ವಿಶ್ವನಾಥ್ ನಿರ್ಧಾರ ಪುನರ್ ಪರಿಶೀಲಿಸಲು ದೇವೇಗೌಡರ ಸಲಹೆ …!!

ಬೆಂಗಳೂರು

    ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತವಾಗಿದ್ದು ಈ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆದು ಜೆಡಿಎಸ್‍ನ್ನು ಮುನ್ನಡೆಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದು ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರಿಗೆ ಸಿಗ್ನಲ್ ನೀಡಿದ್ದಾರೆ.

      ಇಂದು ಮಧ್ಯಾಹ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ವಿಶ್ವನಾಥ್ ಅವರನ್ನು ಕರೆಸಿಕೊಂಡ ದೇವೇಗೌಡ ಈ ಸೂಚನೆ ನೀಡಿದ್ದು,ರಾಜೀನಾಮೆಯನ್ನು ಹಿಂಪಡೆಯಲಾರೆ ಎಂದ ವಿಶ್ವನಾಥ್ ಅವರಿಗೆ ಈ ಮಾತು ಹೇಳಿದ್ದಾರೆ.

       ದೇವೇಗೌಡರು ನೀಡಿದ ಈ ವಿವರದ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ವಿಶ್ವನಾಥ್ ಅವರು ಪುನರ್ ಪರಿಶೀಲಿಸತೊಡಗಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಲಕ್ಷಣಗಳು ಹೆಚ್ಚಾಗಿವೆ.

     ಹಲ ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್ ಅವರು ಪಕ್ಷದ ನಾಯಕರು ಪದೇ ಪದೇ ನಿಮ್ಮ ನಿರ್ಧಾರವನ್ನು ಹಿಂಪಡೆಯಿರಿ ಎಂದು ಹೇಳಿದ್ದರೂ ಅದನ್ನು ಒಪ್ಪಿರಲಿಲ್ಲ.

     ಈ ಹಿನ್ನೆಲೆಯಲ್ಲಿ ಇಂದು ವಿಶ್ವನಾಥ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ದೇವೇಗೌಡರು,ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮನ್ನು ಬಿಟ್ಟು ಬೇರೆಯವರನ್ನು ತಂದು ಕೂರಿಸಲು ತಮಗೆ ಸಾಧ್ಯವಾಗುತ್ತಿಲ್ಲ.

    ಇವತ್ತಿನ ರಾಜಕೀಯ ಪರಿಸ್ಥಿತಿ ದಿನ ಕಳೆದಂತೆ ಸೂಕ್ಷ್ಮವಾಗುತ್ತಿದೆ.ಸಧ್ಯದ ಪರಿಸ್ಥಿತಿ ನೋಡಿದರೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಬಹುತೇಕ ಖಚಿತ.

     ಹೀಗಾಗಿ ಮುಂದಿನ ಚುನಾವಣೆಯನ್ನು ಎದುರಿಸಲು ನಾವು ಸಜ್ಜಾಗಬೇಕು.ಹಾಗೆಯೇ ಈ ಸಂದರ್ಭದಲ್ಲಿ ನಿಮ್ಮನ್ನು ಹೊರತುಪಡಿಸಿ ಆ ಜಾಗದಲ್ಲಿ ಯಾರನ್ನು ಕೂರಿಸಲೂ ಸಾಧ್ಯವಿಲ್ಲ ಎಂದು ದೇವೇಗೌಡರು ವಿವರಿಸಿದರು.ಒಂದು ಹಂತದಲ್ಲಿ ವಿಶ್ವನಾಥ್ ಅವರು ಮಧ್ಯೆ ಪ್ರವೇಶಿಸಿ,ನಾನು ರಾಜೀನಾಮೆ ಹಿಂಪಡೆಯಲಾರೆ.ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮಧುಬಂಗಾರಪ್ಪ ಅವರನ್ನುಕೂರಿಸಿ.ಆ ಮೂಲಕ ಹಿಂದುಳಿದ ಸಮುದಾಯಕ್ಕೆ ಆದ್ಯತೆ ನೀಡಿದಂತೆಯೂ ಆಗುತ್ತದೆ ಎಂದು ವಿವರಿಸಿದರು.

      ಆದರೆ ವಿಶ್ವನಾಥ್ ಅವರ ಮಾತನ್ನು ಬಿಲ್ ಕುಲ್ ಒಪ್ಪದ ದೇವೇಗೌಡರು:ನಿಮಗೆ ಹಲವು ಕಾರಣಗಳಿಂದ ಬೇಸರವಾಗಿದೆ ಎಂಬುದು ನನಗೆ ಗೊತ್ತಿದೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೀವು ಹೇಳಿದ ಕ್ಯಾಂಡಿಡೇಟ್ ಗೆ ಸಚಿವ ಸಾ.ರಾ.ಮಹೇಶ್ ಅವರು ಟಿಕೆಟ್ ನೀಡಲಿಲ್ಲ ಎಂಬುದು ನನಗೆ ಗೊತ್ತಿದೆ ಎಂದಾಗ ಸ್ಥಳದಲ್ಲೇ ಇದ್ದ ಸಾ.ರಾ.ಮಹೇಶ್ ಅವರು,ನಡೆದ ಘಟನೆಯನ್ನು ಮರೆತುಬಿಡಿ ಎಂದು ವಿಶ್ವನಾಥ್ ಅವರನ್ನು ಕೋರಿಕೊಂಡರು.

   ಅವರು ಈ ರೀತಿ ನಡೆದದ್ದನ್ನು ಮರೆತುಬಿಡಿ ಎಂದಾಗ ವಿಶ್ವನಾಥ್ ಅವರೂ ಮುಕ್ತ ಮನಸ್ಸಿನಿಂದ:ನಾನು ಅದನ್ನೆಲ್ಲ ಮರೆತಿದ್ದೇನೆ ಎಂದರೆನ್ನಲಾಗಿದೆ.ಅದೇ ರೀತಿ ವಿಶ್ವನಾಥ್ ಅವರು ರಾಜಕೀಯವಾಗಿ ಬಯಸಿದ ಸ್ಥಾನಮಾನಗಳ ಕುರಿತೂ ದೇವೇಗೌಡರು ಮುಕ್ತ ಮನಸ್ಸಿನಿಂದ ಮಾತನಾಡಿದ್ದಲ್ಲದೆ,ಸಮ್ಮಿಶ್ರ ಸರ್ಕಾರದ ಅನಿವಾರ್ಯತೆಗಳು ನಿಮಗೆ ಅರ್ಥವಾಗುತ್ತವೆ ಎಂದಾಗ ವಿಶ್ವನಾಥ್ ಸುಮ್ಮನಾದರು ಎಂದು ಮೂಲಗಳು ಹೇಳಿವೆ.

     ಈ ಮಧ್ಯೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳು ನಿಕಟವಾಗಿರುವ ಕುರಿತು ದೇವೇಗೌಡರು ಸುಧೀರ್ಘವಾಗಿ ಮಾತನಾಡಿದರೆಂದು ಮೂಲಗಳು ವಿವರಿಸಿವೆ.ಸಭೆಯಲ್ಲಿ ಉನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ,ಸಾ.ರಾ.ಮಹೇಶ್ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link