ದೇವೇಗೌಡರ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಪ್ರಚಾರ

ತುಮಕೂರು

      ದೇಶದ 130 ಕೋಟಿ ಜನರ ಭವಿಷ್ಯ ನಿರ್ಧರಿಸುವ ಮತ್ತು ಜಾಗತಿ ಮಟ್ಟದಲ್ಲಿ ಅತ್ಯಂತ ಘನತೆಯ ನಮ್ಮ ಜನತಂತ್ರದ ಸಂಸತ್ತಿಗೆ ನಡೆದಿರುವ ಈ ಚುನಾವಣೆ ಬಗ್ಗೆ ಭಾರತೀಯರೂ ಸೇರಿ ಜಗತ್ತಿನ ಎಲ್ಲಾ ದೇಶಗಳ ಜನ ಕುತೂಹಲದಿಂದ ನೋಡುತ್ತಿದ್ದಾರೆ. ಇದು ನಕಲಿ ರಾಷ್ಟ್ರೀಯವಾದಿಗಳು ಹಾಗೂ ಬಹುಜನರ ಬಹುತ್ವವಾದದ ನಡುವಿನ ಸಂಘರ್ಷ ಈ ಚುನಾವಣೆಯಲ್ಲಿ ಎದ್ದು ಕಾಣುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ವಿಶ್ಲೇಷಿಸಿದರು

      ಮೈತ್ರಿ ಅಭ್ಯರ್ಥಿ ದೇವೇಗೌಡರ ಪರ ನಗರದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವಿಶ್ವಾನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಪಾರ ಅನುಭವಿ ನಾಯಕರಾದ ದೇವೇಗೌಡರು ಸಂಮಿಶ್ರ ಸರ್ಕಾರದಲ್ಲಿ ಸನ್ನಿವೇಶ ಎದುರಾದರೆ ಪ್ರಧಾನಿ ಸ್ಥಾನ ಅಲಂಕರಿಸುವ ಅವಕಾಶವಿದೆ. ಪ್ರಧಾನಿ ಮಾಡುವಂತಹ ಅವಕಾಶ ತುಮಕೂರಿಗೆ ಬಂದಿದೆ, ಕ್ಷೇತ್ರದ ಮತದಾರರು ದೇವೇಗೌಡರನ್ನು ಸಂಸತ್ತಿಗೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

       ಮೋದಿ ಆಡಳಿತವನ್ನು ಯಾರೂ ಟೀಕೆ ಮಾಡುವಂತಿಲ್ಲ. ಮೋದಿಯ ಸುಳ್ಳುಗಳನ್ನು ಹೇಳುವವರು ದೇಶದ್ರೋಹಿಗಳು. ಅವರ ಬೆನ್ನು ತಟ್ಟುವವರು ದೇಶಪ್ರೇಮಿಗಳು ಎನ್ನವಂತಾಗಿದೆ. 14ನೇ ಇಸವಿಯಲ್ಲಿ ಚುನಾವಣೆ ವೇಳೆ ಮೋದಿ ಕೊಟ್ಟ ವಚನಗಳು ಏನಾದವು? ಬರೀ ಸುಳ್ಳು ಹೇಳಿಕೊಂಡೇ ಐದು ವರ್ಷ ಆಡಳಿತ ನಡೆಸಿದ ಮೋದಿ ಮಹಾನ್ ಸುಳ್ಳುಗಾರ ಹಾಗೂ ಭ್ರಷ್ಟ, ಅವರು ಜೈಲಿಗೆ ಹೋಗುವುದು ಶತಸಿದ್ದ ಎಂದರು.

       ಹತ್ತು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದ ಮೋದಿ, ಉದ್ಯೋಗ ಸೃಷ್ಠಿ ಮಾಡುವುದಿರಲಿ, ಇದ್ದ ಉದ್ಯೋಗಗಳನ್ನೂ ಕಿತ್ತುಕೊಂಡರು. ಬಿಎಸ್‍ಎಲ್‍ಎನ್‍ನ 60 ಸಾವಿರ ಉದ್ಯೋಗ ಕಡಿತ ಮಾಡಿದರು. ಬಿಎಸ್‍ಎಲ್‍ಎನ್ ಅನ್ನು ಜಿಯೋ ಮಾಡಲು ಮೋದಿ ಹೊರಟಿದ್ದಾರೆ. ಪ್ರಧಾನಿ ಮೋದಿ ಖಾಸಗಿ ಕಂಪನಿಯ ಅಂಬಾಸಿಡರ್ ಆಗಿದ್ದಾರೆ ಎಂದು ಟೀಕಿಸಿದರು.

      ಹಳ್ಳಿ ಹಳ್ಳಿಗೂ ಟೆಲಿಕಾಂ ಕೊಟ್ಟಿದ್ದು ರಾಜೀವ್ ಗಾಂಧಿ, ದೊಡ್ಡ ದೊಡ್ಡ ಅಣೆಕಟ್ಟು ಕಟ್ಟಿಸಿದ್ದು ನೆಹರೂ, ಕೈಗಾರಿಕಾ ಸಂಸ್ಥೆಗಳನ್ನು ಮುಚ್ಚುವ ಸ್ಥಿತಿಗೆ ತಂದಿರುವ ಮೋದಿಯವರೇ, ಹೆಚ್‍ಎಂಟಿ, ಬಿಇಎಂಎಲ್, ಬಿಹೆಚ್‍ಇಎಲ್ ಮುಂತಾದವು ಯಾರ ಕೊಡುಗೆ ಎಂದು ತಿಳಿಯಿರಿ ಎಂದು ಹೇಳಿದರು.

      ದೊಡ್ಡ ಕ್ರಾಂತಿ ಮಾಡಿದವರು ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವ ಮೋದಿ ಯಾವುದಾದರೂ ಅಣೆಕಟ್ಟು ಕಟ್ಟಿಸಿದ್ದಾರಾ, ರೈತರ ಸಮಸ್ಯೆ ಬಗೆಹರಿಸಿದ್ದಾರಾ ಎಂದು ಪ್ರಶ್ನಿಸಿದ ವಿಶ್ವನಾಥ್, ಬರೀ ಮಾತು, ಭಾಷಣ ಮಾಡಿಕೊಂಡೇ ಅಧಿಕಾರ ಮುಗಿಸಿದರು ಎಂದರು.

       ದೇಶದಲ್ಲಿ ಯುದ್ದ, ದಾಳಿ ಹೊಸದೇನೂ ಅಲ್ಲ. ನೆಹರೂ, ಶಾಸ್ತ್ರಿ, ಇಂದಿರಾಗಾಂಧಿ ಕಾಲದಲ್ಲೂ ಹಲವು ಬಾರಿ ಭಾರತ- ಪಾಕಿಸ್ತಾನದ ನಡುವೆ ಯುದ್ದಗಳು ನಡೆದಿವೆ. ಯುದ್ದ, ದಾಳಿಯನ್ನು ವೈಭವೀಕರಿಸುವ, ಅದರ ಮೂಲಕ ತಾವೊಬ್ಬ ದೇಶ ರಕ್ಷಕ ಎಂದು ಬಿಂಬಿಸಿಕೊಳ್ಳುವ ಮೋದಿ, ಜನರ ಪರ ಯೋಜನೆ ರೂಪಿಸದೆ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಪ್ರಚಾರ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೆಚ್ ವಿಶ್ವನಾಥ್ ಹೇಳಿದರು.

      ರಫೆಲ್ ಯುದ್ದ ವಿಮಾನ ಖರೀದಿ ಕಡತಗಳು ರಕ್ಷಣಾ ಇಲಾಖೆ ರಕ್ಷಣೆಯಲ್ಲೇ ಇದ್ದರೂ ಕಳ್ಳತನವಾಗಿವೆ ಎಂದರೆ ಮೋದಿಯ ಆಡಳಿತ ವೈಖರಿ ಏನೆಂಬುದು ಜನರಿಗೆ ಅರ್ಥವಾಗುತ್ತದೆ ಎಂದರು.

ಕಾಡದ ಪಾಪ ಪ್ರಜ್ಞೆ

       ಕಾಂಗ್ರೆಸ್‍ನವರು ಕಳ್ಳರು, ಕಪ್ಪುಹಣ ಹೊಂದಿದ್ದಾರೆ, ಕಪ್ಪುಹಣ ಹೊರ ತೆಗೆಯುತ್ತೇನೆ, ಜನರಿಗೆ ತಲಾ 15 ಲಕ್ಷ ಹಂಚುತ್ತೇನೆ ಎಂದು ಹಿಂದಿನ ಚುನಾವಣೆ ವೇಳೆ ಹೇಳಿ ಅಧಿಕಾರಕ್ಕೆ ಬಂದ ಮೋದಿ, ತಾನು ನುಡಿದಂತೆ ನಡೆಯಲಿಲ್ಲ ಎಂಬ ಪಾಪ ಪ್ರಜ್ಞೆ ಅವರನ್ನು ಕಾಡುತ್ತಿಲ್ಲವೆ ಎಂದು ಸಚಿವೆ ಜಯಮಾಲ ಕೇಳಿದರು.

       ವಿವಾದ ಹೇಳಿಕೆ ನೀಡುತ್ತಾ ಜಾತಿ, ಧರ್ಮಗಳನ್ನು ಒಡೆಯುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಠಿಸಿ ಅದನ್ನು ಅಧಿಕಾರದ ಲಾಭವಾಗಿ ಮೋದಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

       ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ರಮೇಶ್‍ಬಾಬು, ತಿಮ್ಮರಾಯಪ್ಪ, ಮುಖಂಡರಾದ ಪ್ರೊ. ರಾಧಾಕೃಷ್ಣ, ಗೋವಿಂದರಾಜು, ಜಿ ಎಸ್ ಸೋಮಶೇಖರ್, ಮುರಳಿಧರ ಹಾಲಪ್ಪ, ಬೆಳ್ಳಿ ಲೋಕೇಶ್, ಡಾ. ಇಂತಿಯಾಜ್ ಅಹಮದ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ