ತುಮಕೂರು
ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಜ್ಞಾನವಿರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಶ್ರೇಷ್ಠ ಸಾಧನೆ ಮಾಡಬಲ್ಲರು. ಜ್ಞಾನ ವಿಕಾಸದ ಕೇಂದ್ರಗಳಾಗಿರುವ ಶಿಕ್ಷಣ ಸಂಸ್ಥೆಗಳು ಅಂತಹ ಕೆಲಸ ಮಾಡುತ್ತಿವೆ. ಜ್ಞಾನ ಹಾಗೂ ಪ್ರತಿಭೆ ವಿದ್ಯಾರ್ಥಿಗಳ ಭವಿಷ್ಯ ಬೆಳಗಲು ಸಹಕಾರಿಯಾಗುತ್ತದೆ ಎಂದು ಅಂತಾರಾಷ್ಟ್ರೀಯ ಖ್ಯಾತಿ ಕ್ರೀಡಾಪಡು ಅರ್ಜುನ್ ದೇವಯ್ಯ ಹೇಳಿದರು.
ನಗರದ ಸಪ್ತಗಿರಿ ಪಿಯೂ ಕಾಲೇಜಿನಲ್ಲಿ ಪ್ರಥಮ ಪಿಯೂಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಹಾಗೂ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅಂಕುರ-19 ಸಮಾರಂಭದಲ್ಲಿ ಮಾತನಾಡಿದ ಅವರು, ಪರೀಕ್ಷೆ ಅಂಕಗಳಂತೆ ಜೀವನದ ಮೌಲ್ಯಗಳ ಅಂಕಗಳನ್ನೂ ವಿದ್ಯಾರ್ಥಿಗಳು ಗಳಿಸಿಕೊಳ್ಳಬೇಕು.
ಅವು ಕುಸಿಯದಂತೆ ರೂಢಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಎಷ್ಟೋ ದಾರ್ಶನಿಕರು ಮೌಲ್ಯಾದಾರಿತ ವಿಚಾರಗಳನ್ನು ಸಾರಿ ಹೋಗಿದ್ದಾರೆ. ಅವುಗಳನ್ನು ಎಷ್ಟು ಜನ ಅನುಸರಿಸುತ್ತಿದ್ದಾರೆ. ಕೇವಲ ವಿಚಾರ, ತತ್ವಗಳು ಜನರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಸತತ ಅಭ್ಯಾಸ, ಪರಿಶ್ರಮ, ಗುರಿ ಸಾಧಿಸುವ ಛಲ ಯಶಸ್ಸು ತಂದುಕೊಡುತ್ತದೆ. ಕಲಿಕೆಯ ಅವಧಿಯಲ್ಲಿರುವ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಹೆಚ್ಚು ಕಲಿತು ಜ್ಞಾನ ಸಂಪಾದಿಸಿಕೊಳ್ಳ ಬೇಕು. ಕಲಿಕೆ ನಿರಂತರವಾಗಿದ್ದು, ಅದರಿಂದ ದೊರೆಯುವ ಜ್ಞಾನ ಶ್ರೇಷ್ಠ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಅನುಭವ ಎಂಬುದು ಶ್ರೇಷ್ಠ ಶಿಕ್ಷಕ ಹಾಗೂ ಶಿಕ್ಷಣ. ಕಲಿಕೆ ನಿರಂತರವಾಗಿರಲಿ, ಸಾಧನೆಗೆ ಗುರಿ ಇರಲಿ. ಎಲ್ಲರ ಗುರಿ ಸಾಧನೆಯೇ ಆಗಿರುತ್ತದೆ. ಉನ್ನತ ಮಟ್ಟದ ಆಲೋಚನೆಗಳು, ಶ್ರೇಷ್ಠ ಚಿಂತನೆಗಳು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಾಧನೆಯ ಹಾದಿ ತೆರೆದುಕೊಳ್ಳುತ್ತದೆ ಎಂದು ಹೇಳಿದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣನವರು ಮಾತನಾಡಿ, ಈಗ ವಿದ್ಯಾಭ್ಯಾಸ ಬಹಳ ಮುಖ್ಯ. ವಿದ್ಯೆಯು ವ್ಯಕ್ತಿತ್ವ ರೂಪಿಸುತ್ತದೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಅಂಕಗಳಿಸುವ ಕಾರ್ಖಾನೆಗಳಾಗಿ ಮಾಡುತ್ತಿದ್ದೇವೆ. ಅಂಕಗಳ ಜೊತೆಗೆ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಜೀವನ ಮೌಲ್ಯ, ಜೀವನ ಕ್ರಮವನ್ನು ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಬಹು ಮುಖ್ಯವಾಗಿ ಶಿಸ್ತು, ಸಂಯಮ, ಸಮಯ ಪಾಲನೆ ಅನುಸರಿಸಬೇಕು. ಈ ಮೂರು ವಿಚಾರಗಳನ್ನು ಕಡೆಗಣಿಸಿದರೆ ಸಾಧನೆ ಮಾಡಲು ಆಗುವುದಿಲ್ಲ. ಶಿಕ್ಷಣ ಸಂಸ್ಥೆಗಳು ಕೂಡಾ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ, ಅವರ ಬುದ್ದಿ ಸಾಮಥ್ರ್ಯ ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸಪ್ತಗಿರಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಿ ಎಸ್ ಕುಮಾರ್, ಕಾರ್ಯದರ್ಶಿ ಪದ್ಮಾ ರೇಖಾ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃಣಾಲ್ ಕುಮಾರ್, ಚೀಫ್ ಬಿಲೀಫ್ ಆಫೀಸರ್ ಅರ್ಚನಾ ಎಸ್ ಕುಮಾರ್, ಸಂಸ್ಥೆಯ ಆಡಳಿತಾಧಿಕಾರಿ ಚನ್ನಪ್ಪ ಬಾರಿಗಿಡದ್, ಪ್ರಾಂಶುಪಾಲರಾದ ಡಾ. ಹೆಚ್ ಎಸ್ ನಿರಂಜನಾರಾಧ್ಯ ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಕಾಲೇಜಿನ ದ್ವಿತೀಯ ಪಿಯೂಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅವರ ಸಾಧನೆ ಪ್ರಶಂಸಿಸಲಾಯಿತು. ಸಂಸ್ಥೆಯ ವಿವಿಧ ಸ್ಪರ್ಧೆ, ಪುರಸ್ಕಾರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.