ಹಳ್ಳಿ-ಹಳ್ಳಿಗಳಲ್ಲೂ ಗ್ರಾಮೀಣ ಕಲೆಯ ಜಾಗೃತಿ ಮೂಡಲಿ

ದಾವಣಗೆರೆ:

       ಗ್ರಾಮೀಣ ಕಲೆಗಳ ಬಗ್ಗೆ ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಜಾಗೃತಿ ಮೂಡಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕೆಂದು ಯರಗುಂಟೆಯ ಶ್ರೀಪರಮೇಶ್ವರ ಸ್ವಾಮೀಜಿ ಕರೆ ನೀಡಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಸಂಜೆ ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ಬಯಲಾಟ ಉತ್ಸವ ಮತ್ತು ಸಂಗೀತ ಕಾರ್ಯಕ್ರಮ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

       ಕಲೆಗೆ ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲ. ಹೀಗಾಗಿ ಕಲೆಗಳಿಂದಲೇ ದೇಶದಲ್ಲಿ ಭಾವೈಕ್ಯತೆ, ಸಾಮರಸ್ಯ ಮನೆಮಾಡಿದೆ. ಬರೀ ಭಾಷಣ ಮಾಡುವುದರಿಂದ ಈ ಕಲೆಯನ್ನು ಉಳಿಸಲು ಸಾಧ್ಯವಿಲ್ಲ. ಬದಲಿಗೆ ಕಲೆಯನ್ನು ಉಳಿಸಿ ಬೆಳೆಸುವ ಯೋಜನೆಗಳು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಲಾ ಕಾರ್ಯಕ್ರಮ ಆಯೋಜಿಸುವ ಕೆಲಸ ನಡೆಯಬೇಕೆಂದು ಹೇಳಿದರು.

        ಮನೆ-ಮನೆಗೂ ಟಿವಿ ಬಂದಿದ್ದು, ಯಾರಿಗೂ ಕಲೆಗಳತ್ತ ಆಸಕ್ತಿಯೇ ಉಳಿದಿಲ್ಲ. ಆದ್ದರಿಂದ ಪ್ರಸ್ತುತ ಗ್ರಾಮೀಣ ಭಾಗದಲ್ಲೂ ಕಲೆಗಳು ಮರೆಯಾಗುತ್ತಿವೆ. ಸರ್ಕಾರ ಮತ್ತು ಸಂಘ-ಸಂಸ್ಥೆಗಳ ಪ್ರಯತ್ನದ ಹೊರತಾಗಿಯೂ ಕಲೆಗಳಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಆದ್ದರಿಂದ ಕಲಾವಿದರು ಬೇಸರಕ್ಕೆ ಒಳಗಾಗದೇ, ಇತರರ ನೋವು ಮರೆಸುವ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

        ಅಧ್ಯಕ್ಷತೆ ವಹಿಸಿದ್ದ ಹೂವಿನಹಡಗಲಿಯ ಬಯಲಾಟ ವಿಧ್ವಾಂಸ ಡಾ.ಕೆ.ರುದ್ರಪ್ಪ ಮಾತನಾಡಿ, ಬಯಲಾಟದಲ್ಲಿ ಬಳಸುವ ಸಂಗೀತದಲ್ಲಿ ಸಾಹಿತ್ಯ ಇದ್ದರೂ, ಅದು ಜನರಿಗೆ ಅರ್ಥವಾಗುವಷ್ಟು ಸರಳವಾಗಿರುವುದಿಲ್ಲ. ಕಲೆಯನ್ನು ಉಳಿಸಬೇಕಾದರೆ ಮಡಿವಂತಿಕೆಯನ್ನು ಬಿಟ್ಟು, ಸೂಕ್ತ ಪರಿಷ್ಕರಣೆ ಮಾಡಿಕೊಳ್ಳಬೇಕು. ಸಂಗೀತದ ಸಾಹಿತ್ಯ, ಸಂಭಾಷಣೆ ಜನರನ್ನು ತಲುಪಬೇಕು. ಅದರ ಜೊತೆಗೆ ಕಲಾವಿದರನ್ನು ಗೌರವಿಸುವ, ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

        ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಕೆ.ಸಿರಾಜ್ ಅಹ್ಮದ್ ಮಾತನಾಡಿ, ಜನಪದ ಹುಟ್ಟುವುದೇ ಹಳ್ಳಿಗಳಲ್ಲಿ. ಹಾಗಾಗಿ ನಗರ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದರಲ್ಲಿ ಹೆಚ್ಚುಗಾರಿಕೆ ಇಲ್ಲ. ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಕಾರ್ಯಕ್ರಮ ಆಯೋಜಿಸುವ ಮೂಲಕ ನಶಿಸುತ್ತಿರುವ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.

        ಈ ಸಂದರ್ಭದಲ್ಲಿ ಕಲಾವಿದರಾದ ಟಿ. ಗಂಗಾಧರಪ್ಪ ಚನ್ನಗಿರಿ, ಜಿ.ಎಂ.ರಾಜಪ್ಪ ವಡ್ನಾಳ್, ಎ.ಜಿ.ಸುನಂದ ಹೊನ್ನಾಳಿ, ಜಿ.ಎಂ. ಚನ್ನರಾಜ್ ಸುರಹೊನ್ನೆ, ಎ.ಡಿ.ಜಯಪ್ಪ ಮಾಸಡಿ, ಎಂ.ಸಿ.ಚಂದ್ರಪ್ಪ ಹೊನ್ನಾಳಿ, ಬಿ.ಪಿ. ಮಂಜುನಾಥ ಗುತ್ತೂರು, ಹೆಚ್. ಕೊಟ್ರಪ್ಪ ಹರಿಹರ, ಮಂಜಪ್ಪ ಬಲ್ಲೂರು ಹರಿಹರ, ರೇವಣ್ಣ ಹಿರೇಮಲ್ಲನಹೊಳೆ, ಎಸ್. ಜಯಪ್ಪ ಚಿಗಟೇರಿ, ಹೆಗ್ಗೆರ ವೀರಪ್ಪ ಮುದಹದಡಿ, ಬಣಕಾರ್ ವೀರೇಶ್ ಬಾಗಳಿ, ಬಣಕಾರ್ ಮಂಜಣ್ಣ ಬಾಗಳಿ, ಕೆ.ಎನ್. ಗದಿಗೆಪ್ಪ ಉಕ್ಕಡಗಾತ್ರಿ, ಹಾದಿಮನೆ ನಾಗರಾಜ್ ಅರಸೀಕೆರೆ, ಪಿ.ಆರ್. ರಂಗಪ್ಪ ಸಿದ್ದಮ್ಮನಹಳ್ಳಿ, ಮಂಜಪ್ಪ ಸಿದ್ದಮ್ಮನಹಳ್ಳಿ ಮತ್ತಿತರರಿಗೆ ಕಲಾ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

        ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ದಾವಣಗೆರೆ ಸೆಕ್ಯುರಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಓ.ವಿಶ್ವನಾಥ, ಕನ್ನಡಪರ ಹೋರಾಟಗಾರ ಬಸವರಾಜ ಐರಣಿ, ಯರಗುಂಟೆ ಕರಿಬಸವೇಶ್ವರ ಗದ್ದಿಗೆಮಠದ ಅಧ್ಯಕ್ಷ ಎಂ.ನಾರಪ್ಪ, ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಒಕ್ಕೂಟದ ಅಧ್ಯಕ್ಷ ಎನ್.ಎಸ್.ರಾಜು, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link