ಗುಬ್ಬಿ
ಬಿದರೆ ಗ್ರಾಮಕ್ಕೆ ನೀರು ಒದಗಿಸುವ ಎರಡು ಬೋರ್‍ವೆಲ್‍ಗಳು ಇರುವ ಜಮೀನು ಒಡೆತನದ ವಿವಾದದಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಏಕಾಏಕಿ ನಿಲ್ಲಿಸಿದ ಗ್ರಾಮ ಪಂಚಾಯಿತಿ ವಿರುದ್ದ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶನ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾದ ಬಿದರೆ ಗ್ರಾಮ ದೊಡ್ಡ ಗ್ರಾಮವಾಗಿದೆ. ಇಲ್ಲಿನ ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ಒದಗಿಸುವ ಎರಡು ಬೋರ್‍ವೆಲ್‍ಗಳು ಇರುವ ಜಮೀನು ಸರ್ವೆ ನಂ.114 ರಲ್ಲಿನ 20 ಗುಂಟೆಯು ನಮ್ಮದು ಎನ್ನುತ್ತಿರುವ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಇಲ್ಲಿನ ಬೋರ್‍ವೆಲ್‍ಗಳಲ್ಲಿ ಪಂಪ್‍ಮೋಟಾರ್ ಎತ್ತಿಕೊಳ್ಳಲು ಸೂಚಿಸಿರುತ್ತಾರೆ ಎಂದು ಪಂಚಾಯಿತಿ ಈ ಹಿಂದೆ ಸಭೆ ನಡೆಸಿ ಈ ಜಮೀನು ವ್ಯಕ್ತಿಯೊಬ್ಬರ ಪೂರ್ವಿಕರು ದಾನವಾಗಿ ನೀಡಿದ್ದ ಸ್ಥಳವಾಗಿದೆ. ಇಲ್ಲಿ ಆಸ್ಪತ್ರೆಗೂ ಜಮೀನು ನೀಡಲಾಗಿದೆ. ಉಳಿದ 25 ಗುಂಟೆಯನ್ನು ಗ್ರಾಮ ಪಂಚಾಯಿತಿಗೆ ನೀಡಿದ್ದರು.
ಕಳೆದ 50 ವರ್ಷದಿಂದಲೂ ಈ ಸ್ಥಳವನ್ನು ಪಂಚಾಯಿತಿಗೆ ಎಂದು ನಿಗದಿ ಮಾಡಲಾಗಿದೆ. ಇಲ್ಲಿ ಬೋರ್‍ವೆಲ್ ಕೊರೆಸುವಾಗ ಮತ್ತು ಪಂಪ್‍ಮೋಟಾರ್ ಅಳವಡಿಸುವಾಗ ಮಾಡದ ತಕರಾರು ಈಗ ಮಾಡಿರುವುದು ಇಡೀ ಗ್ರಾಮಕ್ಕೆ ತೊಂದರೆ ನೀಡಿದಂತಾಗಿದೆ. ಇಡೀ ಗ್ರಾಮಕ್ಕೆ ನೀರು ಒದಗಿಸುವ ಎರಡೂ ಬೋರ್‍ಗಳು ಈ ಸ್ಥಳದಲ್ಲಿದೆ. ದಿಢೀರ್ ನೀರು ನಿಲ್ಲಿಸಿದರೆ ಜನರಿಗೆ ನೀರು ಕೊಡುವುದು ಕಷ್ಟವಾಗುತ್ತದೆ. ಮಾನವೀಯತೆಯಲ್ಲಿ ಯೋಚಿಸಬೇಕಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.
ಮೊದಲಿನಿಂದಲೂ ನೀರು ಒದಗಿಸುತ್ತಿರುವ ಈ ಬೋರ್‍ವೆಲ್‍ಗಳ ಮೀಟರ್ ಅಳವಡಿಕೆಗೆ ಪಂಚಾಯಿತಿ ಬೆಸ್ಕಾಂ ಮೂಲಕ ಅನಮತಿ ಪಡೆದಿದೆ. ಪೂರ್ವಿಕರು ದಾನವಾಗಿ ಬಿಟ್ಟ ಸ್ಥಳವನ್ನು ದಿಢೀರ್ ನಮ್ಮದು ಎನ್ನುವ ಕುಟುಂಬ ಗ್ರಾಮಕ್ಕೆ ನೀರು ತರುವ ಬಗ್ಗೆ ಯೋಚಿಸಬೇಕಿದೆ. ಈ ಬೋರ್‍ವೆಲ್ ಕೊರೆಸುವಾಗ್ಗೆ ಇಲ್ಲದ ತಕರಾರು ಈಗ ಮಾಡುವುದು ಸರಿಯಲ್ಲ. ಈ ಸ್ಥಳವನ್ನು ಪಂಚಾಯಿತಿ ವಶಕ್ಕೆ ನೀಡಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಪಟೇಲ್ ವೀರೇಗೌಡ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಎಂ.ಡಿ.ಮೈಲಾರಯ್ಯ, ಸುಶೀಲಮ್ಮ ಚಿಕ್ಕರಾಮಯ್ಯ, ಮುಖಂಡರಾದ ಬಸವರಾಜು, ನರಸಿಂಹಮೂರ್ತಿ, ಪಿಡಿಒ ಎಂ.ಕೆ.ರವಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ