ಡಿ.28ಕ್ಕೆ ಕನಕ ಜಯಂತಿ, ಡಿ.29ಕ್ಕೆ ವಿಶ್ವಮಾನವ ದಿನಾಚರಣೆ

ದಾವಣಗೆರೆ:

         ಕಾರಣಾಂತರದಿಂದ ಮುಂದೂಡಲ್ಪಟ್ಟಿದ್ದ ದಾಸಶ್ರೇಷ್ಠ ಕನಕದಾಸ ಜಯಂತಿಯನ್ನು ಡಿ.28ರಂದು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಆಚರಿಸುವ ವಿಶ್ವ ಮಾನವ ದಿನಾಚರಣೆಯನ್ನು ಡಿ.29ರಂದು ನಡೆಸಲು ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

            ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕುರುಬ ಸಮಾಜದ ಮುಖಂಡರು ಒಪ್ಪಿದ್ದರೆ, ಡಿ.29ರಂದು ಕನಕ ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆಯನ್ನು ಒಟ್ಟಿಗೆ ಆಚರಿಸೋಣ ಎಂದಾಗ, ಸಮಾಜದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಡಿ.28ರಂದು ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕನಕ ಜಯಂತಿ ಹಾಗೂ ಡಿ.29ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ವಿಶ್ವಮಾನವ ದಿನಾಚರಣೆ ಆಚರಿಸಲು ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದು ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಅವರಿಗೆ ಸೂಚಿಸಿದರು.

           ಮಾಜಿ ಮೇಯರ್, ಕುರುಬ ಸಮಾಜದ ಮುಖಂಡ ಹೆಚ್.ಬಿ.ಗೋಣೆಪ್ಪ, ಬಳ್ಳಾರಿ ಷಣ್ಮುಖಪ್ಪ ಮತ್ತಿತರರು ಮಾತನಾಡಿ, ಈಗಾಗಲೇ ಕನಕ ಜಯಂತಿಯನ್ನು ಮುಂದೂಡಿರುವ ಕಾರಣ ಸಮಾಜಬಾಂಧವರಲ್ಲಿ ನಿರಾಸಕ್ತಿ ಮೂಡಿದೆ. ಆದ್ದರಿಂದ ಮೆರವಣಿಗೆ ನಡೆಸಲು ಅವಕಾಶ ನೀಡಬೇಕೆಂದು ಸಲಹೆ ನೀಡಿದರು.

             ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಕನಕದಾಸರ ಜಯಂತಿ ಕುರಿತು ಪೂರ್ವಭಾವಿ ಸಭೆ ನಡೆಸಿ, ನಿರ್ಣಯ ಕೈಗೊಳ್ಳಲಾಗಿದೆ. ಈಗ ಮತ್ತೆ ನಿರ್ಣಯವನ್ನು ಬದಿಲಿಸಲಾಗುವುದಿಲ್ಲ. ಆದ್ದರಿಂದ ಹಿಂದಿನ ಸಭೆಯ ನಿರ್ಣಯದಂತೆ ಕನಕ ಜಯಂತಿ ಆಚರಿಸೋಣ ಎಂದರು.

           ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ್ದಲ್ಲದೇ, ಕನ್ನಡ ಅಸ್ಮಿತೆಯನ್ನು ಜಾಗೃತಿಗೊಳಿಸುವುದರ ಜೊತೆಗೆ ವೈಚಾರಿಕ ಚಿಂತನೆಯನ್ನು ಸಹ ನಡೆಸಿದ್ದರು. ಆದ್ದರಿಂದ ಕುವೆಂಪು ಜನ್ಮ ದಿನದಂದು ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಅವರ ವೈಚಾರಿಕ ಕೃತಿಗಳನ್ನು ಪರಿಚಯಿಸುವ ಮೂಲಕ ಕುವೆಂಪು ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕು. ಹಾಗೂ ಕನಕ ಜಯಂತಿಯಂದು ಕನಕದಾಸರ ಕೀರ್ತನೆಗಳನ್ನು ಹಾಡಿಸಬೇಕೆಂದು ಸಲಹೆ ನೀಡಿದರು. 

             ವಿಶ್ವಮಾನವ ದಿನಾಚರಣೆಯಲ್ಲಿ ಕುವೆಂಪು ಅವರ ಬಗ್ಗೆ ಉಪನ್ಯಾಸ ನೀಡಲು ಸಭೆಯಲ್ಲಿ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಗೌರಮ್ಮ ವಿಜಯಕುಮಾರ್ ಹಾಗೂ ಗೀತಾ ಬಸವರಾಜ್ ಅವರುಗಳ ಹೆಸರು ಬಂದಿದ್ದು, ಈ ಮೂವರನ್ನು ಸಂಪರ್ಕಿಸಿ ಮಾತನಾಡಿ, ಯಾರಾದರೊಬ್ಬರನ್ನು ಉಪನ್ಯಾಸಕ್ಕೆ ಹೆಸರು ಅಂತಿಮ ಗೊಳಿಸಿ ಹಾಗೂ ಗೀತ ಗಾಯನಕ್ಕೆ ಒಳ್ಳೆಯ ತಂಡಗಳನ್ನು ಕರೆಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

            ನೂಪುರ ನೃತ್ಯ ಶಾಲೆಯ ಬೃಂದಾ ಶ್ರೀನಿವಾಸ್ ಮಾತನಾಡಿ, ಕುವೆಂಪು ಗೀತೆಗಳ ಮೇಲೆ ನೃತ್ಯ ರೂಪಕ ನಡೆಸಿಕೊಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

            ಸಭೆಯಲ್ಲಿ ಕುರುಬ ಸಮಾಜದ ಮುಖಂಡರಾದ ಹೆಚ್.ಬಿ.ಪರಶುರಾಮ್, ಕೆ.ಪರಶುರಾಮ್, ಹಂಚಿನಮನೆ ತಿಪ್ಪಣ್ಣ, ಫುಟಬಾಲ್ ಗಿರೀಶ್, ಕಾಂತೇಶ್, ದೀಟೂರು ಚಂದ್ರು, ಧನರಾಜ್, ಕಾಂತೇಶ್, ಡಾಬಾ ರವಿ, ಮಹಾಂತೇಶ್, ರಮೇಶ್, ಮಂಜುನಾಥ್, ಡಿ-ಎಸ್4 ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಇಪ್ಟಾ ಕಲಾವಿದ ಐರಣಿ ಚಂದ್ರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link