ಬೆಂಗಳೂರು
ಒಂದು ಮನೆಯಲ್ಲಿ ಒಬ್ಬರಿಗೆ ಕ್ಷಯ ರೋಗ ಇದ್ದರೆ ಉಳಿದವರಿಗೂ ತಗುಲುವ ಸಾಧ್ಯತೆ ಇದ್ದು, ಏನು ತಿಳಿಯದ ಮಕ್ಕಳು ರೋಗ ಪೀಡಿತರಾಗುತ್ತಿದ್ದು ಎಚ್ಚರಿಕೆ ಹಾಗೂ ರೋಗದ ಜಾಗೃತಿ ಅಗತ್ಯ ಎಂದು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ನಿರ್ದೇಶಕ ಡಾ.ಸಿ.ನಾಗರಾಜ್ ಹೇಳಿದರು.
ನಗರದ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಆಯೋಜಿಸಿದ್ದ, ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ವೈದ್ಯಕೀಯ ವಿದ್ಯಾರ್ಥಿಗಳ ಬೃಹತ್ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು ದೇಶದಲ್ಲಿ ಪ್ರತಿ 3 ನಿಮಿಷಕ್ಕೊಮ್ಮೆ ಒಬ್ಬರು ಕ್ಷಯರೋಗಿಗಳು ಸಾವನಪ್ಪುತ್ತಿದ್ದು, ರೋಗಕ್ಕೆ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಕ್ಷಯರೋಗದ ಬಗ್ಗೆ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಜನಪ್ರತಿನಿಧಿಗಳ ಜತೆಗೆ ಯುವಕರೂ ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಈ ಮೂಲಕ ಸದೃಢ ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸಮರೋಪಾದಿಯಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ಯಾವುದೇ ರೀತಿಯಲ್ಲಿಯೂ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಯುವಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮ್ಯಾರಾಥಾನ್ ಮೂಲಕ ಅರಿವು ಮೂಡಿಸಲಾಗುತ್ತಿದ್ದೆ. ಸುತ್ತಮುತ್ತಲಿನವರಿಗೆ ಈ ಕುರಿತು ಮಾಹಿತಿ ನೀಡಬೇಕು. ಈ ಮೂಲಕ ಕ್ಷಯರೋಗ ತಡೆಗೆ ಯುವಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಾಗೃತಿ ಮೆರವಣಿಗೆಯಲ್ಲಿ ಡಾ.ರುದ್ರಯ್ಯ, ರಂಗಕರ್ಮಿ ಆ. ಶ್ರೀನಿವಾಸ್, ಹಿರಿಯ ವೈದ್ಯರು, ವಿದ್ಯಾರ್ಥಿಗಳು ಪಾಲ್ಗೊಂಡು, ಕ್ಷಯ ರೋಗ ಮುಕ್ತ ಸಮಾಜ ನಿರ್ಮಿಸಬೇಕೆಂದು ಭಿತ್ತಿ ಫಲಕಗಳನ್ನು ಪ್ರದರ್ಶನ ಮಾಡಿದರು.ನಂತರ ಹಿರಿಯ ರಂಗಕರ್ಮಿ ಆ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತ ಕಿರು ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮಂಡಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
