ಮತದಾರರ ನೊಂದಣಿ ಮತಗಟ್ಟೆ ಪರಿಶೀಲಿಸಲು ಸೂಚನೆ

ಚಿತ್ರದುರ್ಗ :
    ಜಿಲ್ಲೆಯಲ್ಲಿ ಜರುಗಿದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮತದಾರರ ಸಂಖ್ಯೆ ನೊಂದಣಿ ಹಾಗೂ ಅತಿ ಕಡಿಮೆ ನೊಂದಣಿಯಾಗಿರುವ ಮತಗಟ್ಟೆಗಳ ವಾಸ್ತವ ಸ್ಥಿತಿ-ಗತಿ ಪರಿಶೀಲಿಸಿ, ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಅಧಿಕಾರಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಮಹೇಶ್ವರ ರಾವ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
 
    ಜಿಲ್ಲೆಯಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಕಳೆದ ಡಿ. 16 ರಿಂದ ಜ. 15 ರವರೆಗೂ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮದಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೆ 20731 ಅರ್ಜಿ, ಹೆಸರು ತೆಗೆದುಹಾಕಲು-8751, ತಿದ್ದುಪಡಿ-6488, ಕ್ಷೇತ್ರ ವ್ಯಾಪ್ತಿಯೊಳಗೆ ಸ್ಥಳಾಂತರಕ್ಕಾಗಿ 1139 ಅರ್ಜಿ ಸೇರಿದಂತೆ ಒಟ್ಟು 37109 ಅರ್ಜಿಗಳು ಸ್ವೀಕೃತಗೊಂಡಿವೆ.
    ಕೆಲವು ಮತಗಟ್ಟೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೊಂದಣಿ ಅಥವಾ ಅತಿ ಕಡಿಮೆ ನೊಂದಣಿ, ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದು ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಾಸ್ತವತೆಯನ್ನು ಅರಿಯುವುದು ಬಹು ಮುಖ್ಯವಾಗಿದೆ.  ಅತಿ ಹೆಚ್ಚು ಸೇರ್ಪಡೆ ಅಥವಾ ತೆಗೆದುಹಾಕಿರುವುದಕ್ಕೆ ಸಂಬಂಧಿಸಿದಂತೆ ಕಾರಣ ತಿಳಿದುಕೊಳ್ಳಬೇಕಾಗುತ್ತದೆ.  ಹೀಗಾಗಿ ಇಂತಹ ಮತಗಟ್ಟೆಗಳಲ್ಲಿನ ವಾಸ್ತವಾಂಶಗಳನ್ನು ಸಂಬಂಧಪಟ್ಟ ತಹಸಿಲ್ದಾರರು, ಉಪವಿಭಾಗಾಧಿಕಾರಿಗಳು ಖುದ್ದು ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು.  ಜಿಲ್ಲಾಧಿಕಾರಿಗಳು ವರದಿಯನ್ನು ಪರಿಶೀಲಿಸಿ, ಮುಂದಿನ ಸಭೆಯ ಸಂದರ್ಭದಲ್ಲಿ ಮಂಡಿಸಬೇಕು ಎಂದು ಮಹೇಶ್ವರರಾವ್ ಅವರು ಸೂಚನೆ ನೀಡಿದರು.
ದಾಖಲೆ ಪರಿಶೀಲಿಸಿ : 
     ಮರಣ ಕಾರಣದಿಂದ ಹೆಸರು ತೆಗೆದುಹಾಕುವಾಗ, ಸಂಬಂಧಪಟ್ಟ ಮತದಾರರ ಮರಣಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದ ಬಳಿಕವೇ ಪಟ್ಟಿಯಿಂದ ಹೆಸರು ತೆಗೆದುಹಾಕಬೇಕು.  22 ವರ್ಷ ವಯಸ್ಸು ಮೇಲ್ಪಟ್ಟವರು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹವರ ಹೆಸರು ಸೇರ್ಪಡೆಗೂ ಮುನ್ನ, ಆ ಮತದಾರ ಈ ಹಿಂದೆ ಎಲ್ಲಿ ನೊಂದಣಿ ಮಾಡಿಸಿದ್ದರು, ಅಲ್ಲಿ ಹೆಸರು ತೆಗೆದುಹಾಕಲು ನಮೂನೆ-7 ಅರ್ಜಿ ಸಲ್ಲಿಸಿದ ಕುರಿತ ಸ್ವೀಕೃತಿ ಪತ್ರ, ಸ್ಥಳಾಂತರ ಆಗಿದ್ದಲ್ಲಿ ಮಾಹಿತಿ, ಒಂದು ವೇಳೆ ಎಲ್ಲಿಯೂ ನೊಂದಣಿ ಮಾಡಿಸದಿದ್ದಲ್ಲಿ ಕಾರಣ, ಇಂತಹ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ನೊಂದಣಿ ಅರ್ಜಿಯನ್ನು ಪರಿಗಣಿಸಬೇಕು ಎಂದು ಮಹೇಶ್ವರರಾವ್ ನಿರ್ದೇಶನ ನೀಡಿದರು.
7845 ಯುವ ಮತದಾರರ ಅರ್ಜಿ :
    ಜಿಲ್ಲೆಯಲ್ಲಿ ಜರುಗಿದ ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ 18 ರಿಂದ 19 ವರ್ಷದೊಳಗಿನ ಒಟ್ಟು 7845 ಯುವ ಜನತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ.  ಮೊಳಕಾಲ್ಮೂರು-1092, ಚಳ್ಳಕೆರೆ-1206, ಚಿತ್ರದುರ್ಗ-1692, ಹಿರಿಯೂರು-860, ಹೊಸದುರ್ಗ-733, ಹೊಳಲ್ಕೆರೆ-2262 ಅರ್ಜಿ ಸಲ್ಲಿಕೆಯಾಗಿವೆ. 
  ಪ್ರತಿ ವರ್ಷ ಲಭ್ಯವಾಗಬಹುದಾದ ಯುವಜನರ ಸಂಖ್ಯೆಯನ್ನು ಪರಿಗಣಿಸಿದಾಗ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಅರ್ಜಿ ಸಲ್ಲಿಸುವ ನಿರೀಕ್ಷೆ ಇತ್ತು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸಭೆಗೆ ಮಾಹಿತಿ ನೀಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಭಾಮ ಅವರು ಮಾತನಾಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಿಂಚಿನ ನೊಂದಣಿ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿತ್ತು. 
 
  ಹಲವು ಗ್ರಾಮಗಳಲ್ಲಿ ಪ್ರಭಾತಪೇರಿ ಕಾರ್ಯಕ್ರಮ, ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಮೂಲಕ ಜಾಗೃತಿ ಮೂಡಿಸುವ ಮೂಲಕ ಸ್ವೀಪ್ ಕಾರ್ಯಕ್ರಮ ಆಯೋಜಿಸಲಾಯಿತು.  ಈ ಅವಧಿಯಲ್ಲಿ ಒಟ್ಟು 14142 ಅರ್ಜಿಗಳು ಸ್ವೀಕೃತಗೊಂಡಿವೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ವರರಾವ್ ಅವರು, ಯುವ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಇನ್ನಷ್ಟು ವ್ಯಾಪಕ ಕಾರ್ಯಕ್ರಮಗಳನ್ನು ಮತ್ತೊಮ್ಮೆ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
ಕನ್ನಡ ತಂತ್ರಾಂಶ ಸಮಸ್ಯೆ ಪರಿಹಾರಕ್ಕೆ ಕ್ರಮ : 
    ಜಿಲ್ಲೆಯಲ್ಲಿ ಈ ಬಾರಿ ಆನ್‍ಲೈನ್ ನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕೇವಲ 372 ಅರ್ಜಿಗಳು, ತೆಗೆದುಹಾಕಲು-27, ತಿದ್ದುಪಡಿ-623, ಸ್ಥಳಾಂತರಕ್ಕೆ 34 ಸೇರಿದಂತೆ ಒಟ್ಟು 1056 ಅರ್ಜಿಗಳು ಸಲ್ಲಿಕೆಯಾಗಿವೆ.  ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ವಿವರಗಳನ್ನು ನಮೂದಿಸಲು ಸಾಫ್ಟ್‍ವೇರ್‍ನಲ್ಲಿ ಸಮಸ್ಯೆಯಾಗುತ್ತಿದೆ ಎಂಬುದಾಗಿ ದೂರುಗಳು ಕೇಳಿಬರುತ್ತಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ಇದಕ್ಕೆ ಸ್ಪಂದಿಸಿದ ಮಹೇಶ್ವರರಾವ್ ಅವರು, ಆನ್‍ಲೈನ್‍ನಲ್ಲಿ ಕನ್ನಡ ಭಾಷೆಯಲ್ಲಿ ಅರ್ಜಿ ಭರ್ತಿ ಮಾಡಲು ಇರುವ ತೊಂದರೆ ನಿವಾರಣೆಗೆ ಸಾಫ್ಟ್‍ವೇರ್ ಸುಧಾರಿಸುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸಲಹೆ ನೀಡಿದರು.
1343207 ಮತದಾರರು : 
    ಜಿಲ್ಲೆಯಲ್ಲಿ ಸದ್ಯ 1343207 ಮತದಾರರರಿದ್ದು, 1648 ಮತಗಟ್ಟೆಗಳಿವೆ.  ಪುರುಷ-675771, ಮಹಿಳೆ-667348 ಹಾಗೂ ಇತರೆ-88 ಮತದಾರರಿದ್ದಾರೆ.  ಹೊಸದಾಗಿ ಸಲ್ಲಿಸಲಾಗಿರುವ 20731 ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಈಗಾಗಲೆ ಡಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾಹಿತಿ ನೀಡಿದರು.
ಪ್ರತಿಜ್ಞಾ ವಿಧಿ ಸ್ವೀಕಾರ :
     ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಮತದಾರರ ಪ್ರತಿಜ್ಞಾ ವಿಧಿ ಭೋದಿಸಿದರು.  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಅಧಿಕಾರಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಮಹೇಶ್ವರ ರಾವ್, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಮತದಾರರ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಸ್ವೀಕರಿಸಿದರು.
     ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು, ಚುನಾವಣಾ ವಿಭಾಗದ ಸಂತೋಷ್ ಸೇರಿದಂತೆ ತಹಸಿಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap