ಹರಪನಹಳ್ಳಿ:
ಬರದನಾಡಾದ ತಾಲೂಕಿನ ಜನ ಬದುಕಿಗಾಗಿ ಕಾಪಿಸೀಮೆಗೆ ಗುಳೆ ಹೋಗಿರುವ ಪೋಷಕರಿಗೆ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ನಿಲಯ ಪಾಲಕಿ ಯಾಸ್ಮಿನ್ ರವರ ನೇತೃತ್ವದಲ್ಲಿ ಪತ್ರದ ಮುಖೇನ ಮತದಾನ ನಮ್ಮ ಹಕ್ಕು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಮ್ಮ ಬದುಕಿನ ಭವಣೆಗಳ ಮದ್ಯೆ ಒಂದು ದಿನ ಮತದಾನದ ನಿರ್ದಿಷ್ಟ ಸಮಯಕ್ಕೆ ಬಂದು ದೇಶದ ಅಭಿವೃದ್ದಿಗೆ ಸೂಕ್ತವ್ಯಕ್ತಿಯ ಆಯ್ಕೆ ಮಾಡಲು ಬನ್ನಿ ಮತ ಚಲಾಯಿಸಿ ಎಂದು ಅಂಚೆ ಇಲಾಖೆ ಮೂಲಕ ಪತ್ರ ರವಾನಿಸಲಾಗಿರುವುದು ವಿಶೇಷ ಜಾಗೃತಿ ಅಭಿಯಾನದಲ್ಲೊಂದಾಗಿದೆ.
ಮತದಾನದ ಬಗ್ಗೆ ಜಾಗೃತಿ ಅನಿವಾರ್ಯವಾಗಿದ್ದು, ಮತದಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಿಕೊಡಬೇಕಾದ ಅವಶ್ಯಕತೆಯಿದೆ. ಅಂತೆಯೆ. ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುರಸಭೆ, ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೆಎಸ್‍ಆರ್‍ಟಿಸಿ, ಗ್ರಾಮ ಪಂಚಾಯಿತಿಗಳು ಸೇರಿದಂತೆ ತಾಲೂಕು ಆಡಳಿತದ ಎಲ್ಲಾ ಇಲಾಖೆಗಳಿಂದಲೂ ಚುನಾವಣೆ ಮತದಾನದ ಜಾಗೃತಿ ಅಭಿಯಾನ ಭರದಿಂದ ಕಾರ್ಯೋನ್ಮುಖರಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಪಿಯುಸಿ ವಿದ್ಯಾರ್ಥಿನಿಯರ ವಸತಿ ನಿಲಯ ಮತ್ತು ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಜಾಗೃತಿ ಅಭಿಯಾನಗಳು ವಿಶೇಷವಾಗಿವೆ. ರಂಗೋಲಿ ಹಾಗೂ ಮೆಹಂದಿ ಹಾಕುವ ಮೂಲಕ ವೋಟ್ ಪಾರ್ ಬೆಟರ್ ಇಂಡಿಯಾ, ಮತದಾನ ನಮ್ಮ ಹಕ್ಕು ಎಂದು ಜಾಗೃತಿ ಮೂಡಿಸಲಾಗಿದೆ. ಆಮಿಷಗಳಿಗೆ ಮತವನ್ನು ಮಾರಿಕೊಳ್ಳಬೇಡಿ, ದೇಶದ ಸಮಗ್ರ ಅಭಿವೃದ್ದಿಗಾಗಿ ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಕಡ್ಡಾಯವೆಂಬ ಬರಹಗಳೋಂದಿಗೆ ಜಾಗೃತಿಗೆ ಹೊಸ ಕಳೆ ತಂದಿದ್ದಾರೆ.
ಪುರಸಭೆಯಿಂದ ಶಾಲಾ ಮಕ್ಕಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದರೆ. ಬಸ್ ನಿಲ್ದಾಣದಲ್ಲಿ ಕೆಎಸ್‍ಆರ್‍ಟಿಸಿ ಸಂಸ್ಥೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲಾ ವಸತಿ ನಿಲಯಗಳಲ್ಲೂ ಮಕ್ಕಳ ಮೂಲಕ ಮತದಾನ ಜಾಗೃತಿ ಅಭಿಯಾನ ನಡೆದಿದೆ.