ತುಮಕೂರು
ನೀರನ್ನು ಪೋಲು ಮಾಡಬೇಡಿ, ಮಳೆ ನೀರು, ಮನೆಗಳಲ್ಲಿ ಬಳಸಿದ ನೀರನ್ನೂ ಮರುಬಳಕೆ ಮಾಡಿಕೊಳ್ಳುವುದು ಇಲ್ಲವೆ, ಭೂಮಿಯಲ್ಲಿ ಇಂಗಿಸಿ ಮತ್ತೆ ಪಡೆದು ಬಳಸಿಕೊಳ್ಳಿ ಎನ್ನುವುದು ಈ ಶಾಲಾ ವಿದ್ಯಾರ್ಥಿನಿ ಕಾಳಜಿಯ ಮನವಿ.
ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಿದ್ದ ರಾಷ್ಟ್ರೀಯ ಪರಿಸರ ಆವಿಷ್ಕಾರ ಮೇಳ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ವಸ್ತುಪ್ರದರ್ಶನ ಏರ್ಪಡಿಸಿದ್ದರು. ನಗರದ ಗಾಂಧಿನಗರ ಸೆಂಟ್‍ಮೇರೀಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಟಿ ವಿ ಭರಣಿ ನೀರಿನ ಸದ್ಬಳಕೆ, ಸಂಗ್ರಹದ ಬಗ್ಗೆ ತನ್ನ ಪ್ರಾತಕ್ಷತೆಯ ಮಾದರಿ ಪ್ರದರ್ಶಿಸಿ ಗಮನ ಸೆಳೆದರು.
ವಿವಿಧ ಗಾತ್ರದ ಜೆಲ್ಲಿ ಅಥವಾ ಜೆಲ್ಲಿ ರೂಪದ ಸಿಮೆಂಟ್ ಕಾಂಕ್ರಿಟ್ ಚೂರುಗಳನ್ನು ಬಳಸಿ, ನೀರನ್ನು ಶುದ್ದೀಕರಿಸಿ ಮರು ಬಳಸುವ ಬಗ್ಗೆ ಪ್ರದರ್ಶನ ವೀಕ್ಷಣೆಗೆ ಬಂದವರಿಗೆಲ್ಲಾ ವಿವರಣೆ ನೀಡಿದರು. ಮೂರು ಗಾತ್ರದ ಜೆಲ್ಲಿಗಳನ್ನು ಮೂರು ಪದರಗಳಲ್ಲಿ ಜೋಡಿಸಿ ಅದರ ಮೇಲೆ ಹರಿಯುವ ನೀರು ಭೂಮಿಯಲ್ಲಿ ಸುಲಭವಾಗಿ ಇಂಗುತ್ತದೆ. ಸಂಗ್ರಹಾಗಾರದಲ್ಲಿ ಈ ರೀತಿ ಜೆಲ್ಲಿ ಜೋಡಿಸಿ, ತೊಟ್ಟಿಗಳಿಗೆ ತುಂಬಿಸಿಕೊಂಡರೆ ವಾಹನ, ಪ್ರಾಣಿಗಳನ್ನು ತೊಳೆಯಲು, ಗಿಡಗಳಿಗೆ ಹಾಕಲು ಬಳಸಬಹುದು.
ಇದೇ ಮಾದರಿಯಲ್ಲಿ ರಸ್ತೆ ಬದಿ, ಫುಟ್ ಪಾತ್‍ನಲ್ಲಿ ಅಳವಡಿಸಿದರೆ ಮಳೆ ನೀರು ಸಂಗ್ರಹ ಮಾಡಬಹುದು ಅಥವಾ ನೆಲದಲ್ಲಿ ಇಂಗಿಸಿ ಅಂತರ್ಜಲ ಹೆಚ್ಚಿಸಬಹುದು. ಮನೆ ಬಳಿ ಇಂತಹ ಘಟಕಗಳನ್ನು ಮಾಡಿಕೊಂಡರೆ ಮಳೆ ನೀರು ಹಾಗೂ ಮನೆಯಲ್ಲಿ ಬಳಸಿದ ನೀರನ್ನು ಸಂಗ್ರಹಿಸಿ, ಇತರೆ ಉಪಯೋಗಕ್ಕೆ ಬಳಸಬಹುದು. ದೊಡ್ಡ ಪ್ರಮಾಣದಲ್ಲಿ ಮಾಡಿ ನೀರನ್ನು ಇಂಗಿಸಿದರೆ ಮನೆಯ ಕೊಳವೆ ಬಾವಿಯನ್ನು ಜಲಪೂರ್ಣ ಮಾಡಬಹುದು ಎಂದು ಭರಣಿ ಹೇಳಿದರು.
ನಗರ, ಹಳ್ಳಿಗಳಲ್ಲಿ ಹೀಗೆ ಬಳಸಿದ ನೀರನ್ನು ಸೋಸಿ, ಗಿಡ, ಹಸಿರು ಬೆಳೆಸಲು ಅಥವಾ ಇತರೆ ಕೆಲಸಗಳಿಗೆ ನೀರನ್ನು ಪಡೆದು ಬಳಸಬಹುದು. ನಾವು ಅನಗತ್ಯವಾಗಿ ನೀರನ್ನು ಪೋಲು ಮಾಡುತ್ತೇವೆ, ಮನೆ ಮುಂದಿನ ರಸ್ತೆ ತೊಳೆಯಲು, ವಾಹನ, ಪ್ರಾಣಿಗಳನ್ನು ತೊಳೆಯಲು ಉಪಯೋಗಿಸುವ ನೀರನ್ನು ದಂಡವಾಗಿ ಹರಿದು ಹೋಗಲು ಬಿಡದೆ ಸಂಗ್ರಹಿಸಿ, ಇಲ್ಲವೆ ಭೂಮಿಯಲ್ಲಿ ಇಂಗಿಸಿ ಎಂದು ಭರಣಿ ತನ್ನ ಪ್ರಾತಕ್ಷತೆ ಮೂಲಕ ತಿಳಿಸಿಕೊಟ್ಟರು.
ನೀರಿನ ಸಂರಕ್ಷಣೆ, ಹಸಿರು ಬೆಳೆಸುವುದು, ಹಸಿ ಕಸ, ಒಣ ಕಸ ಬೇರ್ಪಡಿಸಿ ಸಂಸ್ಕರಿಸುವುದು ಮುಂತಾಗಿ ಪರಿಸರ ರಕ್ಷಣೆ ಕುರಿತು ವಿದ್ಯಾರ್ಥಿಗಳು ತಮ್ಮ ಪ್ರಾತಕ್ಷತೆ ಮೂಲಕ ಜನ ಜಾಗೃತಿ ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
