ದಾವಣಗೆರೆ:
ಬಜೆಟ್‍ನಲ್ಲಿ ಉಚಿತ ಬಸ್ ಪಾಸ್‍ಗಾಗಿ ಹಣ ಮೀಸಲಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆ ಮುಖಂಡರು, ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಕಳೆದ ಕೆಲ ವಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಲಾಗಿತ್ತು. ಹಣದ ಕೊರತೆ ನೆಪದಲ್ಲಿ ಕಳೆದ ಬಜೆಟ್‍ನಲ್ಲಿ ಉಚಿತ ಬಸ್ ಪಾಸ್ ಜಾರಿಗೊಳಿಸಲು ಸರ್ಕಾರ ನಿರಾಕರಿಸಿತ್ತು. ಬೆಲೆ ಏರಿಕೆ, ನೋಟ್ ಬ್ಯಾನ್, ಬರ ಪರಿಸ್ಥಿತಿ ಮುಂತಾದವುಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದ 20 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಸರ್ಕಾರದ ನಿರ್ಧಾರ ಆಘಾತ ತಂದಿತ್ತು.
ನಂತರ ನಡೆದ ಪ್ರತಿಭಟನೆಗಳಿಗೆ ಮಣಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿದ್ದರು. ಆದರೆ ಈ ಘೋಷಣೆಯು ಸರ್ಕಾರ ಜಾರಿಯಾಗಲೇ ಇಲ್ಲ. ಬರುವ ಶೈಕ್ಷಣಿಕ ವರ್ಷದಿಂದಾದರೂ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಅವರು ಆಗ್ರಹಿಸಿದರು.
ವಸತಿ ನಿಲಯದ ಪ್ರತಿ ವಿದ್ಯಾರ್ಥಿಗೆ ಈಗ ಕೊಡುತ್ತಿರುವ ಅನುದಾನ ಅತ್ಯಂತ ಕಡಿಮೆ ಇದೆ. ಸಧ್ಯ ಸರ್ಕಾರಿ ಪ್ರತಿ ವಿದ್ಯಾರ್ಥಿಗೆ ದಿನವೊಂದಕ್ಕೆ 50 ರೂ.ನಂತೆ ಮಾಸಿಕ 1600 ರೂ. ಮಾತ್ರ ನೀಡುತ್ತಿದೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾಗಲೀ, ಉತ್ತಮ ಸೌಕರ್ಯವಾಗಲೀ ಒದಗಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರಿ ವಸತಿ ನಿಲಯದಲ್ಲಿ ಪ್ರತಿ ವಿದ್ಯಾರ್ಥಿಗೆ ಮಾಸಿಕ ಕನಿಷ್ಟ 4500 ರೂ. ಅನುದಾನ ಮೀಸಲಿಡಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯಾದ್ಯಂತ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ, ವಸತಿ ನಿಲಯಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಆದ್ದರಿಂದ ಅವಶ್ಯವಿರುವ ಕಡೆಗಳಲ್ಲಿ ವಸತಿ ನಿಲಯಗಳನ್ನು ಕೂಡಲೇ ಆರಂಭಿಸಬೇಕು. ಈಗಿರುವ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‍ಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ಹೊಸದಾಗ ಹಾಸ್ಟೆಲ್ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶಾಲಾ-ಕಾಲೇಜು ಪ್ರಾರಂಭವಾಗುವ ಸಂದರ್ಭದಲ್ಲೇ ವಸತಿ ನಿಲಯ ಆರಂಭಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ನಗರ ಅಧ್ಯಕ್ಷೆ ಸೌಮ್ಯ, ಮುಖಂಡರಾದ ನಾಗಜ್ಯೋತಿ, ಸತೀಶ, ತಿಪ್ಪೇಸ್ವಾಮಿ, ಪೂಜಾ, ನಾಗಸ್ಮಿತ, ಕಾರ್ತಿಕ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.