ಕಡ್ಡಾಯವಾಗಿ ಮತದಾನ ಮಾಡುವಂತೆ ಹಿರಿಯ ನಾಗರಿಕರಿಗೆ ಕರೆ

ದಾವಣಗೆರೆ

         18 ವರ್ಷ ಮೇಲ್ಪಟ್ಟ ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ಚುನಾವಣೆಗಳಲ್ಲಿ ಮತದಾನವನ್ನು ಮಾಡದಿದ್ದರೆ ದೇಶಕ್ಕೆ ದ್ರೋಹ ಮಾಡಿದಂತೆ ಆದ್ದರಿಂದ ಅರ್ಹ ಎಲ್ಲಾ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಶಶಿಧರ್ ಹಿರಿಯ ನಾಗರಿಕರಿಗೆ ಕರೆ ನೀಡಿದರು.

       ಬುಧವಾರ ನಗರದ ಸರ್ಕಾರಿ ನಿವೃತ್ತ ನೌಕರ ಭವನದಲ್ಲಿ ಸ್ವೀಪ್ ಕಾರ್ಯಕ್ರಮದಡಿ ಹಿರಿಯ ನಾಗರಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಮಹತ್ವ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ, ಅಶಕ್ತರಿಗೆ, ವಿಕಲಚೇತನರಿಗಾಗಿ ಎಲ್ಲಾ ಮತಗಟ್ಟೆಗಳಲ್ಲಿ ವೀಲ್ಹ್‍ಚೇರ್ ವ್ಯವಸ್ಥೆ ಮಾಡಲಾಗಿದೆ. ದುರ್ಬಲ ಮತಗಟ್ಟೆಗಳಿಗೆ ಪ್ಯಾಸೆಂಜರ್ ಆಟೋ ವ್ಯವಸ್ಥೆ ಕಲ್ಪಿಸಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲಾಗುವುದು. ಈ ಬಾರಿ ಜಿಲ್ಲೆಯಾದ್ಯಂತ ಹೆಚ್ಚಿನ ಮತದಾನವಾಗುವಂತೆ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

           ಅಂತಾರಾಷ್ರ್ಟೀಯ ಕ್ರೀಡಾಪಟು ಹಾಗೂ ಜಿಲ್ಲೆಯ ಚುನಾವಣಾ ಐಕಾನ್ ಆದ ಥಾಮಸ್ ವಿಜಯ್ ಮಾತನಾಡಿ, ಮತದಾರರು ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೇ 18 ವರ್ಷ ಮೇಲ್ಪಟ್ಟ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.

          ಜಿಲ್ಲಾ ಸರ್ಕಾರಿ ನಿವೃತ್ತ ನೌಕರ ಸಂಘದ ಅಧ್ಯಕ್ಷ ಜಿ.ಎನ್ ಷಣ್ಮುಖಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ನಾಗರಿಕರಿಗೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.ಈ ವೇಳೆ ರಾಜ್ಯ ಸರ್ಕಾರಿ ನಿವೃತ್ತ ನೌಕರ ಸಂಘದ ಉಪಾಧ್ಯಕ್ಷ ಗುರುಮೂರ್ತಿ, ಚುನಾವಣಾ ಸೆಕ್ಟರ್ ಅಧಿಕಾರಿ ಸತೀಶ್‍ನಾಯ್ಕ್ ಸೇರಿದಂತೆ ಸರ್ಕಾರಿ ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link