ನೂತನ ಜಿಲ್ಲೆಗೆ ಬೇಡಿಕೆ ಇಟ್ಟ ಹಳ್ಳಿಹಕ್ಕಿ..!

ಬೆಂಗಳೂರು

    ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸರ ಹೆಸರಿನಲ್ಲಿ ಹೊಸ ಜಿಲ್ಲೆಯನ್ನು ಸ್ಥಾಪಿಸಬೇಕು ಎಂದು ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

     ಹುಣಸೂರು,ಸಾಲಿಗ್ರಾಮ,ಸರಗೂರು,ಹೆಚ್.ಡಿ.ಕೋಟೆ,ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳನ್ನು ಒಳಗೊಂಡ ಡಿ.ದೇವರಾಜ ಅರಸು ಜಿಲ್ಲೆಯನ್ನು ಪ್ರಾರಂಭಿಸುವುದು ಆಡಳಿತಾತ್ಮಕವಾಗಿಯೂ ಒಳ್ಳೆಯದು ಎಂದು ಮುಖ್ಯಮಂತ್ರಿಗಳಿಗೆ ಅವರು ವಿವರಿಸಿದ್ದಾರೆ.ಆದರೆ ಈ ಸಂಬಂಧ ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಿ ಒಮ್ಮತಕ್ಕೆ ಬನ್ನಿ,ನಂತರ ನಿಯೋಗದೊಂದಿಗೆ ಬಂದು ಪ್ರಸ್ತಾವನೆ ಸಲ್ಲಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಚ್.ವಿಶ್ವನಾಥ್ ಅವರಿಗೆ ಸೂಚಿಸಿದ್ದಾರೆ.

    ಹೊಸ ಜಿಲ್ಲೆಯ ರಚನೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಏಳುವುದು ಸಹಜ.ಹೀಗಾಗಿ ಪರಸ್ಪರ ಮಾತುಕತೆಯ ಮೂಲಕ ಜನಪ್ರತಿನಿಧಿಗಳು ಒಂದು ನಿರ್ಧಾರಕ್ಕೆ ಬನ್ನಿ.ನಂತರ ನಿಯೋಗದಲ್ಲಿ ಬಂದು ಪ್ರಸ್ತಾವನೆ ಸಲ್ಲಿಸಿ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಹೊಸ ಜಿಲ್ಲೆ ಸ್ಥಾಪಿಸಿ.ಹುಣಸೂರು ಸೇರಿದಂತೆ ಆರು ತಾಲ್ಲೂಕುಗಳು ಇದರ ವ್ಯಾಪ್ತಿಗೆ ಬರಲಿ ಎಂದು ವಿಶ್ವನಾಥ್ ಅವರು ಮುಖ್ಯಮಂತ್ರಿಗಳಿಗೆ ಪ್ರಾಥಮಿಕವಾಗಿ ವಿವರಿಸಿದರು.

    ಹೊಸ ಜಿಲ್ಲೆಯ ರಚನೆಯಿಂದ ಮೈಸೂರು ಜಿಲ್ಲೆಯ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ.ಅದೇ ಕಾಲಕ್ಕೆ ಪ್ರತಿ ಕೆಲಸಕ್ಕೂ ಮೈಸೂರಿಗೆ ಬಂದು ಹೋಗುವ ಪ್ರಯಾಸ ಸಾಮಾನ್ಯ ಜನರಿಗೆ ತಪ್ಪುತ್ತದೆ.ಆರ್ಥಿಕವಾಗಿಯೂ ಇದು ಪ್ರಬಲ ಜಿಲ್ಲೆಯಾಗಿ ಹೊರಹೊಮ್ಮಲಿದ್ದು ಜಗತ್ಪ್ರಸಿದ್ದ ವರ್ಜಿನಿಯಾ ತಂಬಾಕನ್ನು ಇಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ.ಹಾಗೆಯೇ ಭತ್ತ,ಕಬ್ಬು,ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಈ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.

      ಇದರಿಂದಾಗಿ ಸಾವಿರಾರು ಕೋಟಿ ರೂಗಳ ವಹಿವಾಟು ನಡೆಯುತ್ತಿದ್ದು ಡಿ.ದೇವರಾಜ ಅರಸು ಜಿಲ್ಲೆ ಸ್ಥಾಪನೆಯಿಂದ ಅನುಕೂಲವೇ ಹೆಚ್ಚು ಎಂದು ಹೆಚ್.ವಿಶ್ವನಾಥ್ ಅವರು ಸಿಎಂಗೆ ವಿವರಿಸಿದ್ದಾರೆ .ಹುಣಸೂರು,ಸಾಲಿಗ್ರಾಮ,ಸರಗೂರು ,ಕೆ.ಆರ್.ನಗರ,ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಒಳಗೊಂಡ ಡಿ.ದೇವರಾಜ ಅರಸು ಜಿಲ್ಲೆಯ ಸ್ಥಾಪನೆಯಿಂದ ಅರಸರಿಗೆ ಗೌರವ ಸಲ್ಲಿಸಿದಂತಾಗುತ್ತದೆ.ಹಾಗೆಯೇ ವ್ಯಕ್ತಿಯ ಹೆಸರನ್ನು ಜಿಲ್ಲೆಯ ಹೆಸರನ್ನಾಗಿ ಇಟ್ಟಿರುವುದು ಹೊಸ ಸಂಪ್ರದಾಯವೇನೂ ಅಲ್ಲ.

       ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಜಿಲ್ಲೆಗಳಿಗೆ ಹೆಸರು ಇಡಲಾಗಿದೆ.ಕರ್ನಾಟಕದಲ್ಲೂ ಅಂತಹ ಪರಂಪರೆ ಆರಂಭಿಸುವುದು ಸಾಮಾಜಿಕ ಕ್ರಾಂತಿಯ ಹರಿಕಾರರಾದ ದೇವರಾಜ ಅರಸರಿಗೆ ನಾವು ಸಲ್ಲಿಸುವ ಗೌರವ ಎಂದು ವಿಶ್ವನಾಥ್ ಅವರು ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap