ಹುಳಿಯಾರು
ಹಬ್ಬ ಎಂದರೆ ಹೊಸ ಬಟ್ಟೆ ತೊಡುವುದು, ದೇವಸ್ಥಾನಕ್ಕೆ ಹೋಗುವುದು, ಸಿಹಿ ಅಡಿಗೆ ಉಣ್ಣುವುದು ಇದಿಷ್ಟೆ ಎನ್ನುವಂತಾಗಿದೆ. ಆದರೆ ಊರಿನ ಕಲ್ಯಾಣಿ ಕ್ಲೀನ್ ಮಾಡುವ ಮೂಲಕ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದ ಯುವಕರು ಅರ್ಥಪೂರ್ಣವಾಗಿ ಹಬ್ಬ ಆಚರಿಸಿದ್ದಾರೆ.
ಹೌದು, ವಿದ್ಯೆ, ಉದ್ಯೋಗ ಸಲುವಾಗಿ ಬೇರೆ ಬೇರೆ ಊರುಗಳಿಗೆ ತೆರಳುವ ಮಂದಿ ಹಬ್ಬದ ನೆಪದಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಾರೆ. ಹಬ್ಬದ ಆಚರಣೆ ಮುಗಿದ ನಂತರ ಸ್ನೇಹಿತರ ಮನೆಗಳಿಗೆ ತೆರಳಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ. ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಟಿವಿ ಮುಂದೆ ಕುಳಿತು ಕಾಲಹರಣ ಮಾಡುವುದು ಸಾಮಾನ್ಯ.
ಆದರೆ ಯಳನಾಡು ಗ್ರಾಮದ ಯುವಕರು ಹಬ್ಬದ ರಜೆಯ ದಿನವನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿದರು. ಹಬ್ಬಕ್ಕೆ ಬೇರೆಬೇರೆ ಊರಿಂದ ಆಗಮಿಸಿದ್ದ ಯುವಕರನ್ನು ಸಂಘಟಿಸಿ ಊರಿನ ಕಲ್ಯಾಣಿ ಸ್ವಚ್ಛತೆಗೆ ನಿರ್ಧರಿಸಿದರು. ಆರೆ, ಗುದ್ದಲಿ, ಬಾಂಡ್ಲಿ ಕೈ ಹಿಡಿದರು, ಗ್ರಾಮದ ಹಿರಿಯ ಮಾರ್ಗದರ್ಶನದಲ್ಲಿ ಕಲ್ಯಾಣಿಯ ಒಳಗಿಳಿದರು.
ಬರೋಬ್ಬರಿ ಐದಾರು ಗಂಟೆಗಳ ಕಾಲದ ಶ್ರಮದಾನದ ಮೂಲಕ ಕಲ್ಯಾಣಿಯಲ್ಲಿ ಬಿದ್ದಿದ್ದ ಕಸಕಡ್ಡಿ, ಬೆಳೆದಿದ್ದ ಮುಳ್ಳುಗಿಡ, ಪೊದೆಯನ್ನು ಸಂಪೂರ್ಣ ತೆರವು ಮಾಡಿದರು. ಕಲ್ಯಾಣಿ ತಳದಲ್ಲಿ ಸಂಗ್ರಹವಾಗಿದ್ದ ಊಳನ್ನೂ ಸಹ ತೆಗೆದು ಹೊರಹಾಕಿದರು. ಒಟ್ಟಾರೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕಾಯದೆ ಹಬ್ಬದ ರಜೆಯಲ್ಲಿ ಸ್ಥಳಿಯರೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ