ದಾವಣಗೆರೆ:
ವಿಶ್ವ ಹಿಂದು ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಇವುಗಳ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ಬಾರಿಯು ಅ.10ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ದೇವರಮನಿ ಶಿವಕುಮಾರ್ ತಿಳಿಸಿದರು.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10ರಂದು ಬೆಳಿಗ್ಗೆ 9 ಗಂಟೆಗೆ ನಿಟ್ಟುವಳ್ಳಿಯ ಶ್ರೀದುರ್ಗಾಂಭಿಕೆ ದೇವಸ್ಥಾನದಿಂದ ಪೂರ್ಣಕುಂಭ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಿಬಿ ರಸ್ತೆಯಲ್ಲಿರುವ ಶ್ರೀಬೀರಲಿಂಗೇಶ್ವರ ದೇವಸ್ಥಾನ ತಲುಪಿ ಮುಕ್ತಾಯವಾಗಲಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರಿಂದ ದೇವಿಯ ವಿಗ್ರಹದ ಘಟಸ್ಥಾಪನೆ ನಡೆಯಲಿದೆ. ಇಲ್ಲಿ 9 ದಿನಗಳ ಕಾಲವು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಲಿದೆ. ಅಲ್ಲದೆ, ಪ್ರತಿದಿನ ಮಾತೆಯರಿಂದ ಲಲಿತ ಸಹಾಸ್ರನಾಮ ಜಪ ನಡೆಯಲಿದೆ ಎಂದು ಹೇಳಿದರು.
ಅ. 13ರಂದು ಬೆಳಗ್ಗೆ 10.30ಕ್ಕೆ ನಗರದ ರಾಮ್ ಅಂಡ್ ಕೋ ವೃತ್ತದಿಂದ ಮಹಿಳಾ ಬೈಕ್ ಜಾಥಾ, 15ರಂದು ಬೆಳಗ್ಗೆ 10.30ಕ್ಕೆ ನಗರದ ಹೈಸ್ಕೂಲ್ ಮೈದಾನದಿಂದ ಆಟೋ ರ್ಯಾಲಿ, 16ರಂದು ಬೆಳಿಗ್ಗೆ 10.30ಕ್ಕೆ ರಾಮ್ ಅಂಡ್ ಕೋ ವೃತ್ತದಿಂದ ಬೈಕ್ ಜಾಥಾ, ಅ.18ರಂದು ಬೆಳಗ್ಗೆ 10ಕ್ಕೆ ನಗರದೇವತೆ ಶ್ರೀದುರ್ಗಾಂಭಿಕಾ ದೇವಸ್ಥಾನದಿಂದ ದುರ್ಗಾದೌಡ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ವಿಜಯ ದಶಮಿಯ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ಅ.19ರಂದು ನಗರದಲ್ಲಿ ಪೂರ್ಣಕುಂಭದೊಂದಿಗೆ ಬೃಹತ್ ಶೋಭಾಯಾತ್ರೆ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 11.30ಕ್ಕೆ ನಗರದ ಶ್ರೀವೆಂಕಟೇಶ್ವರ ವೃತ್ತದಿಂದ ಆರಂಭವಾಗುವ ಶೋಭಾಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬೀರಲಿಂಗೇಶ್ವರ ದೇವಸ್ಥಾನದ ಮೈದಾನ ತಲುಪಿ ಮುಕ್ತಾಯವಾಗಲಿದೆ. ಈ ಮೆರವಣಿಗೆಗೆ ವಿವಿಧ ಕಲಾತಂಡಗಳು ಮೆರಗು ನೀಡಲಿವೆ. ಅದರಲ್ಲೂ ಸುಮಾರು 100ಕ್ಕೂ ಹೆಚ್ಚು ಕಲಾವಿದರು ಇರುವ ಮಾಹಾರಾಷ್ಟ್ರದ ಡೋಲ್ ತಾಷ್ ಕಲಾ ತಂಡವು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಅಂದು ಸಂಜೆ 6 ಗಂಟೆಗೆ ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಿಲ್ಲಾಧಿಕಾರಿಗಳಿಂದ ಅಂಬುಛೇದನ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಬೆಂಗಳೂರು ಕಿದ್ವಾಯಿ ಆಸ್ಪತ್ರೆಯ ನಿವೃತ್ತ ನಿರ್ದೇಶಕಕಿ ವಿಜಯಲಕ್ಷ್ಮಿ ದೇಶಮಾನೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಉಪವಿಭಾಗಾಧಿಕರಿ, ತಹಶೀಲ್ದಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ವೈ.ಮಲ್ಲೇಶ್, ಎನ್.ರಾಜಶೇಖರ್, ಎಸ್.ಟಿ. ವೀರೇಶ್, ರವಿಂದ್ರ, ರಾಜನಹಳ್ಳಿ ಶಿವಕುಮಾರ್ ಪೈಲ್ವಾನ್, ಧನುಷ್‍ರೆಡ್ಡಿ, ಸತೀಶ್ ಪೂಜಾರಿ, ಮಲ್ಲೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
