ದಾವಣಗೆರೆ:
ಜಾತಿ-ಧರ್ಮದ ಮಧ್ಯೆ ವಿಷಬೀಜವನ್ನು ಬಿತ್ತುವ ಮೂಲಕ ಕೋಮುವಾದಕ್ಕೆ ಪ್ರಚೋದನೆ ನೀಡುವವರು ಬಸವತತ್ವವನ್ನು ಪಾಲಿಸುವ ಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಸಹಕರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸಲಹೆ ನೀಡಿದ್ದಾರೆ.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಜಿಲ್ಲಾ ಕಾಂಗ್ರೆಸ್ ಕಛೇರಿಯ ಎಸ್.ಎಸ್.ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಎಲ್ಲರೂ ನಮ್ಮವರು ಎಂಬುದಾಗಿ ಪ್ರತಿಪಾದಿಸುವ ಮೂಲಕ ಸಮಾನತೆ, ಸಾಮಾಜಿಕ ನ್ಯಾಯವನ್ನು ಸಾರಿದ್ದರು. ಅದರಂತೆ ಕಾಂಗ್ರೆಸ್ ಪಕ್ಷ ತಂದಿರುವ ಎಲ್ಲಾ ಯೋಜನೆಗಳು ಎಲ್ಲಾ ಜಾತಿ-ಧರ್ಮದವರಿಗೂ ಅನ್ವಯಿಸಲಿವೆ. ಆದರೆ, ಬಿಜೆಪಿಯವರು ಜಾತಿ-ಧರ್ಮಗಳ ಮಧ್ಯೆ ವಿಷಬೀಜವನ್ನು ಬಿತ್ತಿ ಬಸವನಾಡು ಕರ್ನಾಟಕವನ್ನು ವಿಶ್ವಮಟ್ಟದಲ್ಲಿ ಅವಮಾನಿಸುತ್ತಿದ್ದಾರೆಂದು ಆರೋಪಿಸಿದರು.
ಮಾಜಿ ಮೇಯರ್ ಅಶ್ವಿನಿ ಪ್ರಶಾಂತ್ ಮಾತನಾಡಿ, ಜಾತಿ-ಧರ್ಮ ಇಲ್ಲದ ನಾಡನ್ನು ಕಟ್ಟುವ ಉದ್ದೇಶ ಹೊಂದಿದ್ದ ಬಸವಣ್ಣನವರ ಕನಸನ್ನು ನಾವೆಲ್ಲಾ ಸೇರಿ ಸಾಕಾರಗೊಳಿಸೋಣ ಎಂದು ಕರೆ ನೀಡಿದರು.
ಮಹಿಳಾ ಕಾಂಗ್ರೆಸ್‍ನ ವೀಣಾ ಮಂಜುನಾಥ್ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲೇ ಮೌಢ್ಯ, ಕಂದಾಚಾರಗಳ ವಿರುದ್ದ ಧ್ವನಿ ಎತ್ತಿದ್ದರು. ಮಹಿಳೆಯರು ಮನೆಯಿಂದ ಹೊರಬರಬಾರದು ಎಂಬ ಕಟ್ಟಳೆಗಳು ಇದ್ದ ಕಾಲದಲ್ಲಿಯೂ ಸಹ ಮಹಿಳೆಯರ ಸಮಾನತೆಗೆ ಮುನ್ನುಡಿ ಬರೆದಿದ್ದರು ಎಂದು ಸ್ಮರಿಸಿದರು.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎ.ನಾಗರಾಜ್ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶೋಭಾ ಪಲ್ಲಾಗಟ್ಟೆ, ದಾಕ್ಷಾಯಣಮ್ಮ, ವಿಜಯ ಎಸ್.ಅಕ್ಕಿ, ಗೀತಾ ಪ್ರಶಾಂತ್, ಸುನೀತಾ ಭೀಮಣ್ಣ, ಶುಭಮಂಗಳ, ಅಂಗವಿಕಲರ ವಿಭಾಗದ ಯತಿರಾಜ್, ಮಹಾಂತೇಶ್, ಕಿಸಾನ್ ವಿಭಾಗದ ಬಾತಿ ಶಿವಕುಮಾರ್, ಮನೋಜ್ ಹೆಚ್.ಆರ್., ಎನ್‍ಎಸ್ ಯುಐನ ಮುಜಾಹಿದ್, ಪ್ರವೀಣ್ ಕುಮಾರ್, ಸೇವಾದಳದ ಚಂದ್ರು ಡೋಲಿ, ಯಂಗ್ ಇಂಡಿಯಾದ ಮಂಜುನಾಥ್, ಯುವರಾಜ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
