ವಿವಿಧ ತೆರಿಗೆಗಳ ಪರಿಷ್ಕಾರ: ಪಾಲಿಕೆ ತೀರ್ಮಾನ

ತುಮಕೂರು

      ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ವಿವಿಧ ಮೂಲಗಳ ತೆರಿಗೆಗಳನ್ನು ಪರಿಷ್ಕಾರಗೊಳಿಸಿ “ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ” ಕೈಗೊಂಡಿದ್ದ ತೀರ್ಮಾನಕ್ಕೆ ತುಮಕೂರು ಮಹಾನಗರ ಪಾಲಿಕೆಯ ಇತ್ತೀಚಿನ ಸಾಮಾನ್ಯ ಸಭೆಯೂ ಅನುಮೋದಿಸಿದೆ.

         ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.

       ಪಾವತಿ ವಾರಸು, ದಾನಪತ್ರ, ವಿಭಾಗ ಪತ್ರ, ವಿಲ್, ನ್ಯಾಯಾಲಯದ ಡಿಕ್ರಿ ಇತ್ಯಾದಿಗಳಿಗೆ ಈವರೆಗೆ ಹಕ್ಕುಬದಲಾವಣೆಗಾಗಿ ಕೇವಲ 120 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆದರೆ ಈಗ ಇದನ್ನು ಬದಲಾವಣೆಗೊಳಿಸಲಾಗಿದೆ. 1200 ಚ.ಅಡಿ ಸ್ವತ್ತಿಗೆ ವಸತಿ/ ನಿವೇಶನವಾದರೆ 500 ರೂ., ವಾಣಿಜ್ಯ ಸ್ವತ್ತಾದರೆ 1000 ರೂ.; 1200 ಚ.ಅಡಿಗಳಿಂದ 2400 ಚ.ಅಡಿಗಳವರೆಗಿನ ಸ್ವತ್ತಿಗೆ ವಸತಿಯಾದರೆ 1000 ರೂ., ವಾಣಿಜ್ಯವಾದರೆ 2000 ರೂ.; 2400 ಚ.ಅಡಿ ಮೇಲ್ಪಟ್ಟ ಸ್ವತ್ತು ವಸತಿಯಾದರೆ 1500 ರೂ., ವಾಣಿಜ್ಯವಾದರೆ 3000 ರೂ. ನಿಗದಿಪಡಿಸಲಾಗಿದೆ.

      ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಸ್ವತ್ತುಗಳು ಬಹು ವರ್ಷಗಳಿಂದ ದಾಖಲಾತಿಗಳಿಂದ ಕೈಬಿಟ್ಟು ಹೋಗಿದ್ದರೆ ಅವುಗಳನ್ನು ಮತ್ತೆ ಮುಂದುವರೆಸಲು ಈವರೆಗೆ ಕೇವಲ 120 ರೂ. ಮಾತ್ರ ಶುಲ್ಕವಿತ್ತು. ಆದರೆ ಈಗ ಶುಲ್ಕವನ್ನು ಪರಿಷ್ಕರಿಸಿ, ವಾರ್ಷಿಕ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸ್ವತ್ತಿನ ವಿವಿಧ ಅಳತೆಗಳಿಗೆ ಅನುಗುಣವಾಗಿ ಶುಲ್ಕವನ್ನು ವಿಧಿಸಲಾಗುವುದು.

     ಯಾವುದೇ ಸ್ವತ್ತುಗಳ ಹದ್ದುಬಸ್ತು ಗುರುತಿಸಿಕೊಡಲು ಈವರೆಗೆ ಯಾವುದೇ ಶುಲ್ಕ ವಿಧಿಸುವ ಪದ್ಧತಿಯೇ ಇರಲಿಲ್ಲ. ಇದೀಗ ಸ್ವತ್ತುಗಳ ಹದ್ದುಬಸ್ತು ಗುರುತಿಸಲು ಮೊದಲಬಾರಿಗೆ 500 ರೂ. ಶುಲ್ಕ ನಿಗದಿಗೊಳಿಸಲಾಗಿದೆ.

      ಪಾಲಿಕೆ ವ್ಯಾಪ್ತಿಯಲ್ಲಿ ನೋಂದಾವಣಿಯಾದ ಕ್ರಯಪತ್ರ/ದಾನಪತ್ರ/ವಿಭಾಗಪತ್ರ/ ಹಕ್ಕು ಖುಲಾಸೆ ಪತ್ರ/ ವಿಲ್ ಪತ್ರಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳ ಬಳಿಕ ಆಸ್ತಿ ತೆರಿಗೆ ಹಕ್ಕು ಬದಲಾವಣೆಗೆ ಪಾಲಿಕೆ ಕಚೇರಿಗೆ ಅರ್ಜಿಗಳು ಸಲ್ಲಿಕೆ ಆಗುತ್ತಿರುವುದನ್ನು ಚರ್ಚಿಸಿರುವ ಸಭೆಯು, ಒಂದು ವರ್ಷ ಮೀರಿದ ನಂತರ ಬರುವ ಆಸ್ತಿ ತೆರಿಗೆ ವರ್ಗಾವಣೆ ಕುರಿತ ಅರ್ಜಿಗಳಿಗೆ ಪ್ರತಿ ವರ್ಷಕ್ಕೆ 500 ರೂ.ಗಳನ್ನು “ವಿಳಂಬ ಶುಲ್ಕ”ವಾಗಿ ವಿಧಿಸಲು ತೀರ್ಮಾನ ಕೈಗೊಂಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap