ವಿಶ್ವ ಪಾರಂಪರಿಕ ಪಟ್ಟಿಗೆ ಕೋಟೆ ಸೇರ್ಪಡೆಯಾಗಲಿ

ಚಿತ್ರದುರ್ಗ

     ನಗರದ ಐತಿಹಾಸಿಕ ಕೋಟೆ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳನ್ನು ಒತ್ತಾಯಿಸಿ ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ನೇತೃತ್ವದಲ್ಲಿ ಬುಧವಾರ ಮುಂಜಾನೆ ನಮ್ಮ ನಡಿಗೆ ಕೋಟೆ ಸಂರಕ್ಷಣೆಗೆ ಕಡೆಗೆ ಜಾಗೃತಿ ಜಾಥಾ ನಡೆಯಿತು.

     ಶರಣರು ಮುಂದಾಳತ್ವದಲ್ಲಿ ನೂರಾರು ಜನರು ಕೋಟೆಯನ್ನೇರಿ ವಿವಿಧ ಸ್ಥಳಗಳಿಗೆ ತೆರಳಿದರು. ಈ ವೇಳೆ ಶರಣರು ಭರಮಣ್ಣ ನಾಯಕರ ಸಮಾಧಿಗೆ ಹಾಗೂ ಬೆಟ್ಟದಲ್ಲಿರುವ ಮುರುಘಾ ಮಠಕ್ಕೂ ತೆರಳಿ ಗದ್ದುಗೆಗೆ ನಮಿಸಿದರು.

      ಕೋಟೆ ಅಭಿವೃದ್ಧಿಯಾಗಲಿ, ಕೋಟೆಯನ್ನು ಕಟ್ಟಲು ಇಂದು ಆಗಲ್ಲ, ಅದನ್ನು ಉಳಿಸಿಕೊಳ್ಳೋಣ. ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದೆಲ್ಲ ಘೋಷಣೆಗಳೊಂದಿಗೆ ಜಾಥಾ ಕೋಟೆ ಗಾಳಿ ಗೋಪುರ, ಪ್ರದೇಶಗಳಲ್ಲಿ ಮೊದಲಾದೆಡೆ ಸಾಗಿತು.

ಗೂಗಲ್‍ನಲ್ಲಿ ಹುಡುಕಿದರೂ ಸಿಗಲ್ಲ

      ಈ ವೇಳೆ ಮಾತನಾಡಿದ ಶರಣರು ಗೂಗಲ್ ಮ್ಯಾಪ್‍ನಲ್ಲಿ ಕೋಟೆಗೆ ದಾರಿ ಸಿಗಲ್ಲವೆಂದು ಬೇಸರಿಸಿದರು. ಜಗತ್ತಿನ ಹಲವು ದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ದುರ್ಗದಲ್ಲಿರುವ ಏಳು ಸುತ್ತಿನ ಕೋಟೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬೇಕು. ರಸ್ತೆ ಸಹಿತ ಹಲವು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

      ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆ ಐತಿಹಾಸಿಕ ಸ್ಥಳಗಳ ಟೂರ್ ಸಕ್ರ್ಯೂಟ್ ಸೇರ್ಪಡೆಗೆ ಚಿತ್ರದುರ್ಗ ಕೋಟೆ ಸಹಿತ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ವಿವಿಧ ಪ್ರವಾಸಿ ತಾಣಗಳ ಸೇರ್ಪಡೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ಸಿಗಲಿ ಎಂಬ ಒತ್ತಾಯವೂ ಕೇಳಿ ಬಂತು.

      ಕೋಟೆ ಮುಂಭಾಗಿಲಿಂದ ಹೊರಟ ಜಾಥ ಕೋಟೆಯೊಳಗೆ ಅಲ್ಲಲ್ಲಿ ಕುಸಿದಿರುವ, ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸ್ಮಾರಕಗಳನ್ನು ವೀಕ್ಷಿಸುತ್ತ, ಅವುಗಳ ರಕ್ಷಣೆಗೆ ತುರ್ತುಕ್ರಮ ಕೈಗೊಳ್ಳಬೇಕೆಂದು, ಆಗ್ರಹಿಸಲಾಯಿತು. ಅಷ್ಟೇಅಲ್ಲ, ಕೋಟೆಯ ಆವರಣದಲ್ಲಿನ ಸ್ವಚ್ಛತೆಗೂ ಆದ್ಯತೆ ನೀಡಿ, ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

      ಸುಮಾರು 400 ವರ್ಷಗಳ ಸ್ಪಷ್ಟ ಇತಿಹಾಸವನ್ನು ಹೊಂದಿರುವ ಚಿತ್ರದುರ್ಗದ ಈ ಕೋಟೆ ಅತ್ಯಂತ ಪ್ರಸಿದ್ಧವಾದುದು. ಇದನ್ನು ಹೊರತುಪಡಿಸಿ ಮತ್ತೆಲ್ಲಿಯೂ ಈ 7 ಸುತ್ತಿನ ಕೋಟೆಯ ಬಗೆಯನ್ನು ಕಾಣಲು ಸಾಧ್ಯವಿಲ್ಲ. ಇದೊಂದು ಅಪೂರ್ವವಾದ, ಅಪರೂಪದ ಸುಂದರ ಐತಿಹಾಸಿಕ ತಾಣ.

       ಈ ಕೋಟೆ ಆವರಣದಲ್ಲಿ ಪ್ರಾಚೀನವಾದ ಸ್ಮಾರಕಗಳು, ದೇವಾಲಯಗಳು, ಜಗತ್ತಿನ ಗಮನಸೆಳೆಯುವ ಬುರ್ಜುಗಳು, ಬತೇರಿಗಳು, ಇಗರ್ಜಿಗಳು ಅತ್ಯಂತ ಆಕರ್ಷಕವಾಗಿರುವಂತಹವು. ಇಂತಹ ಸ್ಥಳಗಳಲ್ಲೂ ಅವ್ಯವಸ್ಥೆಗಳು ಬೆಳೆಯುತ್ತಿರುವುದು ನಿಜವಾಗಿ ವಿಷಾದನೀಯ. ಇದೊಂದು ಪ್ರವಾಸಿ ತಾಣ. ಕೂಡಲೇ ಶಿಥಿಲಗೊಂಡಿರುವ ಗೋಡೆಗಳನ್ನು ಸ್ಮಾರಕಗಳನ್ನು ರಕ್ಷಿಸಲು ಸೂಕ್ತ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಇದನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ ಮಾಡುತ್ತೇವೆಂದು ಶರಣರು ನುಡಿದರು.

       ಇಲ್ಲಿ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ರೋಪ್‍ವೇ(ಹಗ್ಗದ) ವ್ಯವಸ್ಥೆ, ರಸ್ತೆ ಅಗಲೀಕರಣ, ವಿದ್ಯುತ್ ವ್ಯವಸ್ಥೆ, ಗೋಡೆಗಳ ಕುಸಿತ ತಡೆಯುವಿಕೆ ಮತ್ತು ಕುಸಿದ ಗೋಡೆಗಳ ದುರಸ್ತೀಕರಣ ಆಗಬೇಕೆಂದು, ಸಂಬಂಧಪಟ್ಟ ಇಲಾಖೆಗಳು ತಕ್ಷಣ ಗಮನಹರಿಸಬೇಕೆಂದು ಮುರುಘಾ ಶರಣರು ನುಡಿದರು. ಈ ಹಿನ್ನೆಲೆಯಲ್ಲಿಯೇ ನಮ್ಮ ಇಂದಿನ ಈ `ನಮ್ಮ ನಡಿಗೆ – ಕೋಟೆ ಸಂರಕ್ಷಣೆಯ ಕಡೆಗೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

      ಸ್ವದೇಶಿ ದರ್ಶನ ಯೋಜನೆಯಲ್ಲಿ ಆಗಿರುವ ಬೆಳವಣಿಗೆಯ ಮಾಹಿತಿ ಪಡೆದು ಮುಂದಿನ ಪ್ರಗತಿಯ ಕುರಿತಂತೆಯೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿಯೂ ಶರಣರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

       ಇದೇ ಸಂದರ್ಭದಲ್ಲಿ ತಿಪಟೂರಿನ ಶ್ರೀ ರುದ್ರಮುನಿ ಸ್ವಾಮಿಗಳು, ಕೆಇಬಿ ಷಣ್ಮುಖಪ್ಪ, ಆನಂದಪ್ಪ, ಮಲ್ಲಿಕಾರ್ಜುನ್, ಪೈಲ್ವಾನ್ ತಿಪ್ಪೇಸ್ವಾಮಿ, ಶೇಷಣ್ಣಕುಮಾರ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಎನ್.ತಿಪ್ಪಣ್ಣ ಹಾಗೂ ಸಿಬ್ಬಂದಿಯವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap