ಯಶಸ್ವಿ ನಡೆಯಲ್ಲಿ ವಿದ್ಯಾಗಮ ಯೋಜನೆ

ಹುಳಿಯಾರು

    ಪ್ರಸಕ್ತ ಕೊರೊನಾ ವೈರಸ್ ಹರಡುತ್ತಿರುವ ಸಮಯದಲ್ಲಿ ಸರ್ಕಾರ ಮಕ್ಕಳ ಶಿಕ್ಷಣ ನಿಲುಗಡೆಯಾಗದಂತೆ ಮುಂದುವರಿಸಲು ರೂಪಿಸಿದ ‘ವಿದ್ಯಾಗಮ’ ಯೋಜನೆ ಹುಳಿಯಾರು ಹೋಬಳಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಗಾಗಲೇ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆಯಲ್ಲದೆ ಸರ್ಕಾರದ ನಿಯಮಾವಳಿ ಪ್ರಕಾರ ಬಯಲಿನಲ್ಲಿ ತರಗತಿಗಳು ಸಹ ನಡೆಸುತ್ತಿದ್ದೇವೆ. ನಿತ್ಯವೂ ತರಗತಿಗಳಲ್ಲಿ ಎಲ್ಲ ವಿಷಯಗಳ ಪಾಠ, ಗುಂಪು ಚರ್ಚೆ, ಪೂರ್ವ ಸಾಫಲ್ಯ ಪರೀಕ್ಷೆ, ಕಿರು ಪರೀಕ್ಷೆ, ಸೇತುಬಂಧ ನಡೆಯುತ್ತಿದೆ.

     ಮಕ್ಕಳು, ಪೋಷಕರು ವಿದ್ಯಾಗಮ ಯೋಜನೆಗೆ ಸಹಕರಿಸುತ್ತಿದ್ದು, ಹಾಜರಾತಿ ಕೂಡ ಉತ್ತಮವಾಗಿದೆ. ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕಿಂತಲೂ ಬಯಲು ಶಾಲೆಯಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಆದರೆ ಒಮ್ಮೆ ಐವರು ಮಕ್ಕಳಿಗೆ ಮಾತ್ರ ಬೋಧನೆಗೆ ಸರ್ಕಾರ ಮಿತಿ ನಿಗದಿ ಮಾಡಿರುವುದು ಕೆಲ ಮಕ್ಕಳಿಗೆ ತೊಂದರೆಯಾಗಿದೆ.

     ಕೆಲ ಶಿಕ್ಷಕರು ದಿನಕ್ಕೊಂದು ತರಗತಿವಾರು ಮಕ್ಕಳಿಗೆ ಬರಲು ಸೂಚಿಸಿದರೆ ಮತ್ತೆ ಕೆಲ ಶಿಕ್ಷಕರು ನಿರ್ದಿಷ್ಟ ಸಮಯವಾರು ಮಕ್ಕಳನ್ನು ಕರೆಸಿ ಪಠ್ಯ ಬೋಧಿಸುತ್ತಿದ್ದಾರೆ. ಇದರಿಂದ ವೈಯಕ್ತಿಕವಾಗಿ ಪ್ರತಿ ವಿದ್ಯಾರ್ಥಿಯ ವಿದ್ಯಾಭ್ಯಾಸದ ಕಡೆ ಗಮನಹರಿಸಲು ಸಾಧ್ಯವಾಗಿದೆ ಎಂಬ ಅಭಿಪ್ರಾಯವೂ ಶಿಕ್ಷಕರಿಂದ ವ್ಯಕ್ತವಾಗುತ್ತಿದೆ.

    ಶಾಲೆಗಳಿಲ್ಲದ ಹಳ್ಳಿಗಳಲ್ಲೂ ಕೂಡ ಶಾಲಾ ಮಕ್ಕಳಿಗೆ ತರಗತಿ ನಡೆಸುತ್ತಿರುವುದು ಪೋಷಕರಿಗೆ ಸಂತಸದ ವಿಷಯವಾಗಿರುವ ಜೊತೆಗೆ ಮಕ್ಕಳು ನಡೆದು ಶಾಲೆಗೆ ಹೋಗುವುದು ತಪ್ಪಿದಂತಾಗಿದೆ. ಅಲ್ಲದೆ ಶಿಕ್ಷಕರು ಹೇಗೆ ಪಾಠ ಮಾಡುತ್ತಿದ್ದಾರೆಂದು ನೋಡುವ ಅವಕಾಶ ಸಹ ಸಿಕ್ಕಿದಂತಾಗಿದೆ ಎನ್ನುವ ಮಾತುಗಳು ಹಳ್ಳಿಗರಿಂದ ಕೇಳಿ ಬರುತ್ತಿದೆ.

   ಮಕ್ಕಳಿಗೆ ಮೊಬೈಲ್, ಆನ್‍ಲೈನ್ ಶಾಲೆ, ಟಿವಿ ಪಾಠಕ್ಕಿಂತ ಬಯಲು ಶಾಲೆ ಶಿಕ್ಷಣ ‘ವಿದ್ಯಾಗಮ’ ಉತ್ತಮ ಯೋಜನೆಯಾಗಿದ್ದು, ಮೊಬೈಲ್ ಇಲ್ಲದ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಿದೆ. ಸ್ಯಾನಿಟೈಸರ್ ಬಳಸುವುದು ಹಾಗೂ ಮಾಸ್ಕ್ ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link