ಚಳ್ಳಕೆರೆ
ಸದಾಕಾಲ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಹಿತವನ್ನು ಕಾಪಾಡುವ ಗೃಹ ರಕ್ಷಕ ದಳ ಪ್ರತಿಯೊಬ್ಬ ಮತದಾರರು ದೇಶದ ಹಿತದೃಷ್ಠಿಯಿಂದ ಮತ ಚಲಾವಣೆ ಮಾಡುವಂತೆ ಎಲ್ಲಾ ಮತದಾರಿಗೆ ಪ್ರೇರಣೆ ನೀಡಬೇಕು. ನಿಮ್ಮ ಕರ್ತವ್ಯದ ಜೊತೆಯಲ್ಲಿ ದೇಶದ ಆಡಳಿತಕ್ಕೆ ಸಹಾಯಕವಾಗುವ ಉತ್ತಮ ವ್ಯಕ್ತಿಗಳ ಆಯ್ಕೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಟ್ ಸಿ.ಕೆ.ಸಂಧ್ಯಾ ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ತಾಲ್ಲೂಕು ಗೃಹ ರಕ್ಷಕ ದಳದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಗೃಹ ರಕ್ಷಕ ದಳ ತನ್ನದೇಯಾದ ಹಲವಾರು ಪ್ರಮುಖ ಕರ್ತವ್ಯಗಳ ನಡುವೆ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗಿದೆ. ಪ್ರತಿಯೊಬ್ಬ ಮತದಾರ ತನ್ನ ಕರ್ತವ್ಯವನ್ನು ಪಾಲಿಸುವ ನಿಟ್ಟಿನಲ್ಲಿ ಯಶಸ್ಸು ಕಾಣಬೇಕಿದೆ. ಹಾಗಾಗಿ ಮತದಾನ ಜಾಗೃತಿ ಕಾರ್ಯಕ್ರಮ ಹೆಚ್ಚು ಮತದಾನವಾಗಲು ಸಹಕಾರಿಯಾಗುತ್ತದೆ ಎಂದರು.
ತಾಲ್ಲೂಕು ಘಟಕಾಧಿಕಾರಿ ಡಾ.ಎಸ್.ಡಿ.ಲೋಕೇಶ್ ಮಾತನಾಡಿ, ಪ್ರಸ್ತುತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ರಕ್ಷಕ ದಳದ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಇದೊಂದು ಉತ್ತಮ ಕಾರ್ಯವಾಗಿದೆ. ಮತದಾನ ನಮ್ಮ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ಸಾಧನವಾಗಿದೆ. ಗೃಹ ರಕ್ಷಕ ದಳದ ಎಲ್ಲಾ ಸಿಬ್ಬಂದಿ ಈ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತದಾರರಿಗ ಮತದಾನ ಮಾಡುವಂತೆ ಮನವಿ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬೋಧಕರಾದ ಜಿ.ಎಚ್.ಲೋಕೇಶ್, ಪ್ಲಟೂನ್ ಕಮಾಂಡರ್ ಜಗನ್ನಾಥ, ಪಿ.ಭೀಮರಾಜ, ಕೆ.ಅಜ್ಜಪ್ಪ, ಎನ್.ಡಿ.ಸತೀಶ್, ಎಚ್.ರಮೇಶ್, ಜಗದೀಶ್, ಎನ್.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಜಾಗೃತಿ ಮೂಡಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
