ಹೊನ್ನಾಳಿ:
ರಾಸಾಯನಿಕ ಗೊಬ್ಬರಗಳ ಮಿತಬಳಕೆಯಿಂದ ಮಣ್ಣಿನ ಆರೋಗ್ಯವನ್ನು ಸಂರಕ್ಷಣೆ ಮಾಡಬಹುದು ಎಂದು ಕೃಷಿ ಅಧಿಕಾರಿ ಎ.ಎಂ. ಶಂಷೀರ್ ಅಹಮ್ಮದ್ ಹೇಳಿದರು.
ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಆತ್ಮ ಯೋಜನೆಯಡಿ ಗೋವಿನಕೋವಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಹಮ್ಮಿಕೊಂಡ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಯವ ಗೊಬ್ಬರ, ಎರೆಹುಳು ಗೊಬ್ಬರವನ್ನು ರೈತರಿಗೆ ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ, ಎಲ್ಲಾ ರೈತರು ಈ ಸೌಲಭ್ಯಗಳನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
“ಮಣ್ಣಿನ ಮಾಲಿನ್ಯಕ್ಕೆ ಪರಿಹಾರ” ಎಂಬುದು ಈ ವರ್ಷದ ಮಣ್ಣು ಆರೋಗ್ಯ ದಿನಾಚರಣೆಯ ಧ್ಯೇಯ ವಾಕ್ಯವಾಗಿದೆ. ಬೆಳೆಯ ಇಳುವರಿ, ಭೂಮಿಯ ಫಲವತ್ತತೆಗೆ ಮಣ್ಣಿನ ಆರೋಗ್ಯ ಅಗತ್ಯವಾಗಿದ್ದು, ಮಣ್ಣಿನ ಸಂರಕ್ಷಣೆ, ಮಣ್ಣಿನ ಆರೋಗ್ಯ ಕಾಪಾಡುವಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಕೃಷಿ ಇಲಾಖೆ ಮಣ್ಣು ಆರೋಗ್ಯ ಅಭಿಯಾನದಡಿ ಜಿಪಿಎಸ್ ಆಧಾರದ ಮೇಲೆ ಖುಷ್ಕಿ ಪ್ರದೇಶದಲ್ಲಿ 25 ಎಕರೆಗೆ ಒಂದು ಮಾದರಿಯಂತೆ, ನೀರಾವರಿ ಪ್ರದೇಶದಲ್ಲಿ 6.20 ಎಕರೆ ಜಮೀನಿನಲ್ಲಿ ಒಂದು ಮಾದರಿಯಂತೆ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮೊದಲನೇ ಹಂತದ ಮಣ್ಣು ಮಾದರಿಗಳನ್ನು ಸಂಗ್ರಹಣೆ ಮಾಡಿ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ವಿಶ್ಲೇಷಣಾ ವರದಿಯ ಅನ್ವಯ ಮಣ್ಣು ಆರೋಗ್ಯ ಕಾರ್ಡ್‍ಗಳನ್ನು ಈಗಾಗಲೇ ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಇಲಾಖೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ವಿವರಿಸಿದರು.
ನಿವೃತ್ತ ಸಹಾಯಕ ಕೃಷಿ ಅಧಿಕಾರಿ ನಾಗರಾಜ ಪಾಟೀಲ್, ಆರ್ಥಿಕ ಸಾಕ್ಷರತಾ ಸಮಾಲೋಚಕ ತೇಜೇಶ್ವರ್, ಗೋವಿನಕೋವಿ ಗ್ರಾಪಂ ಸದಸ್ಯ ಸಂತೋಷಕುಮಾರ ಇತರರು ಮಾತನಾಡಿದರು. ಗಂಗನಕೋಟೆ ಗ್ರಾಪಂ ಅಧ್ಯಕ್ಷೆ ಜಯಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಗೋವಿನಕೋವಿ ಗ್ರಾಪಂ ಅಧ್ಯಕ್ಷೆ ಎಚ್. ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು.
ಟಿಎಪಿಸಿಎಂಎಸ್ ನಿರ್ದೇಶಕ ಪ್ರೇಮ್‍ಕುಮಾರ್, ಸಹಾಯಕ ಕೃಷಿ ಅಧಿಕಾರಿ ಎಸ್.ಎನ್. ಓಲೇಕಾರ್, ಕೆ.ಬಿ. ಮಂಜುನಾಥಪ್ಪ, ಆತ್ಮ ಸಿಬ್ಬಂದಿ ಎಚ್. ಶೇಖರಪ್ಪ, ರೈತ ಉತ್ತೇಜಕರು ಮತ್ತು ಗೋವಿನಕೋವಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ