ತುಮಕೂರು
ಕಳೆದ 13 ದಿನಗಳಿಂದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ಇಚ್ಚೆಯಂತೆ ಬುಧವಾರ ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಬಂದಿದ್ದು, ಅವರ ದರ್ಶನ ಪಡೆಯಲು ಅನೇಕ ಜನಪ್ರತಿನಿಧಿಗಳು ಮಠಕ್ಕೆ ಭೇಟಿ ನೀಡುತ್ತಿದ್ದಾರೆ.
ಬುಧವಾರ ಬೆಳಗ್ಗೆ ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದ್ದರು. ಸಂಜೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಗುರುವಾರ ಬೆಳಗ್ಗೆ ಮಠಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಮಂತ್ರಿ ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಶ್ರೀಗಳ ದರ್ಶನ ಪಡೆದು ಶ್ರೀಗಳ ಆರೋಗ್ಯದ ಬಗ್ಗೆ ವೈದ್ಯರ ಬಳಿ ಸಮಾಲೋಚನೆ ನಡೆಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿತ್ತೋ ಅದೇ ಚಿಕಿತ್ಸೆಯನ್ನು ಮಠದಲ್ಲಿಯೂ ಮುಂದುವರೆಸಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲವಾದರೂ ನ್ಯೂಟ್ರಿಶನ್ ಚಿಕಿತ್ಸೆ ಮುಂದುವರೆಸಲಾಗಿದೆ. ಆಕ್ಸಿಜನ್ ಪೈಪ್ ಮೂಲಕ ಶ್ರೀಗಳಿಗೆ ಉಸಿರಾಟ ಮಾಡಲು ಅನುಕೂಲ ಮಾಡಲಾಗಿದೆ.
ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಪರಮೇಶ್ ಮಾತನಾಡಿ, ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಗಳು, ಏರುಪೇರು ಕಂಡು ಬರುತ್ತಿಲ್ಲ. ಬುಧವಾರ ರಾತ್ರಿ ರಕ್ತದೊತ್ತಡ ಹೆಚ್ಚಾಗಿತ್ತು. ಅದಕ್ಕೆ ಬೇಕಾದ ಚಿಕಿತ್ಸೆ ನೀಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಬೆಳಗ್ಗೆ ತಪಾಸಣೆ ಮಾಡಲಾಗಿದೆ. ಸೋಂಕಿನ ಅಂಶ ಕಡಿಮೆಯಾಗಿದೆ. ಪ್ರೋಟಿನ್ ಕಡಿಮೆ ಇರುವುದರಿಂದಲೇ ಶ್ರೀಗಳಿಗೆ ಆರೋಗ್ಯ ಚೇತರಿಕೆ ಕುಂಠಿತವಾಗುತ್ತಿದೆ. ಅದಕ್ಕೆ ಪೂರಕವಾದ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಶ್ರೀಗಳಿಂದ ಇಷ್ಟಲಿಂಗ ಪೂಜೆ ಮಾಡಲು ಸಾಧ್ಯವಾಗಿಲ್ಲ. ಬದಲಾಗಿ ಕಿರಿಯಶ್ರೀಗಳೇ ಐಸಿಯು ಕೊಠಡಿಯಲ್ಲೇ ಕುಳಿತು ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶ್ರೀಮಠಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಶ್ರೀಗಳ ಆರೋಗ್ಯ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ. ಆಸ್ಪತ್ರೆಯಿಂದ ಸ್ಥಳಾಂತರವಾದಾಗ ಇದ್ದ ಸ್ಥಿತಿಯೇ ಈಗಲೂ ಇದೆ. ಆರೋಗ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ .
ಗಳು ರಾತ್ರಿ ಕಣ್ಣು ಬಿಟ್ಟು ನೋಡಿದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಾನೂ ಕೂಡ ವೈದ್ಯರ ಜತೆ ಚರ್ಚಿಸಿದ್ದೇನೆ ಎಂದ ಅವರು, ಶ್ರೀಗಳು ಆದಷ್ಟು ಬೇಗ ಗುಣುಮುಖರಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಭಕ್ತಾದಿಗಳಿಗೆ ದರ್ಶನ ನೀಡುವ ವಿಚಾರವಾಗಿ ಶ್ರೀಗಳಿಗೆ ಸೋಂಕು ತಗುಲುತ್ತದೆ ಎಂಬ ಕಾರಣದಿಂದ ಯಾರನ್ನು ಹತ್ತಿರಕ್ಕೆ ಬಿಡುತ್ತಿಲ್ಲ. ಇದಕ್ಕೆ ಭಕ್ತಾದಿಗಳು ಸಹಕರಿಸಬೇಕು. ಎಲ್ಲರೂ ಶೀಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದರು. ನಂತರ ವೈದ್ಯರೊಂದಿಗೆ ಚರ್ಚೆ ನಡೆಸಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಶ್ರೀಗಳ ದರ್ಶನ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ನೀಡಲಾಗುತ್ತಿತ್ತೋ ಅದೇ ಚಿಕಿತ್ಸೆ ಇಲ್ಲಿ ಮುಂದುವರೆಸಲಾಗಿದೆ. ಶ್ರೀಗಳು ಇಚ್ಛಾಮರಣಿ ಆಗಿದ್ದಾರೆ. ಅವರಿಗೆ ಯಾವಾಗ ಭಗವಂತನಲ್ಲಿ ಸೇರಿಕೊಳ್ಳಬೇಕು ಎನ್ನಿಸುತ್ತದೆ ಅದು ಅವರೇ ತೀರ್ಮಾನಿಸಬೇಕು. ಹಾಗಾಗಿ ಭಕ್ತಾದಿಗಳು ಆತಂಕ ಪಡುವ ಅವಶ್ಯಕತೆಯಿಲ್ಲ. ಬದಲಿಗೆ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದರೊಂದಿಗೆ ಮಠದ ಬಳಿ ನೂಕುನುಗ್ಗಲು ಮಾಡುತ್ತಾ ಮಠದಲ್ಲಿ ಗೊಂದಲ ಸೃಷ್ಠಿಮಾಡಬೇಡಿ ಎಂದು ಮನವಿ ಕೊಂಡರು.
ಗೃಹ ಮಂತ್ರಿ ಎಂ.ಬಿ.ಪಾಟೀಲ್ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಮಾಡಿ ವೈದ್ಯರೊಂದಿಗೆ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪರಮ ಪೂಜ್ಯ ನಮ್ಮೆಲ್ಲರ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿತಿ ಒಂದೇ ರೀತಿ ಇದೆ. ಯಾವುದೇ ಬದಲಾವಣೆಗಳಿಲ್ಲ. ಕೆಲವೊಂದು ಪರೀಕ್ಷೆಗಳಲ್ಲಿ ಎಲ್ಲಾ ಸಾಮಾನ್ಯವಾಗಿಯೇ ವರದಿ ಬಂದಿದೆ. ಇದಕ್ಕಾಗಿ ವೈದ್ಯರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಶ್ರೀಗಳ ಆಧ್ಯಾತ್ಮಕಿ ಶಕ್ತಿ, ಪೂಜೆಯ ಫಲ ಇರುವುದರಿಂದ ಇಂದು ಸಂಕಷ್ಟದಿಂದ ಪಾರಾಗುವ ಸ್ಥಿತಿಯೂ ಇದೆ. ಸದ್ಯಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ನುರಿತ ತಜ್ಞ ವೈದ್ಯರನ್ನು ಸಂಪರ್ಕ ಮಾಡಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನದ ವೇಳೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗಮಿಸಿ ಶ್ರೀಗಳ ದರ್ಶನ ಪಡೆದು ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಒಂದು ಅದ್ಭುತವಿದ್ದಂತೆ. ಅವರ ಮುಖದ ಮೇಲಿನ ಕಳೆ, ಅವರು ಬದುಕಿದ ರೀತಿ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಲಿದೆ. ಅವರು ನಿಜವಾಗಲು ಪವಾಡ ಪುರುಷರಾಗಿದ್ದಾರೆ. ಅವರು ಬೇಗ ಗುಣಮುಖರಾಗಿ ಧರ್ಮ ಜಾಗೃತಿ ಆಗಲಿ, ಸಾಮಾಜಿಕ ಕಾರ್ಯ ಆಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ. ಶ್ರೀಗಳಿಗೆ ಚಿಕಿತ್ಸೆ ನೀಡುವುದು ನಮಗೆ ದೊಡ್ಡ ಸವಾಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೂ ಅವರು ಶ್ರೀಗಳಿಗೆ ಬೇಕಾದ ಚಿಕಿತ್ಸೆ ಒದಗಿಸುತ್ತಿರುವುದು ಸಾಹಸದ ಕೆಲಸವಾಗಿದೆ ಎಂದರಲ್ಲದೆ ಶ್ರೀಗಳಿಗೆ ಭಾರತರತ್ನ ನೀಡುವಂತೆ ಒತ್ತಾಯಿಸಲಾಗಿತ್ತು. ಈಗಲೂ ಕೇಂದ್ರಕ್ಕೆ ನಿಯೋಗ ತೆರಳಿ ಒತ್ತಾಯ ಮಾಡಲಾಗುವುದು ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಗಮಿಸಿ ಹಳೇ ಮಠದ ಕೊಠಡಿಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಸಿದ್ದಗಂಗಾ ಆಸ್ಪತ್ರೆಯ ವೈದ್ಯರು, ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಶ್ರೀಗಳ ಆರೋಗ್ಯ, ಅವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದು ಸುದೀರ್ಘವಾಗಿ ಚರ್ಚೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಅವರು ಇನ್ನೂ ಹೆಚ್ಚಿನ ಕಾಳ ನಮ್ಮೊಂದಿಗೆ ಜೀವಿಸುತ್ತಾರೆ ಎಂಬ ಆಶಯ ನಮ್ಮಲ್ಲಿದೆ. ಶ್ರೀಗಳು ದೈವ ಸ್ವರೂಪಿಯಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಸ್ವಾಮೀಜಿಯವರು ಗಟ್ಟಿಯಾಗಿದ್ದಾರೆ. ಸ್ವಂತವಾಗಿಯೆ ಉಸಿರಾಟ ಪಡೆಯುತ್ತಿದ್ದಾರೆ. ಈ ವಯಸ್ಸಿನಲ್ಲಿ ಶಸ್ತ್ರ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇತರರು ಯಾರೂ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಬಹುಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದರು.
ತುಮಕೂರು ಸೇರಿದಂತೆ ನಾಡಿನ ವಿವಿಧೆಡೆಯಿಂದ ಭಕ್ತಾದಿಗಳು ಮಠಕ್ಕೆ ಆಗಮಿಸುತ್ತಿದ್ದು, ಶ್ರೀಗಳನ್ನು ನೋಡುವ ಬಯಕೆ ವ್ಯಕ್ತ ಪಡಿಸಿರುವುದರಿಂದ ಗೃಹ ಮಂತ್ರಿಗಳ ಹಾಗೂ ಸಿದ್ದಲಿಂಗ ಶ್ರೀಗಳ ಅನುಮತಿ ಮೇರೆಗೆ ಪೊಲೀಸ್ ಇಲಾಖೆಯ ಸಹಾಯದಲ್ಲಿ ಹಳೆಮಠದ ಹಿಂದೆಯಿರುವ ಕಿಟಕಿ ಮೂಲಕ ದರ್ಶನ ನೀಡಲು ಅನುಕೂಲ ಮಾಡಿಕೊಡಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಸಾವಿರಾರು ಮಂದಿ ಜಮಾಯಿಸಿ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.
ಸಿದ್ದಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ, ಚಿತ್ರದುರ್ಗದ ವೀರಣ್ಣ ಮತ್ತಿಗಟ್ಟೆ, ಎಐಸಿಸಿ ಕಾರ್ಯದರ್ಶಿ ಯಶೋಮತಿ, ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್, ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಶಿವರಾಜ ಪಾಟೀಲ್, ನಿವೃತ್ತ ಜಿಲ್ಲಾಧಿಕಾರಿ ಡಿ.ಸಿ.ಸೋಮಶೇಖರ್, ಮಾಜಿ ಶಾಸಕ ಸುರೇಶ್‍ಗೌಡ, ಶಾಸಕ ಸುರೇಶ್‍ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯದ ವಿವಿಧ ಮಠಗಳಿಂದ ಮಠಾಧೀಶರು ಆಗಮಿಸಿ ಶ್ರೀಗಳ ದರ್ಶನ ಪಡೆದರು.
ವಿವಿಧೆಡೆ ಹೆಲಿಪ್ಯಾಡ್ ನಿರ್ಮಾಣ:
ನಡೆದಾಡುವ ದೇವರು, ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆರೋಗ್ಯದ ವಿಚಾರಿಸಲು ಕೇಂದ್ರದಿಂದ ವಿವಿಧ ಸಚಿವರು, ತುಮಕೂರಿಗೆ ಆಗಮಿಸುತ್ತಿದ್ದಾರೆ. ಇಂದು ಬೆಳಗ್ಗೆ ಕೇಂದ್ರದ ಮಂತ್ರಿ ಮಂಡಲ ಸೇರಿದಂತೆ ವಿವಿಧ ಗಣ್ಯರು ಆಗಮಿಸುತ್ತಿದ್ದು, ನಗರದ ವಿವಿಧೆಡೆ 14 ಕಡೆಗಳಲ್ಲಿ ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 1 , ಹಿರೇಹಳ್ಳಿ, ಪಂಡಿತನಹಳ್ಳಿ ಗೇಟ್ ಬಳಿ 3, ತುಮಕೂರು ವಿವಿಯ ಕ್ರೀಡಾಂಗಣದಲ್ಲಿ 4, ಟ್ರಕ್ ಟರ್ಮಿನಲ್ ಬಳಿ 3 ಸೇರಿ ಒಟ್ಟು 14 ನಿರ್ಮಿಸಲಾಗುತ್ತಿದೆ. ಜತೆಗೆ ಪೊಲೀಸ್ ಇಲಾಖೆಯಿಂದ ಈಗಾಗಲೇ ದಾವಣಗೆರೆ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಪೊಲೀಸ್ ವರಿಷ್ಠಾಧಿಕಾರಿಗಳು ತುಮಕೂರಿಗೆ ಬಂದಿದ್ದು, ಇನ್ನೂ ನಾಲ್ಕು ಜನ ವರಿಷ್ಠಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ