ಚಿತ್ರದುರ್ಗ:
ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ನೀಡಿರುವ ನೋಟಾ ಚಲಾವಣೆಯ ಹಕ್ಕು ಈಗ ಶಾಲಾ ಸಂಸತ್‍ಗೆ ನಡೆದ ಚುನಾವಣೆಯಲ್ಲಿ ಮಕ್ಕಳಿಗೂ ಲಭಿಸಿತು.
ಕಡ್ಲೆಗುದ್ದ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಾಲಾ ಸಂಸತ್ತಿನ ಚುನಾವಣೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ನಡೆದಿದ್ದು, ಒಂದು ವಿಶೇಷವಾಗಿತ್ತು. ಚುನಾವಣೆಗೆ ಇ.ವಿ.ಎಂ.ಮೆಷಿನ್ ಬಳಸಲಾಯಿತು. ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂದಕ್ಕೆ ಪಡೆಯುವುದು, ಚುನಾವಣಾ ಪ್ರಚಾರ, ಮತದಾನದ ದಿನಾಂಕ, ಮತ ಎಣಿಕೆ ಹೀಗೆ ಎಲ್ಲಾ ಪ್ರಕ್ರಿಯೆಗಳು ಕ್ರಮಬದ್ದವಾಗಿ ನಡೆದವು.
ಮತದಾನದ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಮಂಜುನಾಥ್, ನಟರಾಜ್, ಕರಿಬಸಪ್ಪ ಕಾರ್ಯನಿರ್ವಹಿಸಿದರು. ಪ್ರತಿ ವಿದ್ಯಾರ್ಥಿಗಳಿಗೆ ಹಾಗೂ ಮತದಾನದ ಅಧಿಕಾರಿಗಳಿಗೆ ಗುರುತಿನ ಚೀಟಿ, ಮತದಾನದ ಅಧಿಕಾರಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯನ್ನು ವಿತರಿಸಲಾಯಿತು.
ಮತದಾನದ ಕೇಂದ್ರದಲ್ಲಿ ಗುರುತಿನ ಚೀಟಿಯೊಂದಿಗೆ ಸರತಿ ಸಾಲಿನಲ್ಲಿ ಬಂದ ವಿದ್ಯಾರ್ಥಿಗಳು ಸಹಿ ಹಾಕಿ ಬ್ಯಾಲೆಟ್ ಪಡೆದು ಇ.ವಿ.ಎಂ.ಯಂತ್ರದಲ್ಲಿ ಮುಕ್ತ ನ್ಯಾಯಸಮ್ಮತವಾಗಿ ಮತಚಲಾಯಿಸಿದರು. ಮತದಾನ ಮಾಡುವುದಕ್ಕೂ ಮುನ್ನ ಎಡಗೈ ತೋರುಬೆರಳಿಗೆ ಅಳಿಸಲಾಗದಂತ ಮಸಿ ಗುರುತು ಹಾಕಲಾಯಿತು. ಮತದಾನ ಮುಗಿದ ನಂತರ ಮತದಾನದ ಲೆಕ್ಕಪತ್ರ, ಇವಿಎಂ. ಯಂತ್ರ ಮತ್ತಿತರೆ ಸಾಮಾಗ್ರಿಗಳನ್ನು ಚುನಾವಣಾ ಆಯುಕ್ತರುಗಳಾದ ಚಿತ್ರಲಿಂಗಪ್ಪ, ನಾಗರಾಜ್ ಕೌಂಟರ್‍ನಲ್ಲಿ ಪಡೆದುಕೊಂಡರು.
ಅಭ್ಯರ್ಥಿಗಳ ಸಮಕ್ಷಮದಲ್ಲಿ ಶಿಕ್ಷಕರುಗಳಾದ ಮಂಜಪ್ಪ, ಸಿದ್ದಪ್ಪ ಇವರುಗಳು ಮತ ಎಣಿಕೆ ನಡೆಸಿ ನಂತರ ವಿಜೇತ ಅಭ್ಯರ್ಥಿಗಳನ್ನು ಘೋಷಿಸಿದರು.
ಪ್ರಧಾನ ಮಂತ್ರಿಯಾಗಿ ಹತ್ತನೆ ತರಗತಿಯ ಮಲ್ಲಿಕಾರ್ಜುನ ಆಯ್ಕೆಯಾದರು. ಮುಖ್ಯ ಶಿಕ್ಷಕ ಮಹೇಶ್ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಶಾಲಾ ಸಂವಿಧಾನಕ್ಕೆ ಬದ್ದರಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿ ಅಭಿನಂದಿಸಿದರು.ಗ್ರಾಮ ಪಂಚಾಯಿತಿ ಸದಸ್ಯರುಗಳು, ಪೋಷಕರು ಹಾಗೂ ಗ್ರಾಮಸ್ಥರು ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿ ವಿಜೇತ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
