ತುಮಕೂರು
ಬಹುಶಃ ಇತಿಹಾಸದಲ್ಲೆ ಇಂತಹ ದೃಶ್ಯಗಳನ್ನು ಯಾರೂ ಕಂಡಿರಲಿಕ್ಕೂ ಇಲ್ಲ. ಕೇಳಿರಲಿಕ್ಕೂ ಸಾಧ್ಯವಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಈಗ ಬೇಲಿಗಳು ಎದ್ದಿವೆ. ಅದು ಯಾವ ಊರಿನಿಂದ ಆರಂಭವಾಯಿತೊ… ಅಂತೂ ಈ ಸುದ್ದಿ ಎಲ್ಲ ಕಡೆ ಹರಡುತ್ತಾ ಹಳ್ಳಿಗರು ತಮಗೆ ತಾವೆ ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಊರೊಳಗೆ ಯಾರೂ ಬರಬಾರದೆಂದು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಮಹಾಮಾರಿ ಅಷ್ಟರಮಟ್ಟಿಗೆ ಜನರನ್ನು ಬೆಚ್ಚಿ ಬೀಳಿಸಿದೆ.
ಊರೊಳಗೆ ಹೋಗುವ ಮುನ್ನವೆ ಪ್ರವೇಶ ದ್ವಾರದಲ್ಲಿ ಅಥವಾ ಅದಕ್ಕೂ ಮುನ್ನವೆ ದಾರಿಗೆ ಮುಳ್ಳಿನ ಬೇಲಿ ಹಾಕಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಕೆಲವು ಕಡೆ ಬೇಲಿ ಹಾಕಿದ್ದರೆ, ಮತ್ತೆ ಕೆಲವು ಕಡೆ ಬಟ್ಟೆಗಳ ಪ್ರದರ್ಶನ ಮಾಡಿದ್ದಾರೆ. ಮತ್ತೆ ಕೆಲವು ಕಡೆ ಊರಿನೊಳಗೆ ಯಾರಿಗೂ ಪ್ರವೇಶವಿಲ್ಲ ಎಂಬ ಬರಹ ಅಂಟಿಸಿದ್ದಾರೆ.
ತಮ್ಮ ಊರಿನೊಳಗಿರುವ ಮಂದಿ ಹೊರಗೆ ಹೋಗದಂತೆ ಹಾಗೂ ಹೊರಗಿನವರು ಈ ಊರಿಗೆ ಪ್ರವೇಶಿಸದಂತೆ ತಮಗೆ ತಾವೆ ದಿಗ್ಬಂದನ ವಿಧಿಸಿಕೊಂಡಿದ್ದಾರೆ. ಇದರಿಂದಾಗಿ ಯಾರೂ ಹೊರಗೆ ಹೋಗುವಂತಿಲ್ಲ, ಹೊರಗಿನಿಂದಲೂ ಯಾರೂ ಬರುವಂತಿಲ್ಲ. ಹಳ್ಳಿ ಹಳ್ಳಿಗಳು ಈಗ ಸ್ವಯಂ ನಿಯಂತ್ರಣಕ್ಕೆ ಒಳಗಾಗಿವೆ. ಒಂದು ರೀತಿಯಲ್ಲಿ ತಮಗೆ ತಾವೆ ಕೋಟೆ ಕಟ್ಟಿಕೊಂಡವರಂತೆ ನಿರ್ಬಂಧ ವಿಧಿಸಿಕೊಂಡಿರುವುದು ಒಂದು ಐತಿಹಾಸಿಕ ಅಚ್ಚರಿಯೆ ಸರಿ.
ವಿಶ್ವವನ್ನೇ ತನ್ನ ಕಬಂಧÀ ಬಾಹುವಿಗೆ ತೆಗೆದುಕೊಳ್ಳುತ್ತಿರುವ ಮಹಾನ್ ಭಯಾನಕ ರೋಗ ಕೊರೋನಾ ವೈರಸ್ ತಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿರುವುದು ಇದೇ ಮೊದಲು. ಪರಿಣಾಮವಾಗಿ ಇಡೀ ಗ್ರಾಮಗಳು ಸೂಕ್ಷ್ಮವಾಗುತ್ತಿವೆ. ಸಂಚಾರ ವ್ಯವಸ್ಥೆಯೆ ಬಂದ್ ಆಗತೊಡಗಿದೆ. ಮಹಾಮಾರಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಕ್ರಮ ಸ್ವಾಗತಾರ್ಹವಾದರೂ ಇನ್ನು ಕೆಲವು ದೃಷ್ಟಿಕೋನದಿಂದ ಹಲವು ಅಪಾಯಗಳು ಎದುರಾಗುತ್ತಿವೆ.
ಕೃಷಿ ಚಟುವಟಿಕೆ, ಹೈನುಗಾರಿಕೆ, ತೋಟಗಾರಿಕೆ, ಸ್ಥಳೀಯ ಕಸುಬು ಗ್ರಾಮೀಣ ಜನಜೀವನದ ಅವಿಭಾಜ್ಯ ಅಂಗ. ಇಡೀ ನಾಡಿಗೆ ಅನ್ನ ಬೆಳೆದು ಕೊಡುವ ರೈತಾಪಿ ವರ್ಗ ಇರುವುದೆ ಗ್ರಾಮೀಣ ಪ್ರದೇಶಗಳಲ್ಲಿ. ಈ ಬಾರಿ ಇನ್ನೂ ನೀರಿನ ಬವಣೆಯ ಬಿಸಿ ತಟ್ಟಿಲ್ಲ. ಈಗ ತಾನೆ ಆರಂಭವಾಗುತ್ತಿದೆ. ತರಕಾರಿ, ಸೊಪ್ಪು, ಹೂ ಇತ್ಯಾದಿಗಳನ್ನು ಬೆಳೆದ ರೈತರು ಈಗ ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ. ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಒಯ್ಯಲೂ ಆಗದೆ ಸುಮ್ಮನಿರಲೂ ಆಗದೆ ಚಡಪಡಿಸುತ್ತಿದ್ದಾರೆ. ದಾರಿ ಮಧ್ಯೆ ಬೇಲಿ ಹಾಕಿರುವುದಂತೂ ಇವರಿಗೆಲ್ಲ ಮತ್ತಷ್ಟು ಆತಂಕ ಸೃಷ್ಟಿಸಿದೆ. ಊರಿನಿಂದ ಬೆಳೆದಿರುವ ಬೆಳೆ ಹೊರಗಡೆ ಹೋಗುತ್ತಿಲ್ಲ. ಇದರಿಂದಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟಕ್ಕೆ ತರಕಾರಿ ಸೇರಿದಂತೆ ಮನುಷ್ಯನಿಗೆ ಅವಶ್ಯಕವಾಗಿ ಬೇಕಾಗಿರುವ ಉತ್ಪನ್ನಗಳು ರವಾನೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಬೆಲೆ ಏರಿಕೆಯಾಗುತ್ತಿದ್ದು, ದುಪ್ಪಟ್ಟು ಹಣ ತೆತ್ತು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಏನೇ ಕಫ್ರ್ಯೂ ವಾತಾವರಣ ವಿಧಿಸಿದರೂ ದಿನ ಬಳಕೆಯ ಅಗತ್ಯ ವಸ್ತುಗಳಂತೂ ಬೇಕೆ ಬೇಕು. ನಗರ ವಾಸಿಗಳು ಮನೆಯಲ್ಲಿ ಕುಳಿತಿದ್ದಾರೆ. ಅವರಿಗೆಲ್ಲ ಪ್ರತಿದಿನ ಅಗತ್ಯ ವಸ್ತುಗಳ ಪೂರೈಕೆಯಾಗಬೇಕು. ಆದರೆ ಬೆಳ್ಳಂಬೆಳಗ್ಗೆ ಹಾಲನ್ನು ಹೊರತುಪಡಿಸಿದರೆ ಉಳಿದ ಅಗತ್ಯ ವಸ್ತುಗಳು ಅಷ್ಟು ಸುಲಭವಾಗಿ ಲಭ್ಯವಾಗುತ್ತಿಲ್ಲ. ಒಂದು ಕಡೆ ಕಫ್ರ್ಯೂ ಭೀತಿ. ಮತ್ತೊಂದೆಡೆ ಅಂಗಡಿಗಳು ತೆರೆಯುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಸೊಪ್ಪು, ತರಕಾರಿ ಮಾರುವವರು ಬರುತ್ತಿಲ್ಲ. ಇದೆಲ್ಲದರ ಪರಿಣಾಮವಾಗಿ ಬೆಳೆದ ಬೆಳೆಯೆಲ್ಲ ಭೂಮಿಯಲ್ಲೆ ಹಾಳಾಗುತ್ತಿದೆ. ಎಲ್ಲೋ ಕೆಲವರು ಮಾತ್ರವೆ ನಗರಕ್ಕೆ ಅದೂ ಭೀತಿಯಿಂದಲೆ ರವಾನಿಸುವಂತಹ ಪರಿಸ್ಥಿತಿ ಇದೆ.
ತರಕಾರಿ, ಸೊಪ್ಪು ಸೇರಿದಂತೆ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡಲು ಯಾವುದೆ ನಿರ್ಬಂಧ ವಿಧಿಸದಂತಹ ಅಥವಾ ನಿಯಮಾನುಸಾರ ಅನುಮತಿ ನೀಡುವ ವ್ಯವಸ್ಥೆಯಾದರೂ ಇರಬೇಕಿತ್ತು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ವಿಪರೀತ ಅಭಾವ ಉಂಟಾಗಿ ಮತ್ತಷ್ಟು ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಗಳು ಸೃಷ್ಟಿಯಾಗುತ್ತವೆ.
ಈಗ ಹಳ್ಳಿಗಳಲ್ಲಿ ಬೇಲಿ ಹಾಕಿಕೊಂಡು ಸ್ವಯಂ ನಿರ್ಬಂಧ ವಿಧಿಸಿಕೊಳ್ಳುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸ್ವಾಗತಾರ್ಹವಾದರೂ ಮತ್ತೆ ಕೆಲವು ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಊರೊಳಗೆ ತಕ್ಷಣಕ್ಕೆ ಆ್ಯಂಬ್ಯುಲೆನ್ಸ್ ಬರಬೇಕಾದರೆ ಅಥವಾ ತಕ್ಷಣದ ಆರೋಗ್ಯದ ವ್ಯವಸ್ಥೆ ಮತ್ತಿತರ ಅನಿವಾರ್ಯ ಪರಿಸ್ಥಿತಿಗಳನ್ನು ಅವಲೋಕಿಸಿದಾಗ ಇಂತಹ ಕ್ರಮಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳನ್ನು ಹುಟ್ಟಿಹಾಕುತ್ತವೆ.
ಊರೊಳಗೆ ಸುಖಾಸುಮ್ಮನೆ ಯಾರೂ ಪ್ರವೇಶಿಸುವುದಿಲ್ಲ. ನಗರಗಳ ವಾತಾವರಣವೆ ಬೇರೆ, ಹಳ್ಳಿಗಳ ವಾತಾವರಣವೆ ಬೇರೆ. ಒಂದು ಹಳ್ಳಿಗೆ ಯಾರಾದರೂ ಬರುತ್ತಾರೆಂದರೆ ಇಡೀ ಊರಿಗೆ ಆ ವಿಷಯ ಗೊತ್ತಾಗುತ್ತದೆ. ಇಲ್ಲ ಸಂಬಂಧಿಕ ಇರಬೇಕು ಅಥವಾ ಯಾರಾದರೂ ವ್ಯಾಪಾರಸ್ಥರು ಇರಬೇಕು. ಬೇರೆಯವರಿಗೆ ಅಲ್ಲಿ ಇನ್ನೇನು ಕೆಲಸ? ಹೀಗಿರುವಾಗ ಬೇಲಿ ಹಾಕಿಕೊಂಡರೂ ಒಂದೆ, ಹಾಗೇ ಇದ್ದರೂ ಅಷ್ಟೆ.
ಅಷ್ಟು ಸುಲಭವಾಗಿ ಗ್ರಾಮದೊಳಗೆ ಅಪರಿಚಿತರು ತೆರಳಿ ವೈರಸ್ ಅಂಟಿಸಿ ಬಿಡುವ ಸಾಧ್ಯತೆಗಳಿಲ್ಲ. ಒಂದು ವೇಳೆ ಬೇಲಿ ಹಾಕಿಕೊಳ್ಳುತ್ತೇವೆ ಎಂದರೆ ಅದಕ್ಕೆ ತಕ್ಕಂತಹ ಮುಂಜಾಗ್ರತಾ ಕ್ರಮಗಳೂ ಇರಬೇಕು. ಅಗತ್ಯ ಮತ್ತು ತುರ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ವ್ಯವಸ್ಥೆಯೂ ಅಲ್ಲಿ ನಿರ್ಮಾಣವಾಗಬೇಕು. ಇದರ ಪರಿಶೀಲನೆಯೂ ನಡೆಯಬೇಕು. ಅದಕ್ಕಾಗಿ ತಂಡವೂ ಇರಬೇಕು. ಇದಾವುದೂ ಇಲ್ಲದೆ ರಸ್ತೆಗೆ ಬೇಲಿ ಹಾಕಿಕೊಂಡು ಮನೆಯೊಳಗೆ ಕುಳಿತರೆ ಅದೊಂದಿಷ್ಟು ಸುದ್ದಿಗಳಿಗೆ ಗ್ರಾಸವಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ