ಜಿಲ್ಲೆಯಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆ ಆರಂಭವಾಗಿದೆ: ಡಾ.ಕೆ.ರಾಕೇಶ್‍ಕುಮಾರ್

ತುಮಕೂರು

    ಜಿಲ್ಲೆಯಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು,ಕಂದಾಯ ಇಲಾಖೆಯ ಅಧಿಕಾರಿಗಳು ಅತ್ಯಂತ ಮುತ್ತುವರ್ಜಿ ವಹಿಸಿ, ದೋಷರಹಿತ ಮತದಾರರ ಪಟ್ಟಿ ತಯಾರು ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಸೂಚನೆ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು 2019ನೇ ವರ್ಷದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಆರ್ಹರು ಮತದಾನದಿಂದ ವಂಚಿತರಾಗದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು.ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‍ಓ) ಕಳುಹಿಸುವ ಪ್ರತಿವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ತದನಂತರ ಪಟ್ಟಿ ತಯಾರಿಸುವಂತೆ ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರಿಗೆ ಎಚ್ಚರಿಕೆ ನೀಡಿದರು.

    ಜಿಲ್ಲೆಯಾದ್ಯಂತ ಸೆಪ್ಟಂಬರ್ 01 ರಿಂದ ಅಕ್ಟೋಬರ್ 30ರವರೆಗೆ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು,ಈ ವೇಳೆ ಜಿಲ್ಲೆಯ ಪ್ರತಿ ಮತದಾರರ ಮನೆಗೂ ಬಿಎಲ್‍ಓಗಳು ಹೋಗಿ,ಹಾಲಿ ಇರುವ ಮತದಾರರ ಪಟ್ಟಿ ಸರಿಯಿದೆಯೇ,ಇಲ್ಲವೇ ಎಂಬುದನ್ನು ಪರಿಶೀಲಿಸಿ,ಒಂದು ವೇಳೆ ಮತದಾರರು ಬದಲಾಗಿದ್ದರೆ,ಅವರಿಗೆ ಖುದ್ದಾಗಿ ನೊಟೀಷ್ ಜಾರಿ ಮಾಡಿ ಅವರಿಂದ ವಿವರಣೆ ಪಡೆದುಕೊಳ್ಳಬೇಕು.

     ಒಂದು ವೇಳೆ ಬೇರೆ ಕಡೆಗೆ ಬದಲಾಗಿದ್ದರೆ ಅಕ್ಕಪಕ್ಕದ ಮನೆಯವರ ಎದುರು ಅವರಿದ್ದ ಮನೆಗೆ ನೊಟೀಷ್ ಅಂಟಿಸಿ, ಅದನ್ನು ವಿಡಿಯೋ ಮಾಡಿ ವರದಿ ಸಲ್ಲಿಸಬೇಕು.ಈ ಎಲ್ಲಾ ಪ್ರಕ್ರಿಯೆಗಳ ನಂತರವೇ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

    ಸಮಗ್ರ ಮತದಾರರ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಆಕ್ಟೋಬರ್ 01ಕ್ಕೆ 18 ವರ್ಷ ತುಂಬುವ ಪ್ರತಿ ವ್ಯಕ್ತಿಯೂ ಮತದಾರರ ಪಟ್ಟಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ.ತೆಗೆದು ಹಾಕುವುದು, ಇದರ ಜೊತೆಗೆ ಹಾಲಿ ಮತದಾರರು ತಮ್ಮ ಗುರುತಿನ ಚೀಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು, ಮತಗಟ್ಟೆ ಬದಲಾವಣೆಗೆ ಅವಕಾಶವಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಜೊತೆಗೆ, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್, ಅಟಲ್ ಜನಸ್ನೇಹ ಕೇಂದ್ರ, ಮತಗಟ್ಟೆ ಅಧಿಕಾರಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಿಗಧಿತ ಅರ್ಜಿ ನಮೂನೆ ಪಡೆದು ಪರಿಷ್ಕರಣೆ ಮಾಡಬಹುದಾಗಿದೆ.ಈ ವಿಷಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

     ಮುಂದಿನ ವರ್ಷದ ಫೆಬ್ರವರಿಯಲ್ಲಿ ಗ್ರಾಮಪಂಚಾಯಿತಿ ಚುನಾವಣೆ ಬರುವ ಸಾಧ್ಯತೆಯಿದೆ.ಆ ಸಂದರ್ಭದಲ್ಲಿ ಈ ವರ್ಷದ ಅಕ್ಟೋಬರ್ ನಲ್ಲಿ ಪ್ರಕಟಿಸುವ ಕರಡು ಮತದಾರರ ಪಟ್ಟಿಯೇ ಚಲಾವಣೆಗೆ ಬರಲಿದೆ.ಆದ್ದರಿಂದ ಈ ಬಾರಿ ಅತಿ ಎಚ್ಚರಿಕೆಯಿಂದ ಮತದಾರರ ಪಟ್ಟಿ ತಯಾರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು,ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ ಇನ್ನಿತರ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ, ಮತದಾನದಿಂದ ವಂಚಿತರಾದರು.ಈ ಬಾರಿ ಹಾಗಾದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

    ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ.18 ವರ್ಷ ತುಂಬಿದ ಪ್ರತಿ ವ್ಯಕ್ತಿಯೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ, ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.ಈ ನಿಟ್ಟಿನಲ್ಲಿ ಮತದಾನ ಸಾಕ್ಷರತಾ ಸಮಿತಿ ವತಿಯಿಂದ ಸಾಕಷ್ಟು ತಿಳುವಳಿಕೆ ನೀಡುವ ಕೆಲಸವನ್ನು ಸ್ವಿಪ್ ಕಮಿಟಿ ಮಾಡಲಿದೆ. ಒಟ್ಟಾರೆ ಆರ್ಹರು ಮತದಾನದಿಂದ ವಂಚಿತರಾಗದಂತೆ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಕೇಶಕುಮಾರ್ ತಿಳಿಸಿದರು.

    ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯೋಗಾನಂದ್, ಚುನಾವಣಾ ತಹಶೀಲ್ದಾರ್ ನಾಗಭೂಷಣ್, ನರಸಿಂಹರಾಜು, ಶಿರಸ್ತೆದಾರ್ ಜಯಪ್ರಕಾಶ್, ಆರ್.ಐ ಶಿವಣ್ಣ, ಗ್ರಾಮಲೆಕ್ಕಿಗರಾದ ಮರುಳೀಧರ್, ಶ್ರೀನಿವಾಸ್, ಸ್ವಿಪ್ ಕಮಿಟಿ ಸದಸ್ಯರಾದ ಚಂದ್ರಶೇಖರ್, ಶ್ರೀನಿವಾಸ್, ಮೂರ್ತಿ ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link