ತುಮಕೂರು
ದೇಶದ ಮಾರುಕಟ್ಟೆಯಲ್ಲಿರುವ ಹಾಲಿನಲ್ಲಿ ನಂದಿನಿ ಹಾಲು ಮತ್ತು ಅದರ ಇತರೆ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ.
ನಗರದ ವಿದ್ಯಾನಿಕೇತನ ಶಾಲೆಯಲ್ಲಿ ತುಮಕೂರು ಹಾಲು ಒಕ್ಕೂಟ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ವಿಶ್ವದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಅಮಲ್ ನಂತರ ಸ್ಥಾನವನ್ನು ನಂದಿನಿ ಪಡೆದಿದ್ದು, ಇದಕ್ಕೆ ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳೇ ಕಾರಣ ಎಂದರು.
ದಿ.ವರ್ಗೀಶ್ ಕುರಿಯನ್ ಅವರ ನಿರಂತರ ಪರಿಶ್ರಮದ ಫಲವಾಗಿ ಭಾರತ ಹೈನುಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕುರಿಯನ್ ಅವಿರತವಾಗಿ ದುಡಿದ್ದರು ಎಂದ ಅವರು, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವವನ್ನು ಜನಸಾಮಾನ್ಯರಿಗೆ ಅದರಲ್ಲಿಯೂ ಯುವಜನತೆ ಮತ್ತು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ 2001 ರಿಂದ ತುಮಕೂರು ಹಾಲು ಒಕ್ಕೂಟ ಈ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸುತಾ ಬಂದಿದೆ ಎಂದು ಮಹಾಲಿಂಗಯ್ಯ ತಿಳಿಸಿದರು.
ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ನಂದಿನಿ ಹಾಲಿನ ಜೊತೆಗೆ, ಖಾಸಗಿ ಕಂಪನಿಗಳ ಹಲವು ಹಾಲಿನ ನಡುವೆ ಪೈಪೋಟಿ ಇದೆ.
ಕೆಲವರು ಹಾಲನ್ನು ಗಟ್ಟಿಗೊಳಿಸಲು ಯೂರಿಯಾ, ಸಿಹಿಗೆಣಸು ಹಾಗೂ ಇನ್ನಿತರ ರಾಸಾಯನಿಕಗಳನ್ನು ಬಳಸುತಿದ್ದು, ಇದು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಲಾಭದ ನಿರೀಕ್ಷೆಯಿಲ್ಲದೆ, ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟ ಕಾಪಾಡಿಕೊಂಡು ಬರುತ್ತಿರುವ ನಂದಿನಿ ಉತ್ಪನ್ನಗಳನ್ನೇ ಗ್ರಾಹಕರು ಬಳಸುವಂತೆ ಅವರು ಸಲಹೆ ನೀಡಿದರು.
ಸರಕಾರದ ಕ್ಷೀರಭಾಗ್ಯ ಯೋಜನೆಯಡಿ ರಾಜ್ಯದ ಅಂಗನವಾಡಿಯಿಂದ 10ನೇ ತರಗತಿಯ ಮಕ್ಕಳವರೆಗೆ ನಂದಿನಿ ಹಾಲು ವಿತರಿಸಲಾಗುತ್ತಿದೆ. ಅಲ್ಲದೆ ನೆರೆಯ ಆಂದ್ರಪ್ರದೇಶ್,ಜಮ್ಮ ಕಾಶ್ಮೀರ ಸರಕಾರದೊಂದಿಗೆ ಸಹ ಮಾರಾಟ ಒಪ್ಪಂದ ಮಾಡಿದ್ದು, ಇದರಿಂದ ಗ್ರಾಹಕರು, ರೈತರು ಮತ್ತು ಒಕ್ಕೂಟಕ್ಕೆ ಉತ್ತಮ ದರಗಳು ದೊರೆಯುತ್ತಿವೆ ಎಂದು ಅವರು ತಿಳಿಸಿದರು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಮುನೇಗೌಡ ಮಾತನಾಡಿ, ಹಾಲು ಒಂದು ಪರಿಪೂರ್ಣ ಪೌಷ್ಠಿಕ ಆಹಾರ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಒಪ್ಪಿ ದೃಢೀಕರಿಸಿದೆ.ಹಾಲಿನಲ್ಲಿ ಶೇ85ರಷ್ಟು ನೀರಿನ ಅಂಶವಿದ್ದು, ಲ್ಯಾಕ್ಟೊಸ್ ಎಂಬ ಅಂಶ ಮನುಷ್ಯನ ಬುದ್ದಿ ಮತ್ತು ದೇಹದ ಬೆಳವಣಿಗೆಗೆ ಸಹಕಾರಿಯಾಗಿದೆ. 35 ಸಾವಿರ ಲೀಟರ್ ಹಾಲು ಶೇಖರಣೆಯೊಂದಿಗೆ ಕಳೆದ 40 ವರ್ಷಗಳ ಹಿಂದೆ ಆರಂಭವಾದ ಒಕ್ಕೂಟ ಇಂದು ದಿನಕ್ಕೆ 7.50ಲಕ್ಷ ಲೀಟರ್ ಹಾಲು ಸಂಗ್ರಹಿಸುವ ದಾಖಲೆ ಹೊಂದಿದೆ ಎಂದು ಅವರು ತಿಳಿಸಿದರು,
ವೇದಿಕೆಯಲ್ಲಿ ಹಾಲು ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್, ಚನ್ನಮಲ್ಲಯ್ಯ, ಈಶ್ವರಯ್ಯ, ಅಬ್ದುಲ್ ರಜಾಕ್, ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ಶ್ರೀವಾಸ್, ಕೃಷ್ಣಾನಾಯಕ್, ವಿದ್ಯಾನಿಕೇತನ ಸಂಸ್ಥೆಯ ಅದ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
