ಮತವನ್ನು ಮಾರುವುದು-ಮಕ್ಕಳನ್ನು ಮಾರಿದಂತೆ

ತುಮಕೂರು

      ಮತದಾರ ತನ್ನ ಮತವನ್ನು ಮಾರಿದರೆ ಹೆತ್ತ ಮಕ್ಕಳನ್ನು ಮಾರಿದಂತೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ: ಜಿ.ಪಿ.ದೇವರಾಜ್ ತಿಳಿಸಿದರು.

        ಜಿಲ್ಲಾ ಸ್ವೀಪ್ ಸಮಿತಿಯಿಂದ ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಲು ಗ್ರಾಮಸ್ಥರನ್ನು ಪ್ರೇರೇಪಿಸಬೇಕು ಎಂದು ಅರಿವು ಮೂಡಿಸಿದರು.

         ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಆರ್.ರಾಜ್‍ಕುಮಾರ್ ಮಾತನಾಡಿ, ಕಳೆದ ಬಾರಿ ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದರಿಂದ ನಗರವಾಸಿಗಳು ವಿದ್ಯಾವಂತರಾದರೂ ಪ್ರಜ್ಞಾವಂತರಲ್ಲ ಎಂಬ ಅಪವಾದವನ್ನು ತೊಲಗಿಸಬೇಕು. ಪಾರದರ್ಶಕ ಮತದಾನ ಹಾಗೂ ಶೇಕಡವಾರು ಮತದಾನ ಪ್ರಮಾಣವನ್ನು ಹೆಚ್ಚಿಸುವುದು ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯ ಗುರಿಯಾಗಿದೆ. ಮತದಾನ ಜಾಗೃತಿ ಮೂಡಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎಷ್ಟು ಜವಾಬ್ದಾರಿ ಇದೆಯೋ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಮ ಮಟ್ಟದಲ್ಲಿ ಅಷ್ಟೇ ಜವಾಬ್ದಾರಿ ಇರುತ್ತದೆ ಎಂದು ಮನದಟ್ಟು ಮಾಡಿದರು.

        ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡಿ, ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೈಜೋಡಿಸಬೇಕೆಂದು ಕಿವಿಮಾತು ಹೇಳಿದರು.

         ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ಮಹಿಳೆಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವಲಸೆ ಹೋದ ಜನರ ಮತದಾನ ಪ್ರಮಾಣ ಹೆಚ್ಚಿಸುವುದು ನಮ್ಮೆಲ್ಲರ ಗುರಿ ಎಂದು ತಿಳಿಸಿದರು.