ಹರಿಹರ :
ಹಿಂದು ಜಾಗರಣಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಮೇ 7 ರಂದು ಹಿಂದು ವಿರಾಟ್ ಸಮಾಜೋತ್ಸವದ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸತೀಶ್ ಪೂಜಾರಿ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶೇಷವಾಗಿ ಈ ಸಲ ವಿಶ್ವಗುರು ಬಸವಣ್ಣನವರ ಜಯಂತಿಯ ಜೊತೆಯಲ್ಲಿ ಶ್ರೀರಾಮನವಮಿಯನ್ನು ಆಚರಿಸ ಲಾಗುತ್ತಿರುವುದಾಗಿ ತಿಳಿಸಿದರು.
ಕಳೆದ 5-6 ವರ್ಷಗಳಿಂದ ಹರಿಹರದ ಹಿಂದು ಜಾಗರಣ ವೇದಿಕೆಯಿಂದ ಭಗತ್ ಸಿಂಗ್ ಜಯಂತಿ, ಶಿವಾಜಿ ಜಯಂತಿ, ಅಖಂಡ ಭಾರತ ಸಪ್ತಾಹ ದಂತಹ ಧರ್ಮಾಚರಣೆಗಳನ್ನು ಆಚರಿಸುತ್ತಾ ಬರಲಾಗುತ್ತಿದ್ದು ಅದರಂತೆ ಈ ಬಾರಿಯೂ ಸಹ ಶ್ರೀರಾಮನವಮಿ ಆಚರಣೆ ಮಾಡಲಾಗುವುದು ಎಂದರು.
ಇದೇ ಮೇ 7 ರಂದು ಮಂಗಳವಾರ ನಡೆಯಲಿರುವ ಶ್ರೀ ರಾಮನವಮಿಯ ಪ್ರಯುಕ್ತ ಹಿಂದೂ ವಿರಾಟ್ ಸಮಾಜೋತ್ಸವ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ಯನ್ನು ಸಹ ಹಮ್ಮಿಕೊಳ್ಳಲಾಗಿರುವ ದಾಗಿ ಹೇಳಿದರು
ಶೋಭಾಯಾತ್ರೆಯು ಮಂಗಳವಾರ ಮಧ್ಯಾಹ್ನ 12.30 ಕ್ಕೆ ನಗರದ ಶಿವಮೊಗ್ಗ ರಸ್ತೆಯ ನೀರಾವರಿ ಇಲಾಖೆಯ ಆವರಣದಲ್ಲಿರುವ ಶ್ರೀ ಗಣಪತಿ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಅದು ಸಂಜೆ 5.00 ಕ್ಕೆ ಗಾಂಧಿ ಮೈದಾನ ಕ್ಕೆ ಬಂದು ಸೇರಿರುವುದಾಗಿ ತಿಳಿಸಿದರು.
ನಂತರ ಸಂಜೆ 5.30 ಕ್ಕೆ ಗಾಂಧಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ದಕ್ಷಿಣ ಪ್ರಾಂತ್ಯದ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷರಾದ ಜಯಕುಮಾರ್ ಅವರು ವಹಿಸುವರು.ಅವರಗೊಳ್ಳ ಪುರವರ್ಗ ಶ್ರೀ ಓಂಕಾರ ಹಿರೇಮಠ ಶ್ರೀಗಳು ಸಾನ್ನಿಧ್ಯ ವಹಿಸುವರು,ಅತಿಥಿಗಳಾಗಿ ಉತ್ತರ ಪ್ರಾಂತ್ಯದ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಶಿವಾನಂದ ಬಡಿಗೇರ ಆಗಮಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವಿಶೇಷವಾಗಿ ಹಿಂದೂ ವಿರಾಟ್ ಸಮಾಜೋತ್ಸವದ ನಿಮಿತ್ತ ಮೇ 5 ರ ಭಾನುವಾರ ದಂದು ನಗರದ ಪೇಟೆ ಆಂಜನೇಯ ದೇವಸ್ಥಾನ ದಿಂದ ಪ್ರಾರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಿರುವುದಾಗಿ ತಿಳಿಸಿದ ಅವರು ಈ ಬೃಹತ್ ಕಾರ್ಯಕ್ರಮದಲ್ಲಿ ಹಿಂದುಗಳಾದ ನಾವೆಲ್ಲರೂ ಭಾಗಿಯಾಗೋಣ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ದಿನೇಶ್,ನವನೀತ್,ಮಂಜು ರಟ್ಟಿಹಳ್ಳಿ, ಶಿವು, ರಮೇಶ್,ಚೇತನ್,ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.