ಹೊನ್ನಾಳಿ:
ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ 4.30ಕ್ಕೆ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ವಿವಿಧ ವಾದ್ಯಮೇಳಗಳ ಮಂಗಳಘೋಷ ರಥೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿತು. ಅಲಂಕೃತ ರಥಕ್ಕೆ ಭಕ್ತರು ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಶನಿವಾರ ಬೆಳಿಗ್ಗೆ 10.30ಕ್ಕೆ ಹೂವಿನ ಉಚ್ಚಾಯ(ಬ್ರಹ್ಮ ರಥೋತ್ಸವ) ಜರುಗಿತು
ಮಾ.23ರ ಶನಿವಾರ ರಾತ್ರಿಯಿಂದ 24ರ ಭಾನುವಾರ ಬೆಳಿಗ್ಗೆಯವರೆಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಚ್. ನರಸಪ್ಪ, ಪ್ರಧಾನ ಅರ್ಚಕರಾದ ಎಸ್. ರಾಜುಸ್ವಾಮಿ, ಎಸ್.ಎನ್. ರವಿಕುಮಾರ್ ತಿಳಿಸಿದರು.ಸಂಜೆ ಓಕುಳಿ ಉತ್ಸವ ನೆರವೇರಿತು. ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಸಂಭ್ರಮಿಸಿದರು. ಬಳಿಕ ಮಣೇವು(ಭೂತನ ಸೇವೆ) ಜರುಗಿತು.
ರಥೋತ್ಸವಕ್ಕೆ ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆ ಸೇರಿದಂತೆ ತಾಲೂಕಿನಾದ್ಯಂತ ಭಕ್ತಾದಿಗಳು ಶನಿವಾರ ರಾತ್ರಿಯೇ ಆಗಮಿಸಿದ್ದರು. ಮತ್ತೆ ಕೆಲವರು ಭಾನುವಾರ ಬೆಳಿಗ್ಗೆ ಆಗಮಿಸಿದರು. ಹರಕೆ ಹೊತ್ತ ಭಕ್ತರು ಕುಟುಂಬದವರೊಂದಿಗೆ ಸ್ವಾಮಿಯ ಸನ್ನಿಧಿಯಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದರು.
ಭಕ್ತರಿಗೆ ಸೂಚನೆ: ದೇವಸ್ಥಾನದ ರಾಜಗೋಪುರದ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲುದ್ದೇಶಿಸಿದ್ದು ಭಕ್ತಾದಿಗಳು ಹರಕೆಯ ಹಣವನ್ನು ಹುಂಡಿಯಲ್ಲಿ ಹಾಕಬೇಕು ಎಂದು ಪ್ರಕಟಣೆ ತಿಳಿಸಿದೆ.