ವಿವೇಕ ಇಲ್ಲದವರಿಗೆ ವಿವೇಕವನ್ನು ಕೊಡುವವನೇ ನಿಜವಾದ ನಾಯಕ:ಸುಬ್ರಹ್ಮಣ್ಯ ನಾವಡ

ತುಮಕೂರು:

     “ಭಾರತ ಎಂಬ ಒಂದು ರಾಷ್ಟ್ರ, ಗೌರವ, ಘನತೆ ಇಲ್ಲದೆ ಇದ್ದ ದೇಶವಾಗಿತ್ತು. ಭಾರತ ಅದ್ಭುತ ಧಾರ್ಮಿಕ ಸಂಸ್ಕೃತಿಯನ್ನು ಹೊಂದಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಊಟ, ನಿದ್ರೆ, ವಿಶ್ರಾಂತಿ ಎಲ್ಲವನ್ನು ತ್ಯಜಿಸಿ ಭಾರತ ತಾಯಿಗೆ ನಾನೇನು ಕೊಡಬೇಕು ಎಂದು ಸದಾ ಚಿಂತನೆಯಲ್ಲಿ ತೊಡಗಿದ್ದರು.

      ನರೇಂದ್ರನಲ್ಲಿದ್ದ ರಾಷ್ಟ್ರಭಕ್ತಿ, ದೇಶಪ್ರೇಮ, ಒಳ್ಳೆಯ ಚಿಂತನೆ ಇವುಗಳನ್ನು ಮನಗಂಡ ರಾಮಕೃಷ್ಣ ಪರಮಹಂಸರು ವಿವೇಕಾನಂದ ಎಂದು ಕರೆದರು. ಯೋಗ್ಯ ನಾಯಕನಾದವನು ನಾಯಕರನ್ನು ಬೆಳೆಸದೆ ಇರುವುದು ನಾಯಕನಲ್ಲ. ನಾಯಕರನ್ನು ಬೆಳೆಸುವುದು ನಾಯಕತ್ವ ವಿವೇಕ ಇಲ್ಲದವರಿಗೆ ವಿವೇಕವನ್ನು ಕೊಡುವವನೇ ನಿಜವಾದ ನಾಯಕ. ಸಾವಿರಾರು ಯುವಕರಿಗೆ ವಿವೇಕವನ್ನು ನೀಡುವುದರ ಮೂಲಕ ವಿವೇಕಾನಂದರು ನಿಜವಾದ ನಾಯಕರಾಗಿದ್ದರು” ಎಂದು ರಾಷ್ಟ್ರೀಯ ಬಾಲಶ್ರೀ ಪ್ರಶಸ್ತಿ ಪುರಸ್ಕೃತರಾದ ಚಿ|| ಸುಬ್ರಹ್ಮಣ್ಯ ನಾವಡರವರು ತಿಳಿಸಿದರು.

       ಅವರು ಜ್ಞಾನಬುತ್ತಿ ಸತ್ಸಂಗ ಕೇಂದ್ರ, ಆದರ್ಶ ನಗರ ಶಾಖೆ, ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಟೂಡಾ ಆಫೀಸ್ ಹತ್ತಿರ, ಬೆಳಗುಂಬ ರಸ್ತೆ, ತುಮಕೂರು, ಇಲ್ಲಿ 141 ನೇ ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ “ವಿವೇಕದ ಹೊಂಗಿರಣ” ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತಾ “ಯುವಕರಿಗೆ, ವೃದ್ಧರಿಗೆ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಮಧ್ವ, ಬಸವರನ್ನು ಮೀರಿಸುವ ಗುಣವನ್ನು ಹೊಂದಿದ್ದರು.

        ಸ್ವಾಮಿ ವಿವೇಕಾನಂದರ ಚಿಂತನೆಗಳು ಪುಳಕವನ್ನುಂಟು ಮಾಡುತ್ತವೆ. ಜ್ಞಾನಕ್ಕಾಗಿ, ವಿವೇಕಕ್ಕಾಗಿ, ಅಜ್ಞಾನವನ್ನು ಹೋಗಲಾಡಿಸಲು ಓದಬೇಕು. ಪ್ರಾಮಾಣಿಕ ಪ್ರಯತ್ನದಿಂದ ಒಬ್ಬ ವ್ಯಕ್ತಿ ಯೋಗ್ಯತೆಯನ್ನು ಸಂಪಾದಿಸಬಹುದು. ಭಾರತೀಯ ಮಣ್ಣು ಪುಣ್ಯದ ಮಣ್ಣು, ಇಂತಹ ಈ ಮಣ್ಣಿನಲ್ಲಿ ನಾವು ಹುಟ್ಟಿರುವುದೇ ಪುಣ್ಯ.

        ಭಾರತೀಯರಲ್ಲಿದ್ದ ವಿವೇಕ ಬ್ರಿಟಿಷರು ಸ್ವಾತಂತ್ರ್ಯ ನೀಡುವಂತೆ ಮಾಡಿತ್ತು. ಬಡತನ, ರೋಗ, ಜಾತಿ ವ್ಯವಸ್ಥೆ, ಅನಕ್ಷರತೆ ಇವುಗಳನ್ನು ತೊಲಗಿಸಲು ಭಾರತೀಯ ಚಿಂತನೆಗಳನ್ನು ಪಡೆದುಕೊಳ್ಳದಿದ್ದರೆ ನಾವು ಹುಟ್ಟಿದ್ದು ವ್ಯರ್ಥ ಅನಿಸಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದರು ಹಗಲು-ರಾತ್ರಿ ಎನ್ನದೆ ಏಳು ವರ್ಷಗಳ ಕಾಲ ಸಂಚಾರ ಮಾಡಿ ಸಾವಿರ ವರ್ಷಕ್ಕೆ ಆಗುವಷ್ಟು ಚಿಂತನೆಗಳನ್ನು ಕೊಟ್ಟಿದ್ದಾರೆ. ಮೃಗದ ಮನುಷ್ಯತ್ವವನ್ನು ಬಿಟ್ಟು ಮಾನವೀಯ ಮೌಲ್ಯದ ಮಾನವೀಯತೆಯನ್ನು ರೂಢಿಸಿಕೊಳ್ಳಬೇಕೆಂದರು. ಸಂಸ್ಕಾರ ಬಹಳ ಮುಖ್ಯ. ಅಜ್ಜ ಅಜ್ಜಿಯರು ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವುದರ ಮೂಲಕ ಸಂಸ್ಕಾರವನ್ನು ಕಲಿಸುತ್ತಿದ್ದರು. ಬೆಳಕನ್ನು ಕೊಡುವ ಚಿಂತನೆಗಳ ಬಗ್ಗೆ ಸದಾ ಮನಸ್ಸನ್ನು ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.

       ಜ್ಞಾನಬುತ್ತಿ ಸತ್ಸಂಗ ಆದರ್ಶ ನಗರ ಶಾಖೆಯ ಅಧ್ಯಕ್ಷರಾದ ಶ್ರೀ ಕೆ. ಭಕ್ತಪ್ರಸಾದ್ ಮಾತನಾಡುತ್ತಾ “ವಿವೇಕಾನಂದರ ಸ್ಫೂರ್ತಿ ಜನರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದೆ ಎಂಬುದು ಮುಖ್ಯ. ವಿವೇಕ ಎಂಬುದು ವಿವೇಕಾನಂದರ ಹೆಸರಿನಲ್ಲಿದೆ. ವಿವೇಕ ಎಂದರೆ ಜ್ಞಾನ, ಮಾಹಿತಿ ಮತ್ತು ವಿವೇಚನೆ. ಜ್ಞಾನ ಮತ್ತು ಮಾಹಿತಿಯ ಜೊತೆಗೆ ವಿವೇಚನೆ ಸೇರಿದಾಗ ವಿವೇಕ ಉಂಟಾಗುತ್ತದೆ. ಮಾಹಿತಿ ಗ್ರಹಿಸಿ ವಿವೇಕವನ್ನು ರೂಢಿಸಿಕೊಳ್ಳಬೇಕು.

       ಜ್ಞಾನ ಮತ್ತು ಮಾಹಿತಿ ಸೇರಿದರೆ ಬುದ್ಧಿ ಉಂಟಾಗುತ್ತದೆ. ಕತ್ತೆಯು ಭತ್ತ, ಕಲ್ಲು, ಮಣ್ಣು ಈ ರೀತಿ ಭಾರವಾದ ವಸ್ತುಗಳನ್ನು ಹೊರುತ್ತದೆ. 20 ಕೆ.ಜಿ. ಶ್ರೀಗಂಧದ ಭಾರವನ್ನು ಹಾಕಿದರೆ ತೂಕದ ವ್ಯತ್ಯಾಸ ಗೊತ್ತಾಗುತ್ತದೆ. ಆದರೆ ಅದರ ಮೌಲ್ಯ ಗೊತ್ತಾಗುವುದಿಲ್ಲ. ಅದಕ್ಕೆ ಸರಿಯಾದ ವಿವೇಕ ಬೇಕು. ಅವೈಜ್ಞಾನಿಕವಾಗಿ ವರ್ತಿಸುವುದು ವೈಜ್ಞಾನಿಕ ಭಾವನೆಯಲ್ಲ. ಇದು ಅವಿವೇಕ. ವೈಜ್ಞಾನಿಕತೆ ಇರುವುದೇ ವಿವೇಕ ಎಂದರು. ನಾಗರೀಕನಿಗೆ ಕಾನೂನು ಗೊತ್ತಿದೆ. ಆ ಕಾನೂನು ವಿವೇಚನೆಯಿಂದ ಕೂಡಿರಬೇಕು. ಕಾನೂನು ಗೊತ್ತಿದ್ದರೂ ಅನಾಗರೀಕನಾಗಿ ವರ್ತಿಸುವುದು ಅವಿವೇಕ” ಎಂದರು.

       ಮಾಜಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ಕಾರ್ಯದರ್ಶಿ ಸಿದ್ಧರಾಮಯ್ಯ ಸ್ವಾಗತ ಕೋರಿದರು. ಮಾಜಿ ಅಧ್ಯಕ್ಷರಾದ ಮಂಜುನಾಥ ಗುಪ್ತರವರು ನಿರೂಪಿಸಿ ವಂದಿಸಿದರು. ಸಂಸ್ಥಾಪಕರಾದ ಶ್ರೀ ಪಿ. ಶಾಂತಿಲಾಲ್‍ರವರು ಚಿ|| ಸುಬ್ರಹ್ಮಣ್ಯ ನಾವಡ ರವರನ್ನು ಗೌರವಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link