೆ ನಡೆಸಿದ್ದಾರೆ. ತಾಲ್ಲೂಕಿನಲ್ಲಿ ವಿದ್ಯಾಗಮ ಯೋಜನೆಯ ಅನುಷ್ಠಾನಕ್ಕೆ ಶೇ. 90 ಕ್ಕೂ ಮೀರಿ ತಯಾರಿ ನಡೆಸುತ್ತಿರುವುದು ಕಂಡುಬಂದಿದೆ.

    ಕೋವಿಡ್-19 ರ ತೀವ್ರತೆಯ ನಡುವೆಯೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು, ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವುದು ಈ ಯೋಜನೆಯ ಮಹತ್ವಾಕಾಂಕ್ಷೆಯಾಗಿದೆ. ಇದಕ್ಕೆ ಪೂರಕವಾಗಿ ತಾಲ್ಲೂಕಿನ ಎಲ್ಲಾ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿರುವುದನ್ನು ಕಾಣಬಹುದಾಗಿದೆ.

    ಕಳೆದ 4-5 ತಿಂಗಳಿಂದ ಲಾಕ್‍ಡೌನ್ ಸೇರಿದಂತೆ ಕೊರೋನಾ ಭೀತಿಯಿಂದ ವಿದ್ಯಾರ್ಥಿಗಳು ಶಾಲೆಯಿಂದ ದೂರವಿದ್ದರು. ಅಷ್ಟೇ ಅಲ್ಲದೆ ಬರೀ ಆಟೋಟಗಳಲ್ಲೆ ಕಾಲ ಕಳೆದು, ಶಾಲೆ ಮರೆತು, ಶಿಕ್ಷಣದಿಂದ ನಿರ್ಲಕ್ಷ್ಯಕ್ಕೊಳಗಾಗುವ ಹಂತದಲ್ಲಿದ್ದರು. ಈ ಸಂದರ್ಭದಲ್ಲಿ ಈ ವಿದ್ಯಾಗಮ ಯೋಜನೆ ವಿದ್ಯಾರ್ಥಿಗಳ ಬಾಳಿಗೆ ಸಂಜೀವಿನಿಯಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಶಿಕ್ಷಕರು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಊರುಗಳಿಗೆ ಬರುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿದೆ. ಶಿಕ್ಷಕರನ್ನು ಕಂಡ ವಿದ್ಯಾರ್ಥಿಗಳು ಹರ್ಷದಿಂದ ಅವರನ್ನು ಬರಮಾಡಿಕೊಳ್ಳುತ್ತಾ ಖುಷಿಯಿಂದಲೆ ಪಾಠ ಪ್ರವಚನಗಳಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

   ತಾಲ್ಲೂಕಿನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಸಾಮಾನ್ಯವಾಗಿ 4-5 ಊರುಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲು, ಆಯಾ ಊರುಗಳ ಶಾಲೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅನಿವಾರ್ಯವೆನಿಸಿದರೆ ದೇವಾಲಯ, ಜಗಲಿ ಕಟ್ಟೆ, ದೊಡ್ಡ ದೊಡ್ಡ ಮನೆಗಳನ್ನು, ವರಾಂಡಗಳನ್ನು ಬಳಸಿಕೊಂಡು, ಆಯಾ ಊರುಗಳ ಅನುಕೂಲ ಸ್ಥಿತಿಗಳಿಗೆ ಅನುಗುಣವಾಗಿ ಶಿಕ್ಷಕರು ವಿದ್ಯಾಗಮ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ತಂತ್ರಜ್ಞಾನ ಹೊರತಾಗಿ ಸಾಮೂಹಿಕ ಪಾಠ ಪ್ರವಚನಗಳು ಬ್ಲಾಕ್ ಬೋರ್ಡ್‍ಗಳ ಮೂಲಕ ನಡೆಯುತ್ತಿವೆ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಾಲೆಯ ಅನುಭವ ರೂಪಾಂತರಗೊಳ್ಳುತ್ತಿರುವುದು ಕಂಡುಬರುತ್ತಿದೆ.

   ತಾಲ್ಲೂಕಿನ ಪ್ರತಿಯೊಂದು ಶಾಲೆಯಲ್ಲಿಯೂ ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕಗಳು ವಿತರಣೆಗೊಂಡಿವೆ. ಶೈಕ್ಷಣಿಕ ವರ್ಷಾರಂಭದಲ್ಲಿ ಶಾಲೆಗಳಲ್ಲಿ ಪಠ್ಯಪುಸ್ತಕಗಳು ವ್ಯವಸ್ಥಿತವಾಗಿ ಹಂಚಿಕೆಯಾಗುತ್ತಿದ್ದ ಪರಿಸ್ಥಿತಿ ಕೊರೋನದಿಂದ ಮಾಯವಾಯಿತು. ವ್ಯವಸ್ಥೆಗನುಗುಣವಾಗಿ ತಡವಾಗಿಯಾದರೂ ಎಲ್ಲಾ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕಗಳು ಕೈ ಸೇರಿವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ಮೂಲಕ ಹಂತ ಹಂತವಾಗಿ ನೇರವಾಗಿ ಪಾಠ ಬೋಧನೆ ಹಾಗೂ ಆನ್‍ಲೈನ್‍ನಲ್ಲಿ ಶಿಕ್ಷಣ ವರ್ಷಾರಂಭಗೊಂಡಿದೆ. ಪ್ರತಿಷ್ಠಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಮೂಲಕ ಶೈಕ್ಷಣಿಕ ವರ್ಷಾರಂಭಗೊಳ್ಳುತ್ತಿದೆ.

   ರಾಜ್ಯ ಸರ್ಕಾರವು ವೇಳಾಪಟ್ಟಿಗೆ ಅನುಸಾರವಾಗಿ ಸರ್ಕಾರಿ ಸ್ವಾಮ್ಯದ ಚಂದನ ಟಿವಿಯಲ್ಲಿ 1 ರಿಂದ 12 ನೆ ತರಗತಿವರಗೆ ಪಾಠ ಪ್ರವಚನ ನಡೆಸುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉತ್ತಮ ಶಿಕ್ಷಕರಿಂದ ಪಾಠ ಬೋಧನೆ ಪ್ರಾರಂಭಿಸಿದರಾದರೂ, ಗ್ರಾಮೀಣ ಪ್ರದೇಶದ ಎಷ್ಟೊ ಮನೆಗಳಲ್ಲಿ ಟಿವಿ ಇಲ್ಲದೆ, ಇದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ವಿದ್ಯಾರ್ಥಿಗಳು ಹಳ್ಳಿಗಾಡುಗಳ ಪ್ರದೇಶದಲ್ಲಿ ಚಂದನ ಟಿವಿ ವೀಕ್ಷ್ಷಿಸುವುದು ವಿರಳವಾಗಿದೆ. ಜೊತೆಗೆ ಮೊಬೈಲ್ ಮೂಲಕ ಆನ್‍ಲೈನ್ ಬೋಧನೆ ಕೂಡ ಕಿರಿಕಿರಿಯಾಗುತ್ತಿದೆ. ಎಷ್ಟೋ ವಿದ್ಯಾರ್ಥಿಗಳ ಮನೆಯಲ್ಲಿ ಮೊಬೈಲ್ ಇದ್ದರೂ ಇಂಟರ್‍ನೆಟ್ ಪ್ಯಾಕೇಜ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದ ಕಾರಣ ವಿದ್ಯಾಗಮ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಬಹಳಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

    ಒಟ್ಟಾರೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿದ್ಯಾಗಮ ಯೋಜನೆ ಕೊರಟಗೆರೆ ತಾಲ್ಲೂಕಿನಲ್ಲಿ ಬಹುತೇಕ ಯಶಸ್ಸಿನ ಹಾದಿಯಲ್ಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಾಡಿಮಿಡಿತ ಹಿಡಿದು ಸಾಗಿದರೆ ಶೈಕ್ಷಣಿಕ ವರ್ಷಾರಂಭದ ವಿಳಂಬವನ್ನು ತುಂಬ ಬಹುದಾಗಿದೆ. ಈ ಯೋಜನೆಯ ಇನ್ನಷ್ಟು ಯಶಸ್ಸಿಗೆ ಶಿಕ್ಷಕರು ಅವಿರತ ಶ್ರಮಿಸುವ ಅವಶ್ಯಕತೆ ಇದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap